ADVERTISEMENT

ಗಣಿಗಾರಿಕೆ ಅನುಮತಿಗೆ ₹30 ಕೋಟಿ ಲಂಚ: ಶಾಸಕ ಬಿ.ಎನ್. ರವಿಕುಮಾರ್ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 6:53 IST
Last Updated 22 ಆಗಸ್ಟ್ 2025, 6:53 IST
ಬಿ.ಎನ್.ರವಿಕುಮಾರ್
ಬಿ.ಎನ್.ರವಿಕುಮಾರ್   

ಶಿಡ್ಲಘಟ್ಟ: ‘ತಾಲ್ಲೂಕಿನ ಪುರಬೈರನಹಳ್ಳಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೊಡಲು ಈ ಹಿಂದಿನ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಹಾಗೂ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ₹30 ಕೋಟಿ ಲಂಚ ಪಡೆದಿದ್ದಾರೆ’ ಎಂದು ಶಾಸಕ ಬಿ.ಎನ್. ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. 

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ‘ಸಾದಲಿ ಹೋಬಳಿಯ ಪುರಬೈರನಹಳ್ಳಿ ಗ್ರಾಮದ ಸರ್ವೆ ನಂಬರ್ 2ರಲ್ಲಿ ಒಂದೇ ಕುಟುಂಬದವರಿಗೆ 60.27 ಎಕರೆ ಜಮೀನು ಮಂಜೂರು ಮಾಡಲಾಗಿದೆ’ ಎಂದು ಆರೋಪಿಸಿದರು. 

ಈ ಜಮೀನಿನಲ್ಲಿ ಗಣಿಗಾರಿಕೆ ಆರಂಭಿಸಿದರೆ, ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ, ಪಕ್ಷಿಗಳು ಹಾಗೂ ರೈತರಿಗೂ ತೊಂದರೆ ಆಗುತ್ತದೆ. ಸರ್ಕಾರ ಗಣಿಗಾರಿಕೆ ರದ್ದುಪಡಿಸದಿದ್ದರೆ, ದೊಡ್ಡ ಮಟ್ಟದ ಗಲಾಟೆಯಾಗಲಿದೆ. ಮುಂದಿನ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. 

ADVERTISEMENT

ಗಣಿಗಾರಿಕೆಗೆ ಅವಕಾಶ ಕೊಟ್ಟ ಪ್ರದೇಶದ ಸಮೀಪ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಿದೆ. ಅಲ್ಲಿ 300 ಮಕ್ಕಳು ಓದುತ್ತಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಿದೆ. ನಾಲ್ಕು ಗ್ರಾಮಗಳಲ್ಲಿ ಕಲ್ಲು ಕುಟುಕರ 700 ಕುಟುಂಬಸ್ಥರು 1974ರಿಂದ ಜೀವನ ಮಾಡುತ್ತಿದ್ದಾರೆ. ಸ್ಥಳೀಯರು ನನಗೆ ದೂರು ಕೊಟ್ಟಿದ್ದಾರೆ. ಕೈಗಾರಿಕೆ ಸಚಿವರಿಗೆ ದೂರು ಕೊಟ್ಟ ನಂತರ, ಪ್ರಭ ಅರ್ಥ್ ಮೂವರ್ಸ್, ಮತ್ತು ಶಕ್ತಿ ಎಂಟರ್ ಪ್ರೈಸಸ್‌ನ 18.22 ಜಮೀನು ವಜಾಗೊಳಿಸಿದ್ದಾರೆ. ಉಳಿದ 42.05 ಎಕರೆ ವಜಾ ಆಗಿಲ್ಲ. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಈ ಬಗ್ಗೆ ತನಿಖೆ ಕೈಗೊಂಡು, ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. 

ನಮ್ಮ ವಿಧಾನಸಭಾ ಕ್ಷೇತ್ರವು, ಹಿಂದುಳಿದ ತಾಲ್ಲೂಕಾಗಿದೆ. 100 ಹಾಸಿಗೆಗಳ ಆಸ್ಪತ್ರೆಯಿಲ್ಲ, 11 ಸಾವಿರ ಮಕ್ಕಳು ನಗರ ವ್ಯಾಪ್ತಿಯಲ್ಲಿ ಓದುತ್ತಿದ್ದಾರೆ. ಸುಸಜ್ಜಿತ ಗ್ರಂಥಾಲಯವಿಲ್ಲ. ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡಬೇಕು. ಈ ಹಿಂದೆ ಯಾವ ಮುಖ್ಯಮಂತ್ರಿಗಳು ಹೀಗೆ ಮಾಡಿರಲಿಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಅನುದಾನದಲ್ಲಿ ತಾರತಮ್ಯ

‘ನಮ್ಮ ಕ್ಷೇತ್ರಕ್ಕೆ ತಾರತಮ್ಯ ಮಾಡದೆ ಅನುದಾನ ಕೊಡಿ ಇಲ್ಲವೇ ನಿಮಗೆ ಅನುದಾನ ಕೊಡುವುದಿಲ್ಲ ಎಂದು ಬೋರ್ಡ್ ಹಾಕಿಬಿಡಿ. ನಾನು ಈ ಸದನಕ್ಕೆ ಬರುವುದಿಲ್ಲ. ಕ್ಷೇತ್ರದಲ್ಲೇ ಇದ್ದು ಜನರಿಂದ ಬೈಯಿಸಿಕೊಂಡೇ ಇರುತ್ತೇನೆ ಎಂದು ಬಿ.ಎನ್.ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2.3 ವರ್ಷವಾಗಿದೆ. ಆದರೆ ನನ್ನ ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ. ಕ್ಷೇತ್ರದಲ್ಲಿ 40 ಸಾವಿರ ಅಲ್ಪಸಂಖ್ಯಾತರಿದ್ದಾರೆ. ಪರಿಶಿಷ್ಟ ಜಾತಿ ಪಂಗಡದ 65 ಸಾವಿರ ಜನರಿಗೆ ಎಸ್ಎಚ್‌ಡಿಬಿ ಯೋಜನೆಯಡಿ ₹10 ಕೋಟಿ ನೀಡಲಾಗಿದೆ. ಆದರೆ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ತಲಾ ₹25 ಕೋಟಿ ನೀಡಲಾಗಿದೆ ಎಂದು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.