ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ತಾಲ್ಲೂಕಿನ ಕನಗಾನಕೊಪ್ಪದಲ್ಲಿ ಮೂಕ ಪ್ರಾಣಿಗಳ ಮೇವು, ನೀರಿಗೆ ಮೀಸಲಾಗಿರುವ ಸ್ಥಳದಲ್ಲಿ ಗಣಿಗಾರಿಕೆಗೆ ಯಾವುದೇ ಅವಕಾಶ ನೀಡಬಾರದು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆಯ ಗೂಂಡಾಗಳು ರೈತ ರವಿಕುಮಾರ್ ಮೇಲೆ ಗುಂಡ ಹಾರಿಸಿದ್ದಾರೆ. ಇದು ಕ್ರಿಮಿನಲ್ ಚಟುವಟಿಕೆ. ಇಲ್ಲಿ ಗಣಿಗಾರಿಕೆ ಮಾಡಿದರೆ ಮೂಕ ಪ್ರಾಣಿಗಳಿಗೆ ತೊಂದರೆ ಆಗುತ್ತದೆ ಎಂದರು.
ಮಂಚೇನಹಳಿ ತಾಲ್ಲೂಕು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಇಲ್ಲಿ ಪರಿಸರಕ್ಕೆ ಹಾನಿಯಾಗುವ ಗಣಿಗಾರಿಕೆಯ ವಿರುದ್ಧ ಹೋರಾಟಗಳನ್ನು ನಡೆಸಬೇಕು. ಪರವಾನಗಿ ರದ್ದುಗೊಳಿಸುವಂತೆ ಹೋರಾಟಗಳನ್ನು ನಡೆಸಬೇಕು. ಈ ಬಗ್ಗೆ ದೃಢ ಸಂಕಲ್ಪ ಹೊಂದಿರಬೇಕು ಎಂದು ಹೇಳಿದರು.
ಭ್ರಷ್ಟಾಚಾರ, ಅಕ್ರಮಗಳಲ್ಲಿ ತೊಡಗಿರುವ ಜನಪ್ರತಿನಿಧಿಗಳು ಎಲ್ಲ ಪಕ್ಷಗಳಲ್ಲಿಯೂ ಇದ್ದಾರೆ. ಇಂತಹ ಜನಪ್ರತಿನಿಧಿಗಳನ್ನು ಗುರುತಿಸಬೇಕು. ಆದರೆ ಈಗ ಅವರದೇ ಅಧಿಕಾರಗಳು ನಡೆಯುತ್ತಿವೆ ಎಂದರು.
ಗಾಲಿ ಜನಾರ್ದನ ರೆಡ್ಡಿ ವಿರುದ್ಧ ನಾವು ಹೋರಾಟ ನಡೆಸಿದಾಗ ಬೆದರಿಕೆಗಳು ಬಂದವು. ಆದರೆ ನಾವು ಯಾವುದಕ್ಕೂ ಹೆದರದೆ ನಡೆದವು. ನಮ್ಮ ಹೋರಾಟಕ್ಕೆ ಅಧಿಕಾರಿಗಳು ಸಹ ದಾಖಲೆಗಳನ್ನು ನೀಡಿದರು. ಎಲ್ಲ ಕಡೆಯೂ ಕೆಟ್ಟವರು ಇಲ್ಲ. ಪ್ರಾಮಾಣಿಕ ಅಧಿಕಾರಿಗಳು ಇದ್ದಾರೆ ಎಂದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ, ಕನಗಾನಕೊಪ್ಪದಲ್ಲಿ ನೈಸರ್ಗಿಕವಾದ ಬೆಟ್ಟಗಳು, ಹುಲ್ಲುಗಾವಲು, ಕೆರೆ ಇದೆ. ಇವುಗಳನ್ನು ನಾಶ ಮಾಡುವ ಗಣಿಗಾರಿಕೆಯು ಯಾವುದೇ ಕಾರಣದಿಂದಲೂ ನಡೆಯಬಾರದು ಎಂದು ಆಗ್ರಹಿಸಿದರು.
ಅಂದು ನನ್ನ ಮೇಲೂ ಬಂದೂಕಿನಿಂದ ಗುರಿ ಇಟ್ಟಿದ್ದರು. ಆಗ ನಾನು ಯಾವುದೇ ಕಾರಣಕ್ಕೂ ಈ ಕೃತ್ಯಗಳನ್ನು ಎಸಗಬೇಡಿ ಎಂದು ಕೋರಿದೆ. ಆದರೂ ಗುಂಡಿನ ದಾಳಿ ನಡೆಸಿದರು ಎಂದರು.
ಗಣಿಗಾರಿಕೆಗೆ ನೀಡಿರುವ ಪರವಾನಗಿ ರದ್ದುಗೊಳಿಸಲೇಬೇಕು. ಸ್ಥಳಕ್ಕೆ ಹಿರೇಮಠ ಅವರು ಭೇಟಿ ನೀಡಿದ್ದು ರೈತರಿಗೆ ಧೈರ್ಯ ತುಂಬಿದ್ದಾರೆ. ನ್ಯಾಯದ ತಳಹದಿಯಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂದು ತಿಳಿಸಿದ್ದಾರೆ. ಅವರು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಗೌರಿಬಿದನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ, ದೀಪಕ್ ಸಿ.ಎನ್., ರೈತ ಮುಖಂಡ ರಾಜಣ್ಣ, ಗ್ರಾಮಸ್ಥ ಕೆ.ನರಸಿಂಹಮೂರ್ತಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.