ADVERTISEMENT

ಚೇಳೂರು | ರಸ್ತೆಯಲ್ಲಿ ಹೊಂಡ; ಬಸ್ ಸಂಚಾರ ಬಂದ್

ಬಿಳ್ಳೂರು-ಶಿವಪುರ-ಚಾಕವೇಲು ರಸ್ತೆ ಭಾರಿ ಅಧ್ವಾನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:05 IST
Last Updated 22 ಸೆಪ್ಟೆಂಬರ್ 2025, 6:05 IST
ಬಿಳ್ಳೂರು ಗ್ರಾಮದಿಂದ ಶಿವಪುರ ದಾರಿಯಲ್ಲಿ ನೀರು ತುಂಬಿದ ರಸ್ತೆ
ಬಿಳ್ಳೂರು ಗ್ರಾಮದಿಂದ ಶಿವಪುರ ದಾರಿಯಲ್ಲಿ ನೀರು ತುಂಬಿದ ರಸ್ತೆ   

ಚೇಳೂರು: ತಾಲ್ಲೂಕಿನ ಬಿಳ್ಳೂರು ಗ್ರಾಮದಿಂದ ಶಿವಪುರ ಮತ್ತು ಬಿಳ್ಳೂರು- ಚಾಕವೇಲು ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ತೀವ್ರ ಅಧ್ವಾನವಾಗಿದೆ. ಮಲ್ಲೇಪಲ್ಲಿ ಗ್ರಾಮದಿಂದ ಗ್ಯಾದಿವ್ಯಾಂಡ್ಲಪಲ್ಲಿವರೆಗಿನ ರಸ್ತೆ ಮತ್ತು ಬಿಳ್ಳೂರು ಗ್ರಾಮದಿಂದ ಚಾಕವೇಲು ಸಂಪರ್ಕ ಕಲ್ಪಿಸುವ ರಸ್ತೆಗಳ ದುಃಸ್ಥಿತಿಯಿಂದ ಜನರಿಗೆ ತೀವ್ರ ತೊಂದರೆಯಾಗಿದೆ. 

ಇದೇನು ರಸ್ತೆಯೊ ಅಥವಾ ಕೆರೆಯೊ ಎನ್ನುವ ಸ್ಥಿತಿ ಇದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ಮಳೆ ಬಂದರೆ ನೀರಿನಿಂದ ಭರ್ತಿಯಾಗುತ್ತಿದೆ.

ಹಲವು ವರ್ಷಗಳಿಂದ ಈ ರಸ್ತೆಗಳನ್ನು ನಿರ್ಲಕ್ಷಿಸಿರುವುದರಿಂದ ಅವು ಸಂಪೂರ್ಣವಾಗಿ ಹಾಳಾಗಿವೆ. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳಿವೆ. ಮಳೆಗಾಲದಲ್ಲಿ ಅವು ನೀರಿನಿಂದ ತುಂಬಿ ಸಣ್ಣ ಕೆರೆಗಳಂತೆ ಭಾಸವಾಗುತ್ತವೆ.

ADVERTISEMENT

ಈ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರಂತರವಾಗಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ರಸ್ತೆಯು ಹಲವು ಗ್ರಾಮಗಳ ಜನರ ದೈನಂದಿನ ಜೀವನಕ್ಕೆ ಅತ್ಯಂತ ಮುಖ್ಯವಾಗಿದೆ.

ಬಿಳ್ಳೂರು ಮತ್ತು ಶಿವಪುರ ಮಧ್ಯದ ಈ ಸಂಪರ್ಕ ಕಡಿತದಿಂದ ಸುತ್ತಮುತ್ತಲಿನ ಹಳ್ಳಿಗಳಾದ ಗ್ಯಾದಿವ್ಯಾಂಡ್ಲಪಲ್ಲಿ, ಶಿವಪುರ, ಬೆಸ್ತಲಪಲ್ಲಿ, ಕುರುಬರಹಳ್ಳಿ, ದೊಡ್ಡಿವಾರಪಲ್ಲಿ, ಲಕ್ಕಸಂದ್ರ, ಚಿನ್ನಗಾನಪಲ್ಲಿ ಹಾಗೂ ಇತರೆ ಗ್ರಾಮಗಳ ಜನರು ಬಿಳ್ಳೂರು ಗ್ರಾಮಕ್ಕೆ ತೆರಳಲು ಹೆಚ್ಚುವರಿ ದೂರ ಸುತ್ತಿ ಬಳಸಿಬರಬೇಕಾಗಿದೆ.

ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿವೆ. ಬಿಳ್ಳೂರು ಗ್ರಾಮದಲ್ಲಿ ವಾರದ ಸಂತೆ ನಡೆಯುತ್ತಿದೆ. ರೈತರು ಸಂತೆಗೆ ಸರಕು ಸಾಗಿಸಲು ಪರದಾಡುತ್ತಿದ್ದಾರೆ.

ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಪ್ರಯಾಣಿಸುವುದು ಒಂದು ದುಃಸ್ವಪ್ನವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರಸ್ತೆಯ ಕೆಟ್ಟ ಸ್ಥಿತಿಯಿಂದಾಗಿ ಮಲ್ಲೇಪಲ್ಲಿ ಗ್ರಾಮದಿಂದ ಗ್ಯಾದಿವ್ಯಾಂಡ್ಲಪಲ್ಲಿ ವರೆಗಿನ ಮಾರ್ಗದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರು ದೈನಂದಿನ ಪ್ರಯಾಣಕ್ಕಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕೂಡಲೇ ಈ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. 

ಚಾಕವೇಲು- ಬಿಳ್ಳೂರು ರಸ್ತೆ ಸ್ಥಿತಿ
ಕಾಮಗಾರಿ ಪ್ರಾರಂಭ
ಬಿಳ್ಳೂರು ಶಿವಪುರ ಮತ್ತು ಬಿಳ್ಳೂರು ಚಾಕವೇಲು ರಸ್ತೆ ಸಮಸ್ಯೆ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ರಸ್ತೆ ದುರಸ್ತಿ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇವೆ. ಕೆಲವೇ ದಿನಗಳಲ್ಲಿ ತಾಲ್ಲೂಕಿನ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು.  ಅರುಣಾಚಲ ಎಇಇ ಲೋಕೋಪಯೋಗಿ ಇಲಾಖೆ ಬಾಗೇಪಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ  ನಮ್ಮ ಭಾಗದ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಯಾರೂ ಕಾಳಜಿ ತೋರದಿರುವುದು ದುರದೃಷ್ಟ. ಚುನಾವಣೆ ಸಮಯದಲ್ಲಿ ಮಾತ್ರ ಭರವಸೆಗಳನ್ನು ನೀಡುತ್ತಾರೆ. ನಂತರ ಯಾರೂ ನಮ್ಮ ಕಡೆ ತಿರುಗಿ ನೋಡುವುದಿಲ್ಲ. ವಿನಯ್ ಬಿಳ್ಳೂರು ನಿವಾಸಿ  ರಸ್ತೆಗಳು ತುಂಬಾ ಹದೆಗಿಟ್ಟಿವೆ. ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಪರದಾಡುವಂತಾಗಿದೆ. ವಾಹನ ಸವಾರರು ಮುಖ್ಯವಾಗಿ ದ್ವಿಚಕ್ರವಾಹನ ಸವಾರರು ಮಳೆಗಾಲದಲ್ಲಿ ರಸ್ತೆ ಯಾವುದು ಗುಂಡಿಯ ಯಾವುದು ಎಂದು ಗೊತ್ತಾಗದೆ ಅನೇಕ ಬಾರಿ ಗುಂಡಿಗೆ ಬಿದ್ದು ಅಪಘಾತಕ್ಕೀಡಾಗಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಎಂ.ಎಸ್.ನರಸಿಂಹಾರೆಡ್ಡಿ ರೈತ ಸಂಘದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.