ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ವೀರವನಿತೆ ಒನಕೆ ಓಬವ್ವ ಜಯಂತಿಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:08 IST
Last Updated 12 ನವೆಂಬರ್ 2025, 6:08 IST
   

ಚಿಕ್ಕಬಳ್ಳಾಪುರ: ನಗರದಲ್ಲಿ ಮಂಗಳವಾರ ವೀರವನಿತೆ ಒನಕೆ ಓಬವ್ವ ಜಯಂತಿಯು ಅದ್ದೂರಿಯಾಗಿ ನಡೆಯಿತು. 

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಒನಕೆ ಓಬವ್ವ ಭಾವಚಿತ್ರವನ್ನು ಹೂವಿನ ಪಲ್ಲಕ್ಕಿಯಲ್ಲಿಟ್ಟು ಸ್ತಬ್ಧ ಚಿತ್ರಗಳ ಮೆರವಣಿಗೆಯು ನಡೆಯಿತು. ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆಯು ಬಿ.ಬಿ ರಸ್ತೆಯ ಮೂಲಕ ಸಾಗಿ ಕನ್ನಡ ಭವನ ತಲುಪಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತುಂಬಿದ್ದವು.

ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕಿಯರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 

ADVERTISEMENT

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ಮಾತನಾಡಿ, ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸ ನಾಡಿನ ಎಲ್ಲ ಹೆಣ್ಣು ಮಕ್ಕಳಿಗೆ ಸ್ಫೂರ್ತಿ. ಸಾಮಾನ್ಯ ಕಾವಲುಗಾರನ ಹೆಂಡತಿಯಾಗಿ ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಕೋಟೆನಾಡು ದುರ್ಗವನ್ನು ರಕ್ಷಿಸಿದರು ಎಂದರು. 

ವೀರವನಿತೆ ಎಂಬ ಹೆಸರಿನಲ್ಲಿಯೇ ಸ್ಫೂರ್ತಿ ಮತ್ತು ಧೈರ್ಯ ಅಡಕವಾಗಿದೆ. ಕರ್ನಾಟಕದ ಚರಿತ್ರೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರಷ್ಟೆ ಖ್ಯಾತಿಯನ್ನು ವೀರವನಿತೆ ಓಬವ್ವ ಪಡೆದಿದ್ದಾರೆ. ಈ ದಿಟ್ಟ ಮಹಿಳೆಯರು ರಾಜ್ಯದ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಸೆಣಸಾಡಿದ ಯಶೋಗಾಥೆಗಳ ಆದರ್ಶಗಳು ಎಲ್ಲರಿಗೂ ದಾರಿದೀಪ ಆಗಬೇಕು ಎಂದು ಸಲಹೆ ನೀಡಿದರು. 

ಉಪನ್ಯಾಸಕ ಎನ್. ಚಂದ್ರಶೇಖರ್ ಮಾತನಾಡಿ, 18ನೇ ಶತಮಾನದಲ್ಲಿ ಚಿತ್ರದುರ್ಗ ಪಾಳೆಗಾರ ಮದಕರಿ ನಾಯಕರ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪ ಅವರ ಹೆಂಡತಿಯೇ ಓಬವ್ವ. ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ಹಠಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಬಳಸಿ ಕೋಟೆಯ ಕಿಂಡಿಯಿಂದ ನುಸುಳಿ ಬಂದ ನೂರಾರು ಶತ್ರು ಸೈನಿಕರನ್ನು ಕೊಂದ ಪರಿಯು ಆಪತ್ತಿನ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಉತ್ತಮ ನಿದರ್ಶನ ಎಂದು ಸ್ಮರಿಸಿದರು.

ಸಾಮಾನ್ಯ ಗೃಹಿಣಿಯಾದರೂ ಯೋಧರಂತೆ ಮೆರೆದ ಶೌರ್ಯ, ಸಾಹಸ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಇದೇ ಕಾರಣಕ್ಕೆ ಮದಕರಿ ನಾಯಕ ಓಬವ್ವ ಅವರ ಶವವನ್ನು ದುರ್ಗದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತ ಈಕೆಯ ಸಾಹಸವನ್ನು ಕೊಂಡಾಡಿ ಕೋಟೆಯ ತಣ್ಣಿರು ಚಿಲುಮೆಯ ಪೂರ್ವದಿಕ್ಕಿನಲ್ಲಿ ಸಮಾಧಿ ಮಾಡಿ ಗೌರವ ಸಲ್ಲಿಸುವರು ಎಂದರು.

ಓಬವ್ವನ ಇತಿಹಾಸದ ಕುರಿತು ಇನ್ನಷ್ಟು ಸಂಶೋಧನೆ ಹಾಗೂ ಅಧ್ಯಯನಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ತಹಶೀಲ್ದಾರ್ ರಶ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿ ಕುಮಾರ್, ಸಮುದಾಯದ  ನರಸಿಂಹಪ್ಪ, ವೆಂಕಟ್, ರಾಮಪ್ಪ, ಭಾಗ್ಯಮ್ಮ, ಮಮತಾ ಮೂರ್ತಿ, ನಾರಾಯಣಸ್ವಾಮಿ, ವೆಂಕಟಕೃಷ್ಣ, ನಾಗರಾಜು, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಶಿಡ್ಲಘಟ್ಟ: ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವೀರರಾಣಿ ಒನಕೆ ಓಬವ್ವ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು. 

ತಹಶೀಲ್ದಾರ್ ಗಗನಸಿಂಧೂ ಮಾತನಾಡಿ, ‘ವೀರವನಿತೆ ಒನಕೆ ಓಬವ್ವ ಅವರ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಬೇಕು’ ಎಂದು ಪ್ರತಿಪಾದಿಸಿದರು. 

‘ಕೋಟೆ ಕಾವಲುಗಾರನ ಹೆಂಡತಿಯಾಗಿ, ಕೋಟೆಗೆ ಆಪತ್ತು ಎದುರಾದಾಗ, ಸಮಯಪ್ರಜ್ಞೆಯಿಂದ ವೈರಿಗಳ ರುಂಡ ಚಂಡಾಡಿದ ವೀರ ವನಿತೆ ಓಬವ್ವ ಎಲ್ಲರಿಗೂ ಮಾದರಿಯಾಗಬೇಕು. ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸಬೇಕು. ನಮ್ಮ ಕ್ಷೇತ್ರದ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ನಮ್ಮಊರಿನ ಕೀರ್ತಿ ಹೆಚ್ಚುತ್ತದೆ’ ಎಂದರು.

ಶಿಕ್ಷಕ ಜಿ.ಎಂ.ಶ್ರೀನಿವಾಸ್ ಅವರು ಒನಕೆ ಓಬವ್ವ ಕುರಿತು ಭಾಷಣ ಮಾಡಿದರು.

ಈ ವೇಳೆ ಇಪ್ಪತ್ತು ಮಂದಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮುದಾಯದ ಹತ್ತು ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಲಕ್ಷ್ಮಣ್ ರಾಜು, ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ನಿರ್ದೇಶಕ ಟಿ.ಟಿ.ನರಸಿಂಹಪ್ಪ, ಜಿಲ್ಲಾಧ್ಯಕ್ಷ ತ್ಯಾಗರಾಜ್ ಬಿ.ಛಲವಾದಿ, ಬಿ.ಎಂ.ಬಾಬು, ಎಚ್.ಎನ್.ಮುನಿಯಪ್ಪ, ಅರಿಕೆರೆ ಮುನಿರಾಜು, ನರೇಂದ್ರಕುಮಾರ್, ಸಿಡಿಪಿಒ ವಿದ್ಯಾ ವಸ್ತ್ರದ್, ಡಾ.ವೆಂಕಟೇಶಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

ವೀರವನಿತೆ ವೇಷದಲ್ಲಿ ಮಕ್ಕಳು

ಬಾಗೇಪಲ್ಲಿ: ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು. 

ತಹಶೀಲ್ದಾರ್ ಮನೀಷಾ ಎನ್ ಪತ್ರಿ ಮಾತನಾಡಿ, ರಾಜ ಮಹಾರಾಜರ ಜೊತೆಗೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರಂತಹ ವೀರವನಿತೆಯರು ಸ್ವಾತಂತ್ರ್ಯದ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಚಿತ್ರದುರ್ಗದ ಕೋಟೆಗೆ ಕಿಂಡಿಯೊಳಗಿನಿಂದ ಶತ್ರು ಸೈನಿಕರು ನುಸುಳುವಾಗ, ಅವರನ್ನು ಓಬವ್ವ ಅವರು ಒನಕೆಯಿಂದ ಸದೆಬಡಿದರು. ಈ ಮೂಲಕ ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದನ್ನು ತೋರಿಸಿಕೊಟ್ಟರು ಎಂದು ಹೇಳಿದರು. 

ಒನಕೆ ಓಬವ್ವ ನೂರಾರು ಶತ್ರುಗಳನ್ನು ಸಂಹಾರ ಮಾಡಿದ್ದನ್ನು ಕಂಡ ಆಕೆಯ ಗಂಡ ದಿಗ್ಭ್ರಾಂತರಾಗುತ್ತಾರೆ. ಇದಕ್ಕೆ ಓಬವ್ವನ ಕಿಂಡಿ ಎಂದೇ ಕರೆಯಲಾಗುತ್ತದೆ ಎಂದು ತಿಳಿಸಿದರು.

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೆಂಕಟೇಶಪ್ಪ ಮಾತನಾಡಿ, ಶತ್ರುಗಳಿಂದ ರಾಜ್ಯದ ರಕ್ಷಣೆಗಾಗಿ ಚಿತ್ರದುರ್ಗ ಕೋಟೆ ಮತ್ತು ಗುಮ್ಮನಾಯಕಪಾಳ್ಯದ ಕೋಟೆಗಳನ್ನು ಆಗಿನ ರಾಜರು ನಿರ್ಮಿಸಿದ್ದರು. ಒನಕೆ ಓಬವ್ವ ಅವರು ಧೈರ್ಯವಂತ ಮತ್ತು ಸಾಹಸಿ ಮಹಿಳೆ. ಪ್ರಸ್ತುತ ಪುರುಷರಂತೆ ಮಹಿಳೆಯರು ಎಲ್ಲ ರಂಗಗಳಲ್ಲಿ ಮಿಂಚುತ್ತಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕೋಲಾರ ರಾಧಾಮಣಿ, ಪತ್ರಬರಹಗಾರ ಎನ್.ಶಿವಪ್ಪ, ಶಿಕ್ಷಣ ಸಂಯೋಜಕ ಟಿ.ಮಂಜುನಾಥ್‍ ಅವರು ಒನಕೆ ಓಬವ್ವ ಅವರ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಸರ್ವಮಂಗಳಾ, ರಾಧಾಮಣಿ, ಶಿವಪ್ಪ ಅವರನ್ನು ಗೌರವಿಸಲಾಯಿತು. ಒನಕೆ ಓಬವ್ವ ವೇಷಧಾರಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಬಿಸಿಎಂ ಇಲಾಖೆ ಅಧಿಕಾರಿ ಆರ್.ಶಿವಪ್ಪ, ಪಶು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ, ಕೆಡಿಪಿ ಸದಸ್ಯ ಬಿ.ವಿ.ವೆಂಕಟರವಣ, ದರಖಾಸ್ತು ಸಮಿತಿ ಸದಸ್ಯ ಲಕ್ಷ್ಮಿನರಸಿಂಹಪ್ಪ, ತಾಲ್ಲೂಕು ಛಲವಾದಿ ಸಮುದಾಯದ ಕೃಷ್ಣಪ್ಪ, ಶಿವಪ್ಪ, ಟಿ.ವಿ.ಸುಮಂಗಳ, ಸುನೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.