ADVERTISEMENT

ಶಿಡ್ಲಘಟ್ಟ ತಾಲ್ಲೂಕು ಆಸ್ಪತ್ರೆಗೆ ಸಮಸ್ಯೆಯ ಸೋಂಕು!

ಸಾರ್ವಜನಿಕ ಆಸ್ಪತ್ರೆಯ ಮೇಲೆ ಹೆಚ್ಚಿದ ಒತ್ತಡ, ಸೌಲಭ್ಯ ಹೆಚ್ಚಿಸಲು ಸಾರ್ವಜನಿಕರ ಒತ್ತಾಯ

ಡಿ.ಜಿ.ಮಲ್ಲಿಕಾರ್ಜುನ
Published 5 ಏಪ್ರಿಲ್ 2020, 19:30 IST
Last Updated 5 ಏಪ್ರಿಲ್ 2020, 19:30 IST
ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ
ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ   

ಶಿಡ್ಲಘಟ್ಟ: ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯನ್ನು ನೂರು ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಎಂದು ಹೆಮ್ಮೆಯಿಂದ ಹೇಳಿಕೊಂಡರೂ, ಅಲ್ಲಿ ಲೆಕ್ಕ ಹಾಕಿದರೆ ಮಂಚಗಳಿರುವುದು ಕೇವಲ ಎಪ್ಪತ್ತೆರಡು ಮಾತ್ರ!

ನೀರು, ಔಷಧಿಗಳು, ವೈದ್ಯರು ಎಲ್ಲಾ ಸಮರ್ಪಕವಾಗಿವೆ ಎಂದು ವೈದ್ಯರು ಹೇಳುತ್ತಾರಾದರೂ, ರೋಗಿಗಳು ಕುಡಿಯುವ ನೀರಿಗಾಗಿ ಪರದಾಡುವುದು, ವೈದ್ಯರ ಚೀಟಿ ಹಿಡಿದು ಖಾಸಗಿ ಔಷಧಿ ಅಂಗಡಿಗಳಿಗೆ ಎಡತಾಕುವುದು ಹಾಗೂ ಕೆಲ ತಜ್ಞ ವೈದ್ಯರಿಲ್ಲದೆ ಜಿಲ್ಲಾ ಕೇಂದ್ರಕ್ಕೆ ಹೋಗುವುದು, ಖಾಸಗಿ ಸ್ಕ್ಯಾನಿಂಗ್ ಹಾಗೂ ಪ್ರಯೋಗಾಲಯಗಳಿಗೆ ಹೋಗಿ ಹಣ ತೆತ್ತು ಬರುವುದೂ ನಿಂತಿಲ್ಲ.

ಈಗ ಕರೊನಾ ಭೀತಿಯಿಂದಾಗಿ ತಾಲ್ಲೂಕಿನಾದ್ಯಂತ ಖಾಸಗಿ ಕ್ಲಿನಿಕ್ ಗಳು ಮುಚ್ಚಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ಒತ್ತಡ ಹೆಚ್ಚಿದೆ. ಆದರೆ, ನೀರು ಹಾಗೂ ಸಿಬ್ಬಂದಿಯ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.

ADVERTISEMENT

ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಶಾಸಕರು, ಸಂಸದರು, ಜಿಲ್ಲಾಡಳಿತ ಕೇವಲ ಭರವಸೆಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ ಹೊರತು ಆಸ್ಪತ್ರೆಯ ಸಮಸ್ಯೆಗಳಿಗೆಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸೋತಿದ್ದಾರೆ ಎಂದು ರೋಗಿಗಳು ಅಸಮಧಾನ ವ್ಯಕ್ತಪಡಿಸುತ್ತಾರೆ.

ಎಲ್ಲೆಡೆ ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಬೇಕೆಂದು ಕಳೆದ ವರ್ಷವೇ ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ ಇದುವರೆಗೂ ವಿಶಾಲವಾಗಿ ಹರಡಿರುವ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ಈ ಸೌಭಾಗ್ಯ ಕೂಡಿ ಬಂದಿಲ್ಲ.

ನಗರದಲ್ಲಿ ಅರವತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ತಾಲ್ಲುಕಿನ ಗ್ರಾಮಾಂತರ ಪ್ರದೇಶಗಳಿಂದಲೂ ಆಸ್ಪತ್ರೆಗೆ ಬಡರೋಗಿಗಳು ಬರುತ್ತಾರೆ. ಆದರೆ ಇಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯಿಂದಾಗಿ ಜಿಲ್ಲಾ ಕೇಂದ್ರಕ್ಕೆ ಅಥವಾ ಬೆಂಗಳೂರಿಗೆ ತೆರಳಬೇಕಾಗುತ್ತದೆ. ಬಡವರಿಗೆ ಇದು ತ್ರಾಸದಾಯಕವಾಗುತ್ತಿದೆ.

ಈವರೆಗೆ ನಗರಸಭೆಯವರು ಆಸ್ಪತ್ರೆಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಡಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ಬೇಸರ ವ್ಯಕ್ತಪಡಿಸುತ್ತಾರೆ. ಇಷ್ಟೇ ಅಲ್ಲದೆ ನಿಯಮಿತವಾಗಿ ಆಸ್ಪತ್ರೆಗೆ ಅಗತ್ಯ ಪ್ರಮಾಣದ ನೀರನ್ನು ಟ್ಯಾಂಕರ್ ಮೂಲಕ ಕೂಡ ಪೂರೈಸುತ್ತಿಲ್ಲ ಎಂಬ ದೂರು ಕೇಳಿಬರುತ್ತದೆ.

ನಗರಸಭೆಯವರು ಧೋರಣೆಗೆ ಬೇಸತ್ತು ಆಸ್ಪತ್ರೆ ವತಿಯಿಂದಲೇ ನಿತ್ಯ ಎರಡ್ಮೂರು ಟ್ಯಾಂಕರ್‌ ನೀರು ಖಾಸಗಿಯವರಿಂದ ಖರೀದಿಸಿ ಆಸ್ಪತ್ರೆ ನಿರ್ವಹಿಸಲಾಗುತ್ತಿದೆ. ಆದರೂ ಇದು ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿದೆ. ಸಮಸ್ಯೆ ಮಾತ್ರ ಸರಿ ಹೋಗುತ್ತಿಲ್ಲ.

ಆಸ್ಪತ್ರೆಯಲ್ಲಿ ಕೇವಲ ಒಂದೇ ಒಂದು ವೆಂಟಿಲೇಟರ್ ಇದೆ. ಜನಪ್ರತಿನಿಧಿಗಳು ಕನಿಷ್ಠ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೂಲ ಸೌಕರ್ಯಗಳನ್ನು ಹೆಚ್ಚಿಸದೇ ಇದ್ದರೆ ಹೇಗೆ? ಬಡ ರೋಗಿಗಳು ದೂರದ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಲು ಇಲ್ಲಿ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.