ADVERTISEMENT

ಕೋರೆಗಾಂವ್ ವೀರ ಯೋಧರ ಸ್ಮರಣೆ

ದಲಿತ ಸಂಘರ್ಷ ಸಮಿತಿಯಿಂದ ವಿಜಯೋತ್ಸವ, ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 12:32 IST
Last Updated 1 ಜನವರಿ 2020, 12:32 IST
ವಿಜಯೋತ್ಸವದಲ್ಲಿ ಪ್ರೊ.ಕೋಡಿರಂಗಪ್ಪ ಮಾತನಾಡಿದರು.
ವಿಜಯೋತ್ಸವದಲ್ಲಿ ಪ್ರೊ.ಕೋಡಿರಂಗಪ್ಪ ಮಾತನಾಡಿದರು.   

ಚಿಕ್ಕಬಳ್ಳಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಭೀಮಾ ಕೋರೆಗಾಂವ್ ವೀರ ಯೋಧರ ಸ್ಮರಣಾರ್ಥವಾಗಿ ಸೋಮವಾರ ನಗರದ ಪಿಎಲ್‌ಡಿ ಬ್ಯಾಂಕ್‌ ಆವರಣದಿಂದ ಅಂಬೇಡ್ಕರ್‌ ವೃತ್ತದವರೆಗೆ ಮೆರವಣಿಗೆ ನಡೆಸಿ, ಬಳಿಕ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಜಯೋತ್ಸವ ಆಚರಿಸಲಾಯಿತು.

ಪೇರೇಸಂದ್ರದ ಶಾಂತಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋಡಿರಂಗಪ್ಪ ಮಾತನಾಡಿ, ‘ಶಿವಾಜಿ ತರುವಾಯ ಅಧಿಕಾರಕ್ಕೆ ಬಂದ ಪೇಶ್ವೆಗಳು ಮನುಸ್ಮೃತಿ ಆಧಾರದಲ್ಲಿ ಆಡಳಿತ ನಡೆಸುತ್ತ, ಕೆಳವರ್ಗದ ಮೆಹರ್ ಸಮುದಾಯದವರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದರು. ಕಠೋರ ಮತ್ತು ಅವಮಾನಕರವಾದ ಅಸ್ಪೃಶ್ಯತೆಯ ಆಚರಣೆಯಿಂದ ರೋಸಿ ಹೋಗಿ ಮೆಹರ್ ಸಮುದಾಯದ ಯೋಧರು 1818ರ ಜನವರಿ 1 ರಂದು ಬ್ರಿಟಿಷರ ಸಹಾಯದೊಂದಿಗೆ ಪೇಶ್ವೆಗಳ ಸೈನಿಕರನ್ನು ಸದೆಬಡೆದರು’ ಎಂದು ಹೇಳಿದರು.

‘ಮಹಾರಾಷ್ಟ್ರದ ಪುಣೆಯ ಸಮೀಪದ ಕೋರೇಗಾಂವ್‌ನಲ್ಲಿ ಭಯಾನಕವಾಗಿದ್ದ ಪೇಶ್ವೆಗಳ ಆಡಳಿತ ವೈಖರಿ ಖಂಡಿಸಿ 500 ಅಸ್ಪೃಶ್ಯ ಯೋಧರು 30 ಸಾವಿರದಷ್ಟಿದ್ದ ಪೇಶ್ವೆ ಸೈನಿಕರ ಮೇಲೆ ಯುದ್ದ ಹೂಡಿ ಸಾಧಿಸಿದ ವಿಜಯದ ಚರಿತ್ರೆ ಈ ವಿಜಯೋತ್ಸವದ ಹಿಂದಿದೆ. ಈ ಹೋರಾಟದಲ್ಲಿ 21 ಮೆಹರ್ ಸೈನಿಕರು ಹತರಾಗುತ್ತಾರೆ. ಅವರ ಸ್ಮರಣಾರ್ಥ ಭೀಮಾ ತೀರದ ತಟದಲ್ಲಿ ವಿಜಯ ಸ್ತಂಭ ಸ್ಥಾಪಿಸಲಾಗಿದೆ. ಇವತ್ತು ದೇಶ ರಕ್ಷಣೆ ಮಾಡುವ ಸೈನಿಕರು, ಅನ್ನ ನೀಡುವ ರೈತರು ಮತ್ತು ದೇಶದ ಮೂಲನಿವಾಸಿಗಳಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರೂ ಸಮಾನರು’ ಎಂದು ತಿಳಿಸಿದರು.

ADVERTISEMENT

ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸು.ಧಾ.ವೆಂಕಟೇಶ್ ಮಾತನಾಡಿ, ‘ಮಹಾರಾಷ್ಟ್ರದ ಕೊರೆಗಾಂವ್‌ನ ದಲಿತ ಯೋಧರು ಅಸ್ಪೃಶ್ಯತೆ ವಿರೋಧಿ ಹೋರಾಟದಲ್ಲಿ ಪೇಶ್ವೆಗಳ ವಿರುದ್ಧ ಗೆಲುವು ಸಾಧಿಸಿ 2020 ಜನವರಿ 1ಕ್ಕೆ 202 ವರ್ಷಗಳಾಗಲಿವೆ. ಅಂದಿನ ಮಹಾರಾಷ್ಟ್ರದ ಪೇಶ್ವೆ ಆಳ್ವಿಕೆಯಲ್ಲಿನ ಎರಡನೇ ಬಾಜೀರಾವ್‌ ಆಡಳಿತದಲ್ಲಿ ಅಲ್ಲಿನ ಬಹುಸಂಖ್ಯಾತರನ್ನು ಹೀನಾಯ ಸ್ಥಿತಿಯಲ್ಲಿ ನೋಡಿಕೊಳ್ಳುತ್ತಿದ್ದ’ ಎಂದರು.

‘ಭೀಮಾ ನದಿ ತೀರದಲ್ಲಿ ಯುದ್ಧ ನಡೆದ ಪ್ರದೇಶದಲ್ಲಿ ಮಹರ್ ಜನಾಂಗದ ಯೋಧರ ಶೌರ್ಯಕ್ಕೆ ಪ್ರತಿಯಾಗಿ ಕೋರೆಗಾಂವ್ ಎಂಬಲ್ಲಿ ವಿಜಯ ಸ್ತಂಭ ನಿರ್ಮಿಸಲಾಯಿತು. 1918ರ ಜನವರಿ 1ರಂದು ಅಂಬೇಡ್ಕರ್ ಅವರು ಭೇಟಿ ನೀಡಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುತ್ತಿದ್ದರು. ಅದರಿಂದ ದೇಶದಲ್ಲಿರುವ ಅಸ್ಪೃಶ್ಯತೆಯ ವಿರುದ್ಧದ ಹೋರಾಟಕ್ಕೆ ಮಹರ್ ದಲಿತರ ಹೋರಾಟ ಸ್ಫೂರ್ತಿಯಾಗಬೇಕು’ ಎಂದು ಹೇಳಿದರು.

‘ಇತಿಹಾಸಕಾರರು ಮರೆಮಾಚಿದ್ದ ದಲಿತ ಸ್ವಾಭಿಮಾನದ ಕುರುಹಾದ ಕೋರೆಗಾಂವ್‌ ವಿಜಯೋತ್ಸವದ ಐತಿಹಾಸಿಕ ಚರಿತ್ರೆಯ ಬಗ್ಗೆ ಅಂಬೇಡ್ಕರ್‌ ಅವರು ಸಮಗ್ರ ಅಧ್ಯಯನ ಮಾಡಿ, ಜಗತ್ತಿಗೆ ಪರಿಚಯ ಮಾಡಿಕೊಟ್ಟರು. ಆದರೆ, ಇಂದು ನಾವು ಅಂಬೇಡ್ಕರ್‌ ಅವರ ಚಿಂತನೆಗಳು, ಆಶಯಗಳನ್ನು ಎಷ್ಟರಮಟ್ಟಿಗೆ ಮೈಗೂಡಿಸಿಕೊಂಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಎಂ.ನಾಗೇಶ್, ಮುಖಂಡರಾದ ಗಾನ ಅಶ್ವತ್ಥ, ರಾಘವೇಂದ್ರ, ವೆಂಕಟರಾಮ ಸತೀಶ್‌, ಮಧುಸೂಧನ್, ರಾಜು, ಗೋವಿಂದ, ಚಿಕ್ಕಪ್ಪಯ್ಯಾ, ವೆಂಕಟೇಶ್‌, ಸತೀಶ್‌, ರಾಮಚಂದ್ರ ಚಿಕ್ಕಪ್ಪಯ್ಯ, ನಾರಾಯಣಸ್ವಾಮಿ, ಮಂಡಿಕಲ್ ಗಂಗಾಧರ್, ಕೃಷ್ಣಪ್ಪಮೂರ್ತಿ, ಕೃಷ್ಣಪ್ಪ, ಮುನಿರಾಜು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.