ADVERTISEMENT

ಶಿಡ್ಲಘಟ್ಟ: ರೇಷ್ಮೆ ಮಾರುಕಟ್ಟೆ ತೆರೆಯಲು ಆದೇಶ; ಆತಂಕ

ಮಾರುಕಟ್ಟೆ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 15:42 IST
Last Updated 27 ಮಾರ್ಚ್ 2020, 15:42 IST
ರೇಷ್ಮೆ ಗೂಡಿನ ಮಾರುಕಟ್ಟೆ ತೆರೆಯುವಂತೆ ಸರ್ಕಾರ ಹೊರಡಿಸಿರುವ ಆದೇಶ
ರೇಷ್ಮೆ ಗೂಡಿನ ಮಾರುಕಟ್ಟೆ ತೆರೆಯುವಂತೆ ಸರ್ಕಾರ ಹೊರಡಿಸಿರುವ ಆದೇಶ   

ಶಿಡ್ಲಘಟ್ಟ: ಕೊರೊನಾ ಭೀತಿಯಿಂದ ಮುಚ್ಚಲಾಗಿದ್ದ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪುನಃ ತೆರೆಯುವಂತೆ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಆದೇಶವನ್ನು ಹೊರಡಿಸಿರುವ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್ ರೇಷ್ಮೆ ಗೂಡು ಮಾರುಕಟ್ಟೆಯನ್ನು ನಿರ್ಬಂಧನೆ(ಲಾಕ್ ಡೌನ್)ಯಿಂದ ವಿನಾಯಿತಿ ನೀಡಿದ್ದಾರೆ.

‘ರೇಷ್ಮೆ ಗೂಡನ್ನು ಒಂದು ಕೆಜಿಗೆ ₹150 ರಿಂದ ₹200ರರವರೆಗೆ ಕೇಳುತ್ತಿದ್ದಾರೆ. ರೇಷ್ಮೆ ಬೆಳೆಗಾರರ ಸಂಕಷ್ಟವನ್ನು ರಾಜ್ಯ ಕಾರ್ಯದರ್ಶಿ ಗಮನಕ್ಕೆ ತಂದಿದ್ದೆವು. ಅವರು ರೇಷ್ಮೆ ಗೂಡಿನ ಮಾರುಕಟ್ಟೆ ಮುಂದುವರೆಸುವಂತೆ ಆದೇಶಿಸಿದ್ದಾರೆ. ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಜಿಲ್ಲಾಡಳಿತವನ್ನು ಕೋರಿದ್ದೇವೆ’ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

‘ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪ್ರವೇಶಿಸುವ ರೈತರು ಮತ್ತು ರೀಲರುಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ಒಳಬಿಡಬೇಕು. ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಕಟ್ಟಿರಬೇಕು. ರೇಷ್ಮೆ ಗೂಡುಗಳ ಲಾಟ್‌ಗಳನ್ನು ಅಂತರ ಕಾಯ್ದುಕೊಳ್ಳುವಂತೆ ಹಾಕಿಸಬೇಕು. ಜನಸಂದಣಿ ಕಡಿಮೆ ಇರುವಂತೆ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು’ ಎಂದು ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ADVERTISEMENT

ಸಿಲ್ಕ್ ರೀಲರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್ ಮಾತನಾಡಿ, ‘ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಾವಿರಾರು ಮಂದಿ ಒಂದೆಡೆ ಸೇರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮನೆ ಬಿಟ್ಟು ಕದಲದಂತೆ ದೇಶದೆಲ್ಲೆಡೆ ಸಂದೇಶ ರವಾನಿಸಲಾಗಿದೆ. ಆದರೆ ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇದು ಏಕೆ ಅನ್ವಯವಾಗುತ್ತಿಲ್ಲ. ಶಿಡ್ಲಘಟ್ಟದಿಂದಲೇ ಕೊರೊನಾ ಎಲ್ಲೆಡೆ ವ್ಯಾಪಿಸಿದರೆ ಎಂಬ ಭಯ ಆತಂಕ ಕಾಡುತ್ತಿದೆ.

ಮಾರುಕಟ್ಟೆಯಲ್ಲಿ ಸ್ವಚ್ಛತೆಯಿಲ್ಲ. ಕಳೆದ ವಾರವೇ ತಾಲ್ಲೂಕು ಆರೋಗ್ಯಾಧಿಕಾರಿಗಳು ರೇಷ್ಮೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವವರಿಗೆ ಅನುಕೂಲವಾಗಲೆಂದು ಸ್ಯಾನಿಟೈಸರ್, ಲಿಕ್ವಿಡ್ ಸೋಪ್, ಥರ್ಮಲ್ ಸ್ಕ್ಯಾನರ್ ಗಳು, ಬ್ಲೀಚಿಂಗ್ ಪೌಡರ್ ತರಿಸಿಡಬೇಕೆಂದು ಪತ್ರವನ್ನು ಉಪನಿರ್ದೇಶಕರಿಗೆ ನೀಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಅಲ್ಲಿ ಕೈತೊಳೆಯಲು ನೀರಿನ ವ್ಯವಸ್ಥೆಯಿಲ್ಲ’ ಎಂದರು.

ಸ್ವಚ್ಛತೆ ಕೈಗೊಳ್ಳಿ
ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಅವರು,‘ಮಾರುಕಟ್ಟೆಯ ಒಳಗೆ 200 ಲಾಟ್ ಗಿಂತ ಹೆಚ್ಚು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಿ. ಸ್ವಚ್ಛತೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡು ರೇಷ್ಮೆ ಗೂಡಿನ ಮಾರುಕಟ್ಟೆ ನಡೆಸಲಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.