ADVERTISEMENT

ಚಿಕ್ಕಬಳ್ಳಾಪುರ: 5,769 ಅನಕ್ಷರಸ್ಥರಿಗೆ ‘ಸಾಕ್ಷರತೆ ದೀಕ್ಷೆ’ ಗುರಿ

ಡಿ.ಎಂ.ಕುರ್ಕೆ ಪ್ರಶಾಂತ
Published 4 ಸೆಪ್ಟೆಂಬರ್ 2025, 6:59 IST
Last Updated 4 ಸೆಪ್ಟೆಂಬರ್ 2025, 6:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ಎ.ಐ ಚಿತ್ರ) 

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 2030ರ ವೇಳೆಗೆ ಅನಕ್ಷರತೆಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಎನ್ನುವುದು ಸರ್ಕಾರದ ಗುರಿ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಗೆ ಇಂತಿಷ್ಟು ಪ್ರಮಾಣದಲ್ಲಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಬೇಕು ಎಂದು ಸರ್ಕಾರ ಗುರಿ ನಿಗದಿ ಮಾಡುತ್ತದೆ.

ADVERTISEMENT

ಆ ಪ್ರಕಾರ ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ 14 ಗ್ರಾಮ ಪಂಚಾಯಿತಿಗಳ 5,769 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ ನಿಗದಿಯಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ನಾರೆಮದ್ದೇಪಲ್ಲಿ, ಮಿಟ್ಟೇಮರಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ, ಹಾರೋಬಂಡೆ, ಚಿಂತಾಮಣಿ ತಾಲ್ಲೂಕಿನ ಮುರುಗಮಲೆ, ನಂದಿಗಾನಹಳ್ಳಿ, ಪೆದ್ದೂರು, ಊಲವಾಡಿ, ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ, ಕಲ್ಲಿನಾಯಕನಹಳ್ಳಿ, ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ, ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ, ದಿಬ್ಬೂರಹಳ್ಳಿ, ಜಂಗಮಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5,769 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ ವಯಸ್ಕರ ಶಿಕ್ಷಣ ಇಲಾಖೆಯದ್ದಾಗಿದೆ.

ವಯಸ್ಕರ ಶಿಕ್ಷಣ ಇಲಾಖೆ 20 ಅಭ್ಯರ್ಥಿಗಳಿಗೆ ಒಬ್ಬರು ಶಿಕ್ಷಕರನ್ನು ನೇಮಿಸಿದೆ. ಜಿಲ್ಲೆಯಲ್ಲಿ 292 ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 292 ಬೋಧಕರನ್ನು ನೇಮಿಸಲಾಗಿದೆ. ಪ್ರತಿ ವರ್ಷವೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಗೆ ಇಂತಹ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇಂತಿಷ್ಟು ಮಂದಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಬೇಕು ಎನ್ನುವ ಗುರಿ ನಿಗದಿಗೊಳಿಸಲಾಗುತ್ತಿದೆ. ಈ ಹಿಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಕ್ರಮವಾಗಿ 11,282 ಮತ್ತು 16 ಸಾವಿರ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಬೇಕು ಎಂದು ಗುರಿ ನಿಗದಿಗೊಳಿಸಲಾಗಿತ್ತು.

ಹಂತ ಹಂತವಾಗಿ ಅಕ್ಷರದ ಬೆಳಕಿಗೆ: ಓದು, ಬರಹ ಬಾರದ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಸರ್ಕಾರವು ಹಲವು ಸಾಕ್ಷರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2011ರ ಜನಗಣತಿಯ ಪ್ರಕಾರ 1,83,202 ಪುರುಷರು ಮತ್ತು 2,38,086 ಮಹಿಳೆಯರು ಸೇರಿದಂತೆ 4,21,288 ಮಂದಿ ಅನಕ್ಷರಸ್ಥರು ಇದ್ದರು. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ 3,46,583 ಮತ್ತು ನಗರ ಪ್ರದೇಶದಲ್ಲಿ 74,705 ಅನಕ್ಷರಸ್ಥರು ಇದ್ದರು.

ಪ್ರತಿ ವರ್ಷವೂ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಇಂತಿಷ್ಟು ಮಂದಿಯನ್ನು ಸಾಕ್ಷರರನ್ನಾಗಿ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಗುರಿ ನೀಡುತ್ತದೆ. ಆ ಪ್ರಕಾರ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಇಳಿಕೆಯತ್ತ ಸಾಗಿದೆ.  

ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಹಿತಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿ ಅನಕ್ಷರಸ್ಥರು ಇದ್ದಾರೆ. ನಗರ ಪ್ರದೇಶದಲ್ಲಿ ಮಹಿಳೆಯರಲ್ಲಿ ಹೆಚ್ಚು ಅನಕ್ಷರಸ್ಥರು ಇದ್ದರೆ ಗ್ರಾಮೀಣ ಭಾಗಗಳಲ್ಲಿ ಪುರುಷರು ಹೆಚ್ಚು ಅನಕ್ಷರಸ್ಥರು ಇದ್ದಾರೆ. 15 ವರ್ಷ ಮೇಲ್ಪಟ್ಟಿರುವ ಓದು ಮತ್ತು ಬರಹ ಬಾರದವನ್ನು ಅನಕ್ಷರಸ್ಥರು ಎಂದು ಸರ್ಕಾರವು ಗುರುತಿಸುತ್ತದೆ. ಇವರನ್ನು ಅಕ್ಷರಸ್ಥರನ್ನಾಗಿಸಲು ಶಿಕ್ಷಣ ಕೊಡಿಸಲಾಗುತ್ತದೆ. 

ಕಳೆದ ವರ್ಷ 5,871 ಮಂದಿ ಉತ್ತೀರ್ಣ: 2024–25ನೇ ಸಾಲಿನಲ್ಲಿ 5,975 ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸುವ ಗುರಿ ಹೊಂದಲಾಗಿತ್ತು. ಆ ಪ್ರಕಾರ ಕಳೆದ ಜುಲೈನಲ್ಲಿ ಇವರಿಗೆ ಪರೀಕ್ಷೆಗಳು ನಡೆದವು. 5,975 ಅನಕ್ಷರಸ್ಥರ ಪೈಕಿ 46 ಮಂದಿ ಗೈರಾಗಿದ್ದರು. ಪರೀಕ್ಷೆ ಬರೆದವರಲ್ಲಿ 5,871 ಮಂದಿ ಉತ್ತೀರ್ಣರಾಗಿದ್ದಾರೆ.

ಇಂದು ಜಿಲ್ಲಾಡಳಿತದಿಂದ ಕಾರ್ಯಕ್ರಮ

ಪ್ರತಿ ವರ್ಷ ಸೆ.8ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಲಾಗುತ್ತದೆ. ಪ್ರತಿ ವರ್ಷ ಸೆ.1ರಿಂದ 8ರವರೆಗೆ ಸಾಕ್ಷರತಾ ಸಪ್ತಾಹವನ್ನು ನಡೆಸಲಾಗುತ್ತದೆ. ಈ ಅವಧಿಯ ಒಂದು ದಿನ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಗುರುವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

ವರ್ಷದಿಂದ ವರ್ಷಕ್ಕೆ ಇಳಿಕೆ
ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅನಕ್ಷರಸ್ಥರ ಪ್ರಮಾಣ ಕಡಿಮೆ ಆಗುತ್ತಿದೆ. ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮದ ಅಡಿ ಬಹಳಷ್ಟು ಮಂದಿ ನವಸಾಕ್ಷರರಾಗಿದ್ದಾರೆ. 2030ರ ವೇಳೆಗೆ ರಾಜ್ಯದಲ್ಲಿ ಪೂರ್ಣವಾಗಿ ಅನಕ್ಷರತೆಯನ್ನು ತೊಡೆದುಹಾಕಲು ಸರ್ಕಾರ ಯೋಜಿಸಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.