
ಚಿಕ್ಕಬಳ್ಳಾಪುರ: ‘ಈ ಬಾರಿಯ ಬಜೆಟ್‌ನಲ್ಲಿ ನಿಮ್ಮ ನಿರೀಕ್ಷೆಗಳೇನು’–ಹೀಗೊಂದು ಪ್ರಶ್ನೆಯನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಗರಿಕರ ಮುಂದಿಟ್ಟರೆ ಬಹುತೇಕ ಮಂದಿಯ ಉತ್ತರ, ನೀರಾವರಿ.
ದಶಕಗಳಿಂದ ಚಿಕ್ಕಬಳ್ಳಾಪುರದ ಜನರು ನೀರಿಗಾಗಿ ಹೋರಾಡುತ್ತಲೇ ಇದ್ದಾರೆ. ಹೀಗಿದ್ದರೂ ಜನರಿಗೆ ಉತ್ತಮವಾದ ನೀರು ದೊರೆತಿಲ್ಲ. ವಿಶೇಷವಾಗಿ ಈ ಭಾಗದ ನೀರಾವರಿ ಯೋಜನೆ ಎಂದೇ ಜನಜನಿತವಾಗಿರುವ ಎತ್ತಿನಹೊಳೆ ಯೋಜನೆಯ ಬಗ್ಗೆ ಅಪಾರವಾದ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದರೆ ಯೋಜನೆಗೆ ಅಡಿಗಲ್ಲು ಬಿದ್ದು ಒಂದು ದಶಕ ಕಳೆದರೂ ಚಿಕ್ಕಬಳ್ಳಾಪುರದತ್ತ ಎತ್ತಿನಹೊಳೆ ಹರಿಸಲು ಸಾಧ್ಯವಾಗಿಲ್ಲ.
2027ರ ವೇಳೆಗೆ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬರಲಿದೆ ಎಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಂ.ಸಿ.ಸುಧಾಕರ್, ಕೃಷ್ಣಬೈರೇಗೌಡ ಪ್ರತಿಪಾದಿಸುತ್ತಿದ್ದಾರೆ. ಈ ಎಲ್ಲ ಲೆಕ್ಕಾಚಾರದಲ್ಲಿ ಈ ಬಾರಿ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದ ಜನರು ಅಪಾರ ಅನುದಾನದ ನಿರೀಕ್ಷೆ ಹೊಂದಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಗೆ ಹಣ ದೊರೆಯಲಿದೆ. ನೀರು ಬರಲಿದೆ ಎನ್ನುವ ನಿರೀಕ್ಷೆಗಳು ಅಪಾರವಾಗಿವೆ.
ಮತ್ತೊಂದೆಡೆ ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಚಿಕ್ಕಬಳ್ಳಾಪುರದ ಕೆರೆಗಳಿಗೆ ಎಚ್.ಎನ್.ವ್ಯಾಲಿ ಯೋಜನೆಯಡಿ ಹರಿಸಲಾಗುತ್ತಿದೆ. ಈ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಬೇಕು ಎನ್ನುವ ಆಗ್ರಹವಿದೆ. ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮೀಸಲಿಡಬೇಕು ಎನ್ನುವ ಕೂಗು ಬಲವಾಗಿ ಎದ್ದಿದೆ. ಹೀಗೆ ನೀರಾವರಿ ವಿಚಾರವೇ ಈ ಬಾರಿಯ ಬಜೆಟ್ ವೇಳೆ ಪ್ರಮುಖವಾಗಿ ಪ್ರತಿಧ್ವನಿಸುತ್ತಿದೆ.
ಹೈಟೆಕ್ ಹೂ ಮಾರುಕಟ್ಟೆ, ಕೃಷಿ ಸಂಬಂಧಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿದ ಕೈಗಾರಿಕೆಗಳ ಸ್ಥಾಪನೆ, ನಂದಿಬೆಟ್ಟ ಅಭಿವೃದ್ಧಿ, ನಂದಿ ಅಭಿವೃದ್ಧಿ ಪ್ರಾಧಿಕಾರದ ರಚನೆ–ಹೀಗೆ ಹಲವು ವಿಚಾರಗಳ ಬಗ್ಗೆ 2026ರ ರಾಜ್ಯ ಬಜೆಟ್ ಮೇಲೆ ಚಿಕ್ಕಬಳ್ಳಾಪುರ ಜನರು ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ 2023ರ ಜುಲೈನಲ್ಲಿ ಮತ್ತು 2024ರ ಫೆಬ್ರುವರಿಯಲ್ಲಿ ಮತ್ತು 2025ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಯಾವುದೇ ಪ್ರಮುಖ ಯೋಜನೆಗಳ ಪ್ರಸ್ತಾಪ ಇರಲಿಲ್ಲ.
ಈಗ ಮತ್ತೆ ಬಜೆಟ್ ಮಂಡನೆಯ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ‘ಚಿಕ್ಕಬಳ್ಳಾಪುರಕ್ಕೆ ಏನು ಕೊಡುವರು’ ಎನ್ನುವ ನಿರೀಕ್ಷೆ ಜನರದ್ದಾಗಿದೆ. ಬಜೆಟ್ ಮೇಲೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರು ಅಪಾರ ನಿರೀಕ್ಷೆಗಳನ್ನೇ ಹೊಂದಿದ್ದಾರೆ.
ನಂದಿಕ್ರಾಸ್‌ನ ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಜಮೀನು ಮೀಸಲಿಡಲಾಗಿದೆ. ಈ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ ಅಗತ್ಯವಾಗಿದೆ.
ಜಿಲ್ಲಾ ಕೇಂದ್ರದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ ಅಧ್ವಾನ ಎನ್ನುವಂತಿದೆ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು ಅಭಿವೃದ್ಧಿಗೊಳಿಸಬೇಕು ಎಂದು ಕ್ರೀಡಾಪಟುಗಳು ಕ್ರೀಡಾ ಸಚಿವರಿಗೆ ಮನವಿಗಳನ್ನು ಮಾಡಿದರೂ ಪ್ರಯೋಜನವಾಗಿಲ್ಲ.
ಐತಿಹಾಸಿಕ ನಂದಿಗಿರಿಧಾಮ ಮತ್ತು ಭೋಗ ನಂದೀಶ್ವರ ದೇಗುಲವನ್ನು ಒಳಗೊಂಡಂತೆ ನಂದಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎನ್ನುವ ಪ್ರವಾಸಿಗರು ಮತ್ತು ಭಕ್ತರ ಆಗ್ರಹ ಇಂದಿಗೂ ಈಡೇರಿಲ್ಲ. ಹೀಗೆ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಅಭಿವೃದ್ಧಿ ವಿಚಾರವಾಗಿ ಜನರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ನಿರೀಕ್ಷೆಗಳಿಗೆ ಸಿದ್ದರಾಮಯ್ಯ ಅವರ ಬಜೆಟ್ ಬಲ ನೀಡುತ್ತದೆಯೇ ಇಲ್ಲವೇ ಎನ್ನುವ ಕುತೂಹಲವೂ ನಾಗರಿಕರಲ್ಲಿ ಇದೆ.
ಕೈಗಾರಿಕೀಕರಣ; ಶಾಪಗ್ರಸ್ತ ರಾಜಧಾನಿ ಬೆಂಗಳೂರಿಗೆ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿಕ್ಕಬಳ್ಳಾಪುರ ಸಮೀಪವಿದ್ದರೂ ಕೈಗಾರಿಕೀಕರಣದ ಅಭಿವೃದ್ಧಿಯಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೀಕರಣದ ಪರ್ವ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮತ್ತು ಸ್ಥಾಪನೆಗೆ ಸರ್ಕಾರ ಮುಂದಾಗಿದೆ. 7856.37 ಎಕರೆ ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 2278.10 ಎಕರೆಯನ್ನು ಕರ್ನಾಟಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಭೂ ಮಾಲೀಕರಿಗೆ ಪರಿಹಾರ ವಿತರಣೆ ಸಹ ಪ್ರಗತಿಯಲ್ಲಿದೆ. ಹೀಗೆ ಅಂತಿಮ ಅಧಿಸೂಚನೆ ಮತ್ತು ಪ್ರಾಥಮಿಕ ಅಧಿಸೂಚನೆ ಸೇರಿ ಜಿಲ್ಲೆಯಲ್ಲಿ 10134 ಎಕರೆಯು ಕೈಗಾರಿಕೀಕರಣದ ಹಂತದಲ್ಲಿ ಇವೆ. ಹೀಗೆ ಜಿಲ್ಲೆಯ ಚಿಂತಾಮಣಿ ಶಿಡ್ಲಘಟ್ಟ ಗೌರಿಬಿದನೂರು ಮತ್ತು ಬಾಗೇಪಲ್ಲಿಯಲ್ಲಿ ಕೈಗಾರಿಕೀಕರಣಕ್ಕೆ ವೇಗ ದೊರೆತಿದ್ದರೆ ಚಿಕ್ಕಬಳ್ಳಾಪುರ ಮಾತ್ರ ಕೈಗಾರಿಕೀಕರಣದ ವಿಚಾರವಾಗಿ ಶಾಪಗ್ರಸ್ತವಾಗಿದೆ. ಜನರು ಕೈಗಾರಿಕಾ ಟೌನ್‌ಶಿಪ್ ಎದುರು ನೋಡುತ್ತಿದ್ದಾರೆ. ಕೃಷಿ ಪ್ರಧಾನವಾಗಿರುವ ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ನಿರ್ಮಿಸಬೇಕು ಎನ್ನುವ ಆಗ್ರಹ ರೈತರದ್ದಾಗಿದೆ.
ಸ್ವಾಗತ ಕಮಾನು ಸ್ಥಾಪಿಸಬೇಕು ನಗರೋತ್ಥಾನ ಯೋಜನೆಯಡಿ ಚಿಕ್ಕಬಳ್ಳಾಪುರ ನಗರದ ನಾಲ್ಕು ಕಡೆ ಸ್ವಾಗತ ಕಮಾನು ನಿರ್ಮಿಸಬೇಕು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಡಾ.ಕೆ.ಸುಧಾಕರ್ ಅವರ ಪ್ರಯತ್ನದ ಫಲವಾಗಿದೆ ಎಚ್.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಲು ಮುಂದಾಗಿತ್ತು. ಆದರೆ ಆ ನಂತರ ಈ ಯೋಜನೆ ಜಾರಿಯಾಗಲೇ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ನಿರೀಕ್ಷೆಗಳು ಇವೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಹೂ ಬೆಳೆಯುವ ತಾಲ್ಲೂಕುಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಆದ್ದರಿಂದ ಇಲ್ಲಿ ಹೈಟೆಕ್ ಹೂ ಮಾರುಕಟ್ಟೆ ನಿರ್ಮಿಸಬೇಕು.ಡಿ.ಎಸ್.ಆನಂದಬಾಬು ರೆಡ್ಡಿ ನಗರಸಭೆ ಮಾಜಿ ಅಧ್ಯಕ್ಷ
ಕ್ರೀಡಾಂಗಣಕ್ಕೆ ಸೌಲಭ್ಯ ಕಲ್ಪಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಕ್ರೀಡಾಂಗಣ ಅಭಿವೃದ್ಧಿ ಆಗಬೇಕು. ಅಂತರಾಷ್ಟ್ರೀಯ ಮಟ್ಟದ ವ್ಯವಸ್ಥೆಗಳು ಕಲ್ಪಿಸದಿದ್ದರೂ ಪರವಾಗಿಲ್ಲ ಇತರ ಜಿಲ್ಲೆಗಳಲ್ಲಿ ಇರುವ ಕನಿಷ್ಠ ಮಟ್ಟದ ಕ್ರೀಡಾಂಗಣ ಅಗತ್ಯವಾಗಿದೆ. ಹೂ ಮಾರುಕಟ್ಟೆ ಅತ್ಯಗತ್ಯವಾಗಿದೆ. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ವೇಗ ದೊರೆಯಬೇಕು. ಕೆ.ಸಿ ವ್ಯಾಲಿ ಎಚ್.ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ಧೀಕರಣವಾಗಬೇಕು. ಕೈಗಾರಿಕಾ ವಲಯಗಳ ಸ್ಥಾಪನೆ ಆಮೆಗತಿಯಲ್ಲಿದೆ. ಕೈಗಾರಿಕೆಗಳ ಅಭಿವೃದ್ಧಿ ಮೂಲಕ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮಭೂಮಿಗೆ ನ್ಯಾಯ ದೊರಕಿಸಿಕೊಡಬೇಕು.ಶಾಲಿನಿ ಆರ್. ಎಚ್.ಎಸ್ ಗಾರ್ಡನ್ ಚಿಕ್ಕಬಳ್ಳಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.