ADVERTISEMENT

ಸಂವಿಧಾನ ರಾಷ್ಟ್ರದ ಆತ್ಮ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:01 IST
Last Updated 27 ನವೆಂಬರ್ 2025, 4:01 IST
ಶಿಡ್ಲಘಟ್ಟದ ತಾಲ್ಲೂಕು ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಬಂಧ ಮತ್ತು ಚಿತ್ರಕಲೆಯ ತಾಲ್ಲೂಕು ಮಟ್ಟದ ವಿಜೇತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು
ಶಿಡ್ಲಘಟ್ಟದ ತಾಲ್ಲೂಕು ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಬಂಧ ಮತ್ತು ಚಿತ್ರಕಲೆಯ ತಾಲ್ಲೂಕು ಮಟ್ಟದ ವಿಜೇತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು   

ಶಿಡ್ಲಘಟ್ಟ: ಸಂವಿಧಾನ ಕೇವಲ ಒಂದು ಗ್ರಂಥವಲ್ಲ. ಅದು ನಮ್ಮ ರಾಷ್ಟ್ರದ ಆತ್ಮ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಮೂಲ ಸವಲತ್ತುಗಳು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ರಚಿಸಲಾಗಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ಬುಧವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದಂತಹ ಉನ್ನತ ಮೌಲ್ಯಗಳನ್ನು ಒಳಗೊಂಡಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕು. ನಮ್ಮ ಸಂವಿಧಾನವನ್ನು ರಚಿಸುವಲ್ಲಿ ಅವರ ಪರಿಶ್ರಮ, ಪಾಂಡಿತ್ಯ ಮತ್ತು ದೂರದೃಷ್ಟಿ ಅಪಾರ. ಸಂವಿಧಾನವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ನೀಡುತ್ತದೆ. ಎಲ್ಲರೂ ಗೌರವದಿಂದ ಬದುಕಲು ಇದು ಅವಕಾಶ ನೀಡುತ್ತದೆ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್ ಗಗನಸಿಂಧು ಮಾತನಾಡಿ, ಜಾತಿ, ಧರ್ಮ, ಲಿಂಗ ಅಥವಾ ಸ್ಥಾನಮಾನದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಸಮಾನರು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಎಲ್ಲರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸುವುದೇ ಇದರ ಮುಖ್ಯ ಉದ್ದೇಶ. ಪ್ರತಿಯೊಬ್ಬ ನಾಗರಿಕನೂ ತನ್ನ ಅಭಿಪ್ರಾಯ, ನಂಬಿಕೆ ಮತ್ತು ಜೀವನವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಹಕ್ಕನ್ನು ಹೊಂದಿದೆ. ನಾವೆಲ್ಲರೂ ಒಂದು ಕುಟುಂಬದಂತೆ ಸೌಹಾರ್ದತೆಯಿಂದ ಇರಬೇಕೆಂಬ ಭಾವನೆಯನ್ನು ಸಂವಿಧಾನ ತಿಳಿಸುತ್ತದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಮಾತನಾಡಿ, ಸಂವಿಧಾನವು ಕೇವಲ ಹಕ್ಕುಗಳನ್ನು ಮಾತ್ರವಲ್ಲ, ನಮ್ಮೆಲ್ಲರ ಮೂಲ ಕರ್ತವ್ಯಗಳನ್ನೂ ವಿವರಿಸಿದೆ. ನಮ್ಮ ಕರ್ತವ್ಯಗಳನ್ನು ನಾವು ಪಾಲಿಸಬೇಕು ಮತ್ತು ದೇಶದ ಏಳಿಗೆಗೆ ಶ್ರಮಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವುದು, ರಾಷ್ಟ್ರದ ಆಸ್ತಿಯನ್ನು ರಕ್ಷಿಸುವುದು, ಮತ್ತು ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಯುವಜನರು ನಮ್ಮ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಮಾಜ ಇಲಾಖೆಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಮತ್ತು ಚಿತ್ರಕಲೆಯ ತಾಲ್ಲೂಕು ಮಟ್ಟದ ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು.

ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ಲಕ್ಷ್ಮಣರಾಜು, ಡಾ.ವೆಂಕಟೇಶಮೂರ್ತಿ, ನರೇಂದ್ರ ಕುಮಾರ್, ಜಗದೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.