ADVERTISEMENT

ಚಿಕ್ಕಬಳ್ಳಾಪುರ | ಮಂಜುನಾಥ ರೆಡ್ಡಿ ಚಿಮುಲ್ ಮೊದಲ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:11 IST
Last Updated 17 ಫೆಬ್ರುವರಿ 2026, 5:11 IST
ಚಿಮುಲ್ ಅಧ್ಯಕ್ಷರಾಗಿ ಮಂಜುನಾಥ ರೆಡ್ಡಿ ಆಯ್ಕೆಯಾಗಿದ್ದು ಈ ವೇಳೆ ಅಧ್ಯಕ್ಷ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ಅಶ್ವತ್ಥನಾರಾಯಣ ಬಾಬು ಹಾಗೂ ನಿರ್ದೇಶಕರು ಅಭಿನಂದಿಸಿದರು
ಚಿಮುಲ್ ಅಧ್ಯಕ್ಷರಾಗಿ ಮಂಜುನಾಥ ರೆಡ್ಡಿ ಆಯ್ಕೆಯಾಗಿದ್ದು ಈ ವೇಳೆ ಅಧ್ಯಕ್ಷ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ಅಶ್ವತ್ಥನಾರಾಯಣ ಬಾಬು ಹಾಗೂ ನಿರ್ದೇಶಕರು ಅಭಿನಂದಿಸಿದರು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಚಿಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಮಂಜುನಾಥ ರೆಡ್ಡಿ ಆಯ್ಕೆಯಾದರು.

ನಗರದ ಚಿಮುಲ್ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಾಗೇಪಲ್ಲಿ ಕ್ಷೇತ್ರದ ನಿರ್ದೇಶಕ ಮಂಜುನಾಥ ರೆಡ್ಡಿ ಮತ್ತು ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಪೆರೇಸಂದ್ರ ಕ್ಷೇತ್ರದ ಕೆ.ವಿ.ನಾಗರಾಜ್ ನಾಮಪತ್ರ ಸಲ್ಲಿಸಿದ್ದರು.

ಅಂತಿಮವಾಗಿ ಕೆ.ವಿ.ನಾಗರಾಜ್ ನಾಮಪತ್ರ ವಾಪಸ್ ಪಡೆದರು. ಮಂಜುನಾಥ ರೆಡ್ಡಿ‌ ಅವಿರೋಧ ಆಯ್ಕೆಯಾದರು. ಮಂಜುನಾಥ ರೆಡ್ಡಿ ಆಯ್ಕೆ ಆಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಚಿಮುಲ್ ಕಚೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ADVERTISEMENT

ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ರೆಡ್ಡಿ, ಎನ್‌ಡಿಎ ಬೆಂಬಲಿತ ನಿರ್ದೇಶಕರ ಸಹಕಾರ ಸಹ ಕೋರಿದರು. ಎಲ್ಲರೂ ಸೇರಿ ಒಕ್ಕೂಟವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು.

ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹಾಗೂ ಮುಖಂಡರ ಸಭೆ ನಡೆಸಿದರು.

ಚಿಮುಲ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಆರು, ಗೌರಿಬಿದನೂರು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟ ಸ್ವಾಮಿಗೌಡ ಬೆಂಬಲಿತ ಇಬ್ಬರು ಮತ್ತು ಎನ್‌ಡಿಎ ಬೆಂಬಲಿತ ಐದು ನಿರ್ದೇಶಕರು ಚುನಾವಣೆ ಮೂಲಕ‌ ಆಯ್ಕೆಯಾಗಿದ್ದಾರೆ. ಸರ್ಕಾರದ ನಾಮನಿರ್ದೇಶನ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಕೆ.ಆರ್.ರಾಜಣ್ಣ ಅವರನ್ನು ನೇಮಿಸಲಾಗಿದೆ.

ಎನ್‌ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ‌ನಿರ್ದೇಶಕರು, ಪಶು ಸಂಗೋಪನೆ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿಯ ನಾಮನಿರ್ದೇಶನ ನಿರ್ದೇಶಕ ಸ್ಥಾನಗಳಿವೆ. 

ಅಧಿಕಾರ ಹಂಚಿಕೆ: ಅಧ್ಯಕ್ಷ ಸ್ಥಾನ ಮತ್ತು ಕೆಎಂಎಫ್ ಪ್ರತಿನಿಧಿ (ನಿರ್ದೇಶಕ) ಸ್ಥಾನವನ್ನು ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನವು ಮಂಜುನಾಥ ರೆಡ್ಡಿ ಮತ್ತು ಚಿಂತಾಮಣಿ ಕ್ಷೇತ್ರದ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣಬಾಬು ಅವರ ನಡುವೆ ಹಂಚಿಕೆಯಾಗಿದೆ. ಅದೇ ರೀತಿಯಲ್ಲಿ ಕೆಎಂಎಫ್ ನಿರ್ದೇಶಕ ಸ್ಥಾನ ಕಾಂತರಾಜು ಮತ್ತು  ಎನ್‌.ಸಿ.ವೆಂಕಟೇಶ್ ನಡುವೆ ಹಂಚಿಕೆಯಾಗಿದೆ. ಈ ಎರಡೂ ಹುದ್ದೆಗಳಲ್ಲಿ ನಿರ್ದೇಶಕರು ತಲಾ ಎರಡೂವರೆ ವರ್ಷ ಅಧಿಕಾರ ಅನುಭವಿಸುವರು. 

ಜೂನ್‌ವರೆಗೆ ದರ ಹೆಚ್ಚಳ’

ಒಕ್ಕೂಟವು ಒಂದು ಲೀಟರ್ ಹಾಲಿನ ಬೆಲೆಯನ್ನು ₹1 ಹೆಚ್ಚಿಸಿತ್ತು. ಮಾರ್ಚ್‌ವರೆಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಬೇಸಿಗೆ ಪೂರ್ಣವಾಗುವವರೆಗೆ ಜೂನ್‌ವರೆಗೆ ದರ ಹೆಚ್ಚಳ ಮುಂದುವರಿಯಲಿದೆ ಎಂದು ನೂತನ ಅಧ್ಯಕ್ಷ ಮಂಜುನಾಥ ರೆಡ್ಡಿ ಹೇಳಿದರು. ಹೈನುಗಾರರ ಅಭಿವೃದ್ಧಿ ಜೊತೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡುತ್ತೇವೆ. 13 ಮಂದಿ ನಿರ್ದೇಶಕರಲ್ಲಿ 7 ನಿರ್ದೇಶಕರ ಜೊತೆ ಈ ಹಿಂದೆಯೂ ಕೆಲಸ ಮಾಡಿದ್ದೇನೆ. ಎಲ್ಲ ನಿರ್ದೇಶಕರ ಸಹಕಾರದಲ್ಲಿ ಒಕ್ಕೂಟವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು. ನಾನು ನಾಲ್ಕು ಬಾರಿ ನಿರ್ದೇಶಕನಾಗಿದ್ದೇನೆ. ಎನ್‌ಡಿಎ ಅಭ್ಯರ್ಥಿಯಾಗಿ ಕೆ.ವಿ.ನಾಗರಾಜ್ ನಾಮಪತ್ರ ಸಲ್ಲಿಸಿದ್ದರು. ನಂತರ ಅವರು ವಾಪಸ್ ಪಡೆದು ಅವಿರೋಧ ಆಯ್ಕೆಗೆ ಸಹಕರಿಸಿದರು. ಎಲ್ಲರ ಸಹಕಾರದಲ್ಲಿ ಸಂಘವನ್ನು ಅಭಿವೃದ್ಧಿಗೊಳಿಸಲಾಗುವುದು. ಅಧಿಕಾರ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು. 

‘ಅಧಿಕಾರ ಹಂಚಿಕೆಯಾಗಿದೆ’

ನಾನು ಮೂರು ಬಾರಿ ನಿರ್ದೇಶಕನಾಗಿದ್ದೇನೆ. ಅಧ್ಯಕ್ಷ ಸ್ಥಾನ ಮತ್ತು ಕೆಎಂಎಫ್ ಪ್ರತಿ ನಿಧಿ ಸ್ಥಾನಗಳ ನಡುವೆ ಅಧಿಕಾರ ಹಂಚಿಕೆಯಾಗಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಮತ್ತು ಕೆಎಂಎಫ್ ನಿರ್ದೇಶಕರಾದವರು ಎರಡೂವರೆ ವರ್ಷ ಅಧಿಕಾರದಲ್ಲಿ ಇರುವರು ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಚಿಂತಾಮಣಿ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ತಿಳಿಸಿದರು. ನನಗೂ ಅವಕಾಶ ಸಿಗುತ್ತದೆ ಎನ್ನುವ ಆಶಾಭಾವವಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖಂಡರ ತೀರ್ಮಾನಕ್ಕೆ ಬದ್ಧವಾಗಿದ್ದೇವೆ. ಶಾಸಕ ಸುಬ್ಬಾರೆಡ್ಡಿ ಅವರು ನನ್ನ ಮತಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂದು ಒತ್ತಡ ಹಾಕಿದ್ದರು. ಆ ಕಾರಣದಿಂದ ಬಿಟ್ಟುಕೊಟ್ಟಿದ್ದೇವೆ ಎಂದರು. 

‘ಅಸಮಾಧಾನ ಶಮನವಾಗುತ್ತದೆ’

ಚಿಮುಲ್ ನಾಮನಿರ್ದೇಶನದ ಬಗ್ಗೆ ಕೆಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ‘ರಾಜಕಾರಣದಲ್ಲಿ ಅಸಮಾಧಾನ ಎಲ್ಲ ಸಹಜ. ಇದೆಲ್ಲವೂ ಶಮನವಾಗುತ್ತದೆ’ ಎಂದರು. ‘ಎಲ್ಲ ನಿರ್ದೇಶಕರು ಒಗ್ಗಟ್ಟಾಗಿ ಅಧ್ಯಕ್ಷರನ್ನು ಚುನಾಯಿಸಿದ್ದಾರೆ. ನಿರ್ದೇಶಕರೇ ಎಲ್ಲವನ್ನೂ ತೀರ್ಮಾನ ಮಾಡಿದ್ದಾರೆ. ಅದಕ್ಕೆ ನಮ್ಮ ಸಹಮತವಿದೆ. ನಮಗೆ ಯಾವುದೇ ಸಮಸ್ಯೆ ಒತ್ತಡವಾಗದ ರೀತಿಯಲ್ಲಿ ತೀರ್ಮಾನ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.