ಚಿಕ್ಕಬಳ್ಳಾಪುರ: ನಗರದ ಪೊಲೀಸ್ ಸಮುದಾಯ ಭವನದಲ್ಲಿ ಕಳೆದ 15 ದಿನಗಳಿಂದ ನಡೆದ ಬೇಸಿಗೆ ಶಿಬಿರಕ್ಕೆ ಶುಕ್ರವಾರ ತೆರೆ ಬಿದ್ದಿತು. 120ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ಕುಟುಂಬದ ಮಕ್ಕಳ ಜೊತೆಗೆ ನಾಗರಿಕರ ಮಕ್ಕಳೂ ಸಹ ಶಿಬಿರದಲ್ಲಿ ಪಾಲ್ಗೊಂಡಿದ್ದರು. ನೃತ್ಯ, ಸಂಗೀತ, ಸಮರ ಕಲೆಗಳು, ಅಬಕಾಸ್, ರಸಪ್ರಶ್ನೆ ಸ್ಪರ್ಧೆ, ನೆನಪಿನ ಶಕ್ತಿಗೆ ಸಂಬಂಧಿಸಿದ ಸ್ಪರ್ಧೆಗಳು, ಯೋಗ, ಪಥಸಂಚಲನ ಹೀಗೆ ವಿವಿಧ ವಿಚಾರಗಳ ಬಗ್ಗೆ ಪೊಲೀಸರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಡಿಎಆರ್ ಪೊಲೀಸರು ವಿವಿಧ ವಿಚಾರಗಳು ಕುರಿತು ಮಕ್ಕಳಿಗೆ ಅಣಕು ಪ್ರದರ್ಶನಗಳ ಮೂಲಕ ವಿಚಾರಗಳ ಬಗ್ಗೆ ಅರಿವು ಮೂಡಿಸಿದರು.
ಸಮಾರೋಪದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಮಕ್ಕಳ ಜೊತೆ ಬೆರೆತು ನಲಿದರು. ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ನಡೆಸಿಕೊಟ್ಟ ನೃತ್ಯಗಳು ಗಮನ ಸೆಳೆದವು.
ಕುಶಾಲ್ ಚೌಕ್ಸೆ ಮಾತನಾಡಿ, ಬೇಸಿಗೆ ಶಿಬಿರವು ಮಕ್ಕಳ ಮನೋವಿಕಾಸಕ್ಕೆ ಕಾರಣವಾಗಿದೆ. ಇಂತಹ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ಬೆಳೆಯುತ್ತದೆ. ಮಹಿಳಾ ಠಾಣೆ, ಸಿಇಎನ್ ಠಾಣೆ, ನಗರ ಠಾಣೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಬಿರಕ್ಕೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.