ADVERTISEMENT

ಗುಡಿಬಂಡೆಯಲ್ಲಿ ಪುತ್ಥಳಿ ವಿವಾದ: ಒಕ್ಕಲಿಗರು, ಬಲಿಜ ಸಮುದಾಯದ ತಿಕ್ಕಾಟ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 14:07 IST
Last Updated 30 ಏಪ್ರಿಲ್ 2025, 14:07 IST
<div class="paragraphs"><p>ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡವರನ್ನು ಪೊಲೀಸರು ಚದುರಿಸಿದರು</p></div>

ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡವರನ್ನು ಪೊಲೀಸರು ಚದುರಿಸಿದರು

   

ಪ್ರಜಾವಾಣಿ ಚಿತ್ರ

ಗುಡಿಬಂಡೆ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿ ನಿರ್ಮಾಣದ ವಿಚಾರವಾಗಿ ಒಕ್ಕಲಿಗರು ಮತ್ತು ಬಲಿಜ ಸಮುದಾಯ ನಡುವೆ ಬುಧವಾರ ತೀವ್ರ ಜಟಾಪಟಿ ನಡೆಯಿತು. ಎರಡೂ ಸಮುದಾಯಗಳ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. 

ADVERTISEMENT

ಪರಿಸ್ಥಿತಿ ನಿಯಂತ್ರಿಸಲು ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರೇ ಲಾಠಿ ಹಿಡಿದು ರಸ್ತೆಗೆ ಇಳಿದರು. ಪ್ರತಿಭಟನೆ ನಡೆಸಿದವರನ್ನು ಎಸ್‌ಪಿ ಅವರೇ ಎಳೆದು ಸ್ಥಳದಿಂದ ಕದಲಿಸಿದರು.

ಗುಡಿಬಂಡೆಯ ಅಂಬೇಡ್ಕರ್ ವೃತ್ತದಲ್ಲಿ ಎರಡು ಗುಂಟೆ ಸರ್ಕಾರಿ ಕರಾಬ್ ಇದೆ. ಇಲ್ಲಿ ಪಟ್ಟಣ ಪಂಚಾಯಿತಿಯಿಂದ  ₹10 ಲಕ್ಷ ವ್ಯಯಿಸಿ ಉದ್ಯಾನ ನಿರ್ಮಿಸಲಾಗಿದೆ. 2022ರಲ್ಲಿ ನಡೆದ ಕೆಂಪೇಗೌಡ ಜಯಂತಿಯ ಕಾರ್ಯಕ್ರಮದಲ್ಲಿ ಉದ್ಯಾನದಲ್ಲಿ ಆವಳಿ ಬೈರೇಗೌಡ ಅವರ ವಿಗ್ರಹ ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿತ್ತು.

ಇತ್ತೀಚೆಗೆ ನಡೆದ ಕೈವಾರ ತಾತಯ್ಯ ಅವರ ಜಯಂತಿಯಲ್ಲಿ ಬಲಿಜ ಸಮುದಾಯದ ಮುಖಂಡರು ಈ ಸರ್ಕಾರಿ ಜಾಗದಲ್ಲಿ ಕೈವಾರ ತಾತಯ್ಯ ವಿಗ್ರಹ ಪ್ರತಿಷ್ಠಾಪಿಸಲು ನಿರ್ಧರಿಸಿದ್ದರು. ಪಟ್ಟಣ ಪಂಚಾಯಿತಿ ಸಹ ಕೈವಾರ ತಾತಯ್ಯ ಅವರ ವಿಗ್ರಹ ಪ್ರತಿಷ್ಠಾಪಿಸಲು ನಿರ್ಣಯ ಸಹ ಕೈಗೊಂಡಿತ್ತು.

ಈ ವಿಚಾರವಾಗಿ ಎರಡೂ ಸಮುದಾಯಗಳ ನಡುವೆ ತಿಕ್ಕಾಟ ಆರಂಭವಾಗಿತ್ತು. ಬುಧವಾರ ಬಲಿಜ ಸಮುದಾಯವರು ಕೈವಾರ ತಾತಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಭೂಮಿ ನೆರವೇರಿಸಿದರು. ಇದಕ್ಕೆ ತೀವ್ರ ಅಸಮಾಧಾನ  ವ್ಯಕ್ತಪಡಿಸಿದ ಒಕ್ಕಲಿಗ ಸಮುದಾಯದವರು ಉದ್ಯಾನದ ಮುಂಭಾಗದಲ್ಲಿ ಪ್ರತಿಭಟಿಸಿದರು.

ಸ್ಥಳಕ್ಕೆ ಬಂದ ಸರ್ಕಲ್ ಇನ್‌ಸ್ಪೆಕ್ಟರ್ ನಯಾಜ್ ಬೇಗ ಮತ್ತು ತಹಶೀಲ್ದಾರ್ ಸಿಗ್ಬತುಲ್ಲ ಮುಖಂಡರ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು. ನಂತರ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಪ್ರತಿಭಟನಾಕಾರರನ್ನು ಚದುರಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ದ್ವಾರಕನಾಥ ನಾಯ್ಡು ಮಾತನಾಡಿ, ‘ಪಟ್ಟಣದ ಸರ್ವೆ ನಂಬರ್ 259/3 ರಲ್ಲಿ ಒಟ್ಟು 39 ಗುಂಟೆ ಜಾಗವಿದೆ. ಅದರಲ್ಲಿ 9 ಗುಂಟೆ ಆ ಖರಾಬ್ ಮತ್ತು 2 ಗುಂಟೆ ಬಿ ಖರಾಬ್ ಇದೆ. ಬಿ ಖರಾಬಿನಲ್ಲಿ ಕೈವಾರ ತಾತಯ್ಯ ಅವರ ವಿಗ್ರಹ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಪೊಲೀಸರು ಕಾರ್ಯಕ್ರಮ ನಿಲ್ಲಿಸಲು ಸೂಚಿಸಿದರು. ನಾವು 15 ದಿನಗಳಿಂದ ಭೂಮಿ ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಇಲ್ಲಿ ಕೈವಾರ ತಾತಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯು ನಿರ್ಣಯ ಕೈಗೊಂಡಿದೆ. ಇದು ನಮ್ಮ ಜಾಗ ನಮಗೆ ಕೊಡಿ’ ಎಂದು ಆಗ್ರಹಿಸಿದರು. 

ಒಕ್ಕಲಿಗ ಸಮುದಾಯದ ತಾಲ್ಲೂಕು ಅಧ್ಯಕ್ಷ ಡಿ.ಎನ್ ಮಂಜುನಾಥ್ ರೆಡ್ಡಿ, ಗುಡಿಬಂಡೆ ತಾಲ್ಲೂಕಿನಲ್ಲಿ ನಮ್ಮ ಸಮುದಾಯ ಹೆಚ್ಚಿದೆ. ಗುಡಿಬಂಡೆ ಕೋಟೆ ಹಾಗೂ ಗುಡಿಬಂಡೆ ಕೆರೆ ನಿರ್ಮಾಣಕ್ಕೆ ಸಮುದಾಯದ ಆವಳಿ ಬೈರೇಗೌಡ ಅವರು ಶ್ರಮಿಸಿದ್ದಾರೆ ಎಂದರು.

ಈ ಬಿ ಖರಾಬ್‌ ಅನ್ನು ನಮ್ಮ ಸಮುದಾಯಕ್ಕೆ ಮೀಸಲಿಡಿ ಎಂದು 2022ರಿಂದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅರ್ಜಿ ಸಹ ನೀಡಿದ್ದೇವೆ. ಆದರೆ ನಮ್ಮ ಅರ್ಜಿಗೆ ನ್ಯಾಯ ದೊರಕಿಸುತ್ತಿಲ್ಲ. ಆದರೆ ಪಟ್ಟಣ ಪಂಚಾಯಿತಿಯವರು ಮತ್ತು ಬಲಿಜ ಸಮುದಾಯದವರು ತಾತಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಪೂಜೆ ನಡೆಸಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಜಾಗವನ್ನು ನಮಗೆ ನೀಡದಿದ್ದರೆ ತಾಲ್ಲೂಕು ಕಚೇರಿ ಆವರಣದಲ್ಲಿ ಬೈರೇಗೌಡ ಪ್ರತಿಮೆ ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎರಡೂ ಸಮುದಾಯಗಳ ಮುಖಂಡರು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಪರಸ್ಪರ ಧಿಕ್ಕಾರದ ಘೋಷಣೆಗಳನ್ನು ಕೂಗಿಕೊಂಡು ಫ್ಲೆಕ್ಸ್‌ಗಳನ್ನು ಹರಿದು ಹಾಕಲು ಮುಂದಾದರು.

ಒಕ್ಕಲಿಗ ಸಮುದಾಯದ ಪರವಾಗಿ ಎಚ್.ಪಿ ಲಕ್ಷ್ಮಿನಾರಾಯಣ, ನಾಗರಾಜ್ ರೆಡ್ಡಿ ಹಳೇಗುಡಿಬಂಡೆ ಮಂಜುನಾಥ್ ರೆಡ್ಡಿ, ಯರಹಳ್ಳಿ ಮಧು ರೆಡ್ಡಿ ಮತ್ತಿತರರು ಪ್ರತಿಭಟನೆ ನಡೆಸಿದರು

ಬಲಿಜ ಸಮುದಾಯದ ಪರವಾಗಿ ಜಿ.ಟಿ ಶ್ರೀನಿವಾಸ್, ವೆಂಕ, ಪ್ರಕಾಶ್, ಅಂಬರೀಶ್, ವಾಲಿಬಾಲ್ ಸೀನಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.