
ಚೇಳೂರು: ತಾಲ್ಲೂಕಿನಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ವೇಗದ ದೈತ್ಯರಂತೆ ಸಾಗುತ್ತಿವೆ. ಅತಿವೇಗದಿಂದ ಪ್ರಯಾಣಿಕರು ಮತ್ತು ಪಾದಚಾರಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿವೆ.
ಬಹುತೇಕ ಬಸ್‌ಗಳಿಗೆ ವೇಗದ ಮಿತಿ ಇಲ್ಲ. ಅನೇಕ ಬಸ್‌ಗಳಿಗೆ ವಿಮಾ ರಕ್ಷಣೆಯೂ ಇಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿವೆ. ಆಂಧ್ರದ ಗಡಿಯ ಚೇಳೂರು ತಾಲ್ಲೂಕಿನಲ್ಲಿ ಖಾಸಗಿ ಬಸ್‌ಗಳ ಈ ಆಟವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೋಡುತ್ತಿಲ್ಲ.
ಚೇಳೂರು– ಚಿಂತಾಮಣಿ– ಬಾಗೇಪಲ್ಲಿ ತಾಲ್ಲೂಕಿನ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳನ್ನು ಸಂಪರ್ಕಿಸುವಲ್ಲಿ ಖಾಸಗಿ ಬಸ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಇದೇ ಬಸ್ಸುಗಳು ಈಗ ಜನರ ಪಾಲಿಗೆ ಆತಂಕದ ಮೂಲವಾಗಿವೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತಲುಪುವ ಮತ್ತು ಹೆಚ್ಚು ಟ್ರಿಪ್‌ಗಳನ್ನು ಮಾಡುವ ಸ್ಪರ್ಧೆಯಲ್ಲಿ, ಚಾಲಕರು ಬಸ್‌ಗಳನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದಾರೆ. ತಿರುವುಗಳಲ್ಲೂ ವೇಗ ಕಡಿಮೆ ಮಾಡದೆ, ಇತರ ವಾಹನಗಳಿಗೆ ದಾರಿ ಬಿಡದೆ ಮುನ್ನುಗ್ಗುವುದು ಸಾಮಾನ್ಯ ದೃಶ್ಯವಾಗಿದೆ.
ಈ ವೇಗದ ಅಬ್ಬರದಿಂದ ಸಣ್ಣಪುಟ್ಟ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಇವೆ. ವರ್ಷದ ಹಿಂದೆ ಪಾತಪಾಳ್ಯ ಸಮೀಪದ ಕೊಳ್ಳವಾರಪಲ್ಲಿ ಕ್ರಾಸ್ ಬಳಿ ನಡೆದ ಬಸ್ ಅಪಘಾತದಿಂದ ಇಬ್ಬರು ಮೃತಪಟ್ಟಿದ್ದರು.
ಬಸ್‌ಗಳಲ್ಲಿ ಅಳವಡಿಸಬೇಕಾದ ವೇಗ ನಿಯಂತ್ರಕ ಸಾಧನಗಳು ನಾಮಕಾವಸ್ತೆಗೆ ಎನ್ನುವಂತಿವೆ. ಆರ್.ಟಿ.ಒ ಅಧಿಕಾರಿಗಳು ತಪಾಸಣೆ ನಡೆಸುವ ಗೋಜಿಗೆ ಹೋಗುತ್ತಿಲ್ಲ.
ವಿಮೆಯ ಕಂತುಗಳನ್ನು ಉಳಿಸುವ ದುರಾಸೆಯಿಂದ ಕೆಲವು ಬಸ್ ಮಾಲೀಕರು ಕಾನೂನನ್ನು ಗಾಳಿಗೆ ತೂರಿದ್ದಾರೆ. ಬಸ್‌ಗಳಿಗೆ ವಿಮೆಯೂ ಇಲ್ಲ. ಕಾಲಕಾಲಕ್ಕೆ ವಾಹನಗಳ ದಾಖಲೆಗಳನ್ನು, ವಿಮಾ ಪ್ರಮಾಣಪತ್ರವನ್ನು ಪರಿಶೀಲಿಸುವುದು ಆರ್.ಟಿ.ಒ ಅಧಿಕಾರಿಗಳ ಕರ್ತವ್ಯ. ಆದರೆ, ಈ ಕರ್ತವ್ಯವನ್ನು ಅವರು ನಿಷ್ಠೆಯಿಂದ ನಿರ್ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.
ಹಠಾತ್ ತಪಾಸಣೆ: ಯಾವುದೇ ಮುನ್ಸೂಚನೆ ನೀಡದೆ ಖಾಸಗಿ ಬಸ್‌ಗಳ ವೇಗ ಮತ್ತು ದಾಖಲೆಗಳನ್ನು ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಬೇಕು. ನಿಯಮ ಉಲ್ಲಂಘಿಸುವ ಚಾಲಕರು ಮತ್ತು ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ವಿಮೆ ಸೇರಿದಂತೆ ದಾಖಲೆಗಳಿಲ್ಲದ ಬಸ್ಸುಗಳನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.