ADVERTISEMENT

ಪಾತಪಾಳ್ಯ | ಅನೈತಿಕ ಚಟುವಟಿಕೆಗಳ ತಾಣವಾದ ವಸತಿ ಗೃಹ

ಸರ್ಕಾರಿ ಶಾಲೆ ಶಿಕ್ಷಕರ ವಾಸಕ್ಕೆಂದು ನಿರ್ಮಿಸಲಾಗಿದ್ದ ಕಟ್ಟಡಗಳು ನಿರುಪಯುಕ್ತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:56 IST
Last Updated 5 ಫೆಬ್ರುವರಿ 2026, 4:56 IST
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ನಲ್ಲಚೆರುವು ಬಳಿ ನಿರ್ಮಿಸಲಾದ ಶಿಕ್ಷಕರ ವಸತಿ ಗೃಹಗಳ ಸೂಕ್ತ ನಿರ್ವಹಣೆ ಇಲ್ಲದೆ, ಕಳೆ, ಮುಳ್ಳಿನ ಗಿಡಗಳು ಬೆಳೆದಿರುವುದು
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ನಲ್ಲಚೆರುವು ಬಳಿ ನಿರ್ಮಿಸಲಾದ ಶಿಕ್ಷಕರ ವಸತಿ ಗೃಹಗಳ ಸೂಕ್ತ ನಿರ್ವಹಣೆ ಇಲ್ಲದೆ, ಕಳೆ, ಮುಳ್ಳಿನ ಗಿಡಗಳು ಬೆಳೆದಿರುವುದು   

ಪಾತಪಾಳ್ಯ (ಬಾಗೇಪಲ್ಲಿ): ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ನಲ್ಲಚೆರುವು (ನಗರ್ಲು) ಗ್ರಾಮದಲ್ಲಿ ಸರ್ಕಾರಿ ಶಾಲೆ ಶಿಕ್ಷಕರ ವಾಸಕ್ಕೆಂದು ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ, ಅವುಗಳ ಅವೈಜ್ಞಾನಿಕ ನಿರ್ಮಾಣ ಮತ್ತು ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಇದೀಗ ಹಾಳು ಕೊಂಪೆಯಾಗಿ ಮಾರ್ಪಟ್ಟಿವೆ.

ಜೊತೆಗೆ ಈ ತಾಣಗಳು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಬದಲಾಗಿವೆ ಎಂದು ಸ್ಥಳೀಯರು ದೂರುತ್ತಾರೆ. 

ನಲ್ಲಚೆರುವು (ನಗರ್ಲು) ಗ್ರಾಮದ ಬೈಲಾಂಜನೇಯ ದೇವಾಲಯದ ಬಳಿ 4 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಪಾತಪಾಳ್ಯ ಹೋಬಳಿ ಕೇಂದ್ರದಿಂದ ದೂರ ಇದೆ. ಜನರು ವಾಸ ಮಾಡದ ಜಾಗದಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಕೊಠಡಿಗಳಿಗೆ ಕುಡಿಯುವ ನೀರಿನ ಸಂಪರ್ಕ ಇಲ್ಲ. ಮುಖ್ಯವಾಗಿ ಸುತ್ತ ತಡೆಗೋಡೆ ನಿರ್ಮಾಣ ಮಾಡಿಲ್ಲ. ಭದ್ರತೆಯೂ ಇಲ್ಲ. ಸಂಬಂಧಪಟ್ಟ ಪಾತಪಾಳ್ಯ ಗ್ರಾಮ ಪಂಚಾಯಿತಿ, ಲೋಕೊಪಯೋಗಿ ಇಲಾಖೆಗಳು ಸೂಕ್ತ ನಿರ್ವಹಣೆ ಮಾಡಿಲ್ಲ. ಇದರಿಂದ ಶಿಕ್ಷಕರು ವಾಸ ಮಾಡಲು ಆಗದೆ, ಅಕ್ಷರಶಃ ಹಾಳುಕೊಂಪೆ ಆಗಿದೆ.

ADVERTISEMENT

ವಸತಿ ಗೃಹ ಕಟ್ಟಡದಲ್ಲಿ ನಾಲ್ಕು ಕೊಠಡಿಗಳು ಇವೆ. ಶಿಕ್ಷಕರು ವಾಸ ಮಾಡಲು ಮೂಲ ಸೌಕರ್ಯಗಳೇ ಇಲ್ಲ. ಇದರಿಂದಾಗಿ ಗೃಹ ಕಟ್ಟಡದ ಸುತ್ತಲೂ ಜಾಲಿ, ಬೇಲಿ, ಕಳೆ, ಮುಳ್ಳಿನ ಗಿಡಗಳು ಬೆಳೆದಿವೆ. ಕಿಟಕಿ, ಬಾಗಿಲುಗಳು ಮುರಿದಿವೆ. ಕಸ, ಕಡ್ಡಿ, ಪ್ಲಾಸ್ಟಿಕ್, ಸಿಗರೇಟ್, ಬೀಡಿಗಳನ್ನು ಎಲ್ಲೆಂದರಲ್ಲಿ ಬೀಸಾಡಲಾಗಿದೆ. ಅನೈತಿಕ ಚಟುವಟಿಕೆಗಳು ಮತ್ತು ಮಲಮೂತ್ರ ವಿಸರ್ಜನೆಯ ತಾಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

‘ತಾಲ್ಲೂಕಿನ ಕೇಂದ್ರದಲ್ಲಿ ವಸತಿ ಗೃಹಗಳು ಇದ್ದಿದ್ದರೆ, ಶಿಕ್ಷಕರಿಗೆ ಅನುಕೂಲ ಆಗಿತ್ತು. ತಾಲ್ಲೂಕಿನ ಕೇಂದ್ರದಲ್ಲಿ ಗೃಹಗಳು ನಿರ್ಮಾಣ ಮಾಡಬೇಕಿತ್ತು. ಪಾತಪಾಳ್ಯ ಹೋಬಳಿಯ ನಗರ್ಲು ಗ್ರಾಮದ ಹೊರ ವಲಯದ ಜನರು ವಾಸ ಮಾಡದ ಜಾಗದಲ್ಲಿ ಗೃಹಗಳನ್ನು ನಿರ್ಮಿಸಲಾಗಿದೆ. ಕುಡಿಯುವ ನೀರು ಸೇರಿ ಕನಿಷ್ಠ ಸೌಲಭ್ಯಗಳೂ ಇಲ್ಲ. ಇದರಿಂದ ಶಿಕ್ಷಕರು ಕೊಠಡಿಯಲ್ಲಿ ವಾಸ ಮಾಡಿಲ್ಲ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ದೂರದ ಜಿಲ್ಲಾ, ತಾಲ್ಲೂಕುಗಳಿಂದ ಶಿಕ್ಷಕರು ಬಾಡಿಗೆ ಮನೆಗಳಲ್ಲಿ ವಾಸ ಆಗಿದ್ದಾರೆ. ಮುಖ್ಯವಾಗಿ ತಾಲ್ಲೂಕು ಕೇಂದ್ರದಲ್ಲಿ ಶಿಕ್ಷಕರಿಗೆ ವಸತಿಗೃಹಗಳ ಅಗತ್ಯ ಇದೆ. ಸರ್ಕಾರ ತಾಲ್ಲೂಕಿನ ಹೊರವಲಯದಲ್ಲಿ ಸೂಕ್ತ ಜಾಗದಲ್ಲಿ ವಸತಿ ಗೃಹಗಳನ್ನು ನಿರ್ಮಿಸಬೇಕು. ದೂರದ ಶಿಕ್ಷಕರು ವಾಸ ಮಾಡಲು ಅನುಕೂಲ ಆಗಲಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಅವೈಜ್ಞಾನಿಕವಾಗಿ ನಿರ್ಮಾಣ
‘ಈ ಹಿಂದೆ ಶಿಕ್ಷಣ ಲೋಕೊಪಯೋಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅವೈಜ್ಞಾನಿಕವಾಗಿ ವಾಸ ಮಾಡಲು ಯೋಗ್ಯವಲ್ಲದ ರೀತಿಯಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಕನಿಷ್ಠ ಸೌಲಭ್ಯಗಳು ಕಲ್ಪಿಸಿಲ್ಲ. ಸೌಲಭ್ಯಗಳನ್ನು ಕಲ್ಪಿಸಿದ್ದರೆ ಗ್ರಾಮೀಣ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಅನುಕೂಲ ಆಗುತ್ತಿತ್ತು. ಇದೀಗ ಶಿಕ್ಷಕರ ವಸತಿಗೃಹಗಳು ಅನೈತಿಕ ಚಟುವಟಿಕೆ ತಾಣ ಆಗಿವೆ’ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡ ತೋಳ್ಳಪಲ್ಲಿ ವೆಂಕಟೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.