
ಗೌರಿಬಿದನೂರು: ಕಳೆದ ನವೆಂಬರ್ 2ರಂದು ನಗರದ ಬಿ.ಎಚ್ ರಸ್ತೆಯಲ್ಲಿ ಬೀದಿದೀಪ ಬಿದ್ದಿದ್ದರಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿವಿಪುರಂ ನಿವಾಸಿ ಸಿಖಂದರ್ ಖಾನ್ (45) ಸೋಮವಾರ ಮೃತಪಟ್ಟಿದ್ದಾರೆ.
ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು, ನಗರಸಭೆ ಕಾರ್ಯಾಲಯದ ಆವರಣದಲ್ಲಿ ಶವ ಇಟ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.
ಘಟನಾ ಸ್ಥಳಕ್ಕೆ ಬಂದ ನಗರಸಭೆ ಪೌರಾಯುಕ್ತ ಕೆ.ಜಿ. ರಮೇಶ್, ಮೃತ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ‘ಬಿ.ಎಚ್ ರಸ್ತೆಯಲ್ಲಿ 2015–16ರಲ್ಲಿ ಕಂಬಗಳನ್ನು ಅಳವಡಿಸಲಾಗಿತ್ತು. ಅವುಗಳಿಗೆ ಅಳವಡಿಸಲಾಗಿದ್ದ ಕೇಬಲ್‌ಗಳನ್ನು ಕೋತಿಗಳು ನೇತಾಡಿ, ಜಗ್ಗಾಡಿದ್ದರಿಂದಾಗಿ ಕೇಬಲ್ ತಂತಿಗಳು ಸಡಿಲಗೊಂಡಿದ್ದು, ವಾಹನಗಳಿಗೆ ಸಿಕ್ಕಿಹಾಕಿಕೊಂಡಿದ್ದರಿಂದ ಅವಘಡ ಸಂಭವಿಸಿದೆ. ಇದನ್ನು ಸರಿಪಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯೊಂದಿಗೆ ಚರ್ಚಿಸಿ, ಮೃತನ ಕುಟುಂಬಕ್ಕೆ ಪರಿಹಾರ ನೀಡಲಾಗುವುದು’ ಎಂದರು.
ವೃತ್ತ ನಿರೀಕ್ಷಕ ಅಂಜನ್ ಕುಮಾರ ಮಾತನಾಡಿ, ಈ ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಮೃತನ ಸಂಬಂಧಿಕರು ಹಾಗೂ ನಗರಸಭೆ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.