ADVERTISEMENT

ಶಿಡ್ಲಘಟ್ಟ | ನಗರದ ಹೊರವಲಯಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 14:49 IST
Last Updated 1 ಜುಲೈ 2023, 14:49 IST
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಶಾಸಕ ಬಿ.ಎನ್.ರವಿಕುಮಾರ್ ಅವರು ಶನಿವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಗುರುತಿಸಿದ್ದ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಶಾಸಕ ಬಿ.ಎನ್.ರವಿಕುಮಾರ್ ಅವರು ಶನಿವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಗುರುತಿಸಿದ್ದ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು   

ಶಿಡ್ಲಘಟ್ಟ: ರಾಷ್ಟ್ರೀಯ ಹೆದ್ದಾರಿ 234 ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ನಗರದ ಪ್ರವೇಶ ದ್ವಾರದಿಂದ ಚಿಂತಾಮಣಿ ರಸ್ತೆಗೆ ಸಂಪರ್ಕ ಕಲ್ಪಿಸಲು ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಬಿ.ಎನ್.ರವಿಕುಮಾರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ 234 ಚತುಷ್ಪಥ ರಸ್ತೆ ನಗರದ ಅಮ್ಮನಕೆರೆ ಕಟ್ಟೆಯಿಂದ ಬಸ್ ನಿಲ್ದಾಣ ಮುಖಾಂತರ ಮಯೂರ ವೃತ್ತದಲ್ಲಿ ಹಾದು ಹೋದರೆ ಈಗಾಗಲೇ ಇಲ್ಲಿ ವಾಸಿಸುತ್ತಿರುವ ಮನೆ, ಅಂಗಡಿಗಳು ಹಾಳಾಗುತ್ತವೆ. ಹಾಗಾಗಿ ನಗರದ ಹೊರಗಡೆ ಬೈಪಾಸ್ ರಸ್ತೆ ನಿರ್ಮಿಸಿದರೆ ನಾಗರಿಕರ ಹಿತರಕ್ಷಣೆಯಾಗುತ್ತದೆ ಎಂಬ ಜನರ ಮನವಿಯ ಮೇರೆಗೆ ಶನಿವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ನಗರದ ಅಮ್ಮನಕೆರೆ ಕಟ್ಟೆಯಿಂದ ಚಿಂತಾಮಣಿ ರಸ್ತೆಯ ಉದ್ಯಾನವನದವರೆಗೂ ರಸ್ತೆಯ ಅಕ್ಕಪಕ್ಕದಲ್ಲಿ ಬಹಳಷ್ಟು ಮನೆ, ಮಳಿಗೆಗಳಿವೆ. ಇಲ್ಲಿ ಹೆದ್ದಾರಿ ನಿರ್ಮಾಣವಾದರೆ ಇಲ್ಲಿನ ಜನ ಬೀದಿ ಪಾಲಾಗುತ್ತಾರೆ. ಹಾಗಾಗಿ ಜನರ ಹಿತದೃಷ್ಟಿಯಿಂದ ನಗರದ ಹೊರಗಡೆಯಿಂದ ಬೈಪಾಸ್ ರಸ್ತೆ ನಿರ್ಮಾಣ ಮಾಡುವುದರಿಂದ ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದರಿಂದ ಸ್ಥಳೀಯರಿಗೂ ತೊಂದರೆಯಾಗುವುದಿಲ್ಲ ಎಂದರು.

ADVERTISEMENT

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಲ್ಲಿಕಾರ್ಜುನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಮಧುಗಿರಿಯಿಂದ ಪ್ರಾರಂಭವಾಗಿ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು ಗಡಿಯವರೆಗೆ ಚತುಷ್ಪಥ ರಸ್ತೆ ಮಾಡಲು ಅಳತೆ ಮತ್ತು ಸರ್ವೆ ಕಾರ್ಯ ಮುಗಿದಿದೆ. ಶಿಡ್ಲಘಟ್ಟ ನಗರದಲ್ಲಿ ಬೈಪಾಸ್ ರಸ್ತೆಗೆ ಜಾಗ ಗುರುತಿಸಿದ ನಂತರ ಸ್ಥಳೀಯ ಶಾಸಕರ ಗಮನಕ್ಕೆ ತಂದ ನಂತರ ಮುಂದಿನ ಕಾಮಗಾರಿ ನಡೆಸಲು ಮುಂದಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಮಂಜುನಾಥ್, ಮುಖಂಡರಾದ ತಾದೂರು ರಘು, ಬಿ.ನಾರಾಯಣಸ್ವಾಮಿ, ವೇಣುಗೋಪಾಲ್, ಸುರೇಶ್, ಶ್ರೀನಾಥ್, ಲಕ್ಷ್ಮಿನಾರಾಯಣ (ಲಚ್ಚಿ) ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.