ADVERTISEMENT

ಶಿಡ್ಲಘಟ್ಟ: ಪುಟಾಣಿ ವಿಜ್ಞಾನ ಪ್ರಯೋಗಾಲಯ ಆರಂಭ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 5:34 IST
Last Updated 20 ಫೆಬ್ರುವರಿ 2021, 5:34 IST
ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಟಾಣಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಸಮಾರಂಭದಲ್ಲಿ ಶಾಲೆಯ ‘ಅವಲಕ್ಕಿ ಪವಲಕ್ಕಿ’ ಯೂಟ್ಯೂಬ್ ಚಾನೆಲ್‌ಗೆ ಚಾಲನೆ ನೀಡಲಾಯಿತು
ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಟಾಣಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಸಮಾರಂಭದಲ್ಲಿ ಶಾಲೆಯ ‘ಅವಲಕ್ಕಿ ಪವಲಕ್ಕಿ’ ಯೂಟ್ಯೂಬ್ ಚಾನೆಲ್‌ಗೆ ಚಾಲನೆ ನೀಡಲಾಯಿತು   

ಶಿಡ್ಲಘಟ್ಟ: ವಿಜ್ಞಾನ ಕಲಿಕೆಯಲ್ಲಿ ಪ್ರಯೋಗಾಲಯ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಗ್ರಾಮಾಂತರ ಟ್ರಸ್ಟ್ ನ ಪಿ.ಉಷಾಶೆಟ್ಟಿ ಹೇಳಿದರು.

ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಮಾಂತರ ಟ್ರಸ್ಟ್, ಸಿಟ್ರಿಕ್ಸ್ ಸಂಸ್ಥೆ, ಸ್ಟೆಮ್ ಸಂಸ್ಥೆ ಸಹಯೋಗದಲ್ಲಿ ಪ್ರಾರಂಭವಾದ ಪುಟಾಣಿ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡು ಸರ್ಕಾರಿ ಶಾಲೆಗಳು ಎಸ್‌ಟಿಇಎಂ ಸೈನ್ಸ್ ಲ್ಯಾಬ್‌ಗಳ ಸೌಲಭ್ಯವನ್ನು ಹೊಂದುತ್ತಿವೆ. ಆಜಾದ್ ನಗರದ ಸರ್ಕಾರಿ ಉರ್ದು ಪ್ರೌಢಶಾಲೆ ಮತ್ತು ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪುಟಾಣಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಅನುಕೂಲವಾಗುವ 75 ವಿಜ್ಞಾನ ಪರಿಕಲ್ಪನೆಗಳ ಮಾದರಿಗಳನ್ನು ನೀಡಲಾಗುತ್ತಿದೆ. ಎರಡೂ ಶಾಲೆಗಳ ವಿಜ್ಞಾನ ಮತ್ತು ಗಣಿತದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ದಾನಿಗಳಾದ ಸಿಟ್ರಿಕ್ಸ್ ಆರ್‌ಆ್ಯಂಡ್‌ಡಿ ಇಂಡಿಯಾ, ಗ್ರಾಮಂತರ ಟ್ರಸ್ಟ್ ಸಹಯೋಗದಲ್ಲಿ ಪ್ರಯೋಗಾಲಯಗಳನ್ನು ಮಾಡಲಾಗಿದೆ’ ಎಂದರು.

ADVERTISEMENT

ಆರ್.ಟಿ.ಇ ಕಾರ್ಯಪಡೆಯ ವತಿಯಿಂದ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳು ಮತ್ತು ರ‍್ಯಾಕ್ ಕೊಡುಗೆಯಾಗಿ ನೀಡಲಾಯಿತು. ಶಾಲಾ ಮಕ್ಕಳೇ ಕಾರ್ಯಕ್ರಮದ ಸ್ವಾಗತ, ನಿರೂಪಣೆ, ವಂದನಾರ್ಪಣೆ ನಡೆಸಿದ್ದು ವಿಶೇಷವಾಗಿತ್ತು. ತಾತಹಳ್ಳಿ ಸರ್ಕಾರಿ ಶಾಲೆಯ ಮೊಟ್ಟಮೊದಲ ಯೂಟ್ಯೂಬ್ ಚಾನೆಲ್ ‘ಅವಲಕ್ಕಿ ಪವಲಕ್ಕಿ’ಯನ್ನು ಉದ್ಘಾಟಿಸಲಾಯಿತು.

ಒರಾಕಲ್ ಸಂಸ್ಥೆಯ ಶ್ರೀನಿವಾಸಗೌಡ, ಆರ್.ಟಿ.ಇ ಕಾರ್ಯಪಡೆಯ ಸತೀಶ್, ಪೀಣ್ಯ ಜ್ಯೂನಿಯರ್ ಕಾಲೇಜ್ ಉಪಪ್ರಾಂಶುಪಾಲರಾದ ನಾಗರತ್ನಮ್ಮ, ಅಬ್ಲೂಡು ಸಿ.ಆರ್.ಸಿ ಸಂಪನ್ಮೂಲ ವ್ಯಕ್ತಿ ಸುರೇಶ್ ಬಾಬು, ಮುಖ್ಯಶಿಕ್ಷಕಿ ಸರಸ್ವತಮ್ಮ, ಶಿಕ್ಷಕರಾದ ಎಸ್.ಕಲಾಧರ್, ಡಿ.ಎಸ್.ಶ್ರೀಕಾಂತ್, ಕೆ.ಎ.ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.