ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ | ಕಳ್ಳರನ್ನು ಬಿಟ್ಟ ಪೊಲೀಸರ ವರ್ಗಾವಣೆ

ಗ್ರಾಮಾಂತರ ಠಾಣೆ ಎಸ್‌ಐ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದಕ್ಕೆ ಇಲಾಖೆ ವಲಯದಲ್ಲೇ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಮೇ 2020, 10:02 IST
Last Updated 7 ಮೇ 2020, 10:02 IST
ಗ್ರಾಮಾಂತರ ಪೊಲೀಸ್ ಠಾಣೆ ಕಾನ್‌ಸ್ಟೆಬಲ್‌ಗಳೊಂದಿಗೆ ಕರ್ತವ್ಯಲೋಪ ಆರೋಪ ಎದುರಿಸುತ್ತಿರುವ ಎಸ್‌ಐ ಚೇತನ್ ಗೌಡ (ಮಧ್ಯದಲ್ಲಿರುವವರು)
ಗ್ರಾಮಾಂತರ ಪೊಲೀಸ್ ಠಾಣೆ ಕಾನ್‌ಸ್ಟೆಬಲ್‌ಗಳೊಂದಿಗೆ ಕರ್ತವ್ಯಲೋಪ ಆರೋಪ ಎದುರಿಸುತ್ತಿರುವ ಎಸ್‌ಐ ಚೇತನ್ ಗೌಡ (ಮಧ್ಯದಲ್ಲಿರುವವರು)   

ಚಿಕ್ಕಬಳ್ಳಾಪುರ: ಟೈರ್‌ ಕಳ್ಳರನ್ನು ಬಂಧಿಸಿ, ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಬಿಟ್ಟು ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮೂರು ಕಾನ್‌ಸ್ಟೆಬಲ್‌ಗಳನ್ನು ಮಾತ್ರ ಅಮಾನತು ಮಾಡಿ, ಗ್ರಾಮಾಂತರ ಠಾಣೆಯ ಎಸ್‌ಐ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದು ಇದೀಗ ಚರ್ಚೆಗೆ ಎಡೆ ಮಾಡಿದೆ.

ಮಾರ್ಚ್‌ನಲ್ಲಿ ನಡೆದ ಟೈರ್‌ ಕಳ್ಳತನ ಪ್ರಕರಣವೊಂದರಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿತ ಆರೋಪಿಗಳನ್ನು ಅಕ್ರಮವಾಗಿ ನಾಲ್ಕು ದಿನ ಠಾಣೆಯಲ್ಲಿ ಇರಿಸಿಕೊಂಡು, ಕೊನೆಗೆ ಅವರಿಂದ ಲಂಚ ಪಡೆದು ಬಿಡುಗಡೆಗೊಳಿಸಿ, ರಾಜೀ ಸಂಧಾನದ ಹೆಸರಿನಲ್ಲಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪ ಪೊಲೀಸ್‌ ವಲಯದಲ್ಲೇ ವ್ಯಕ್ತವಾಗಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಬುಧವಾರ ವಿಶೇಷ ವರದಿ ಪ್ರಕಟಿಸಿತ್ತು. ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್ ಅವರು ಗ್ರಾಮಾಂತರ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳು ಮತ್ತು ಈ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯ ಒಬ್ಬ ಕಾನ್‌ಸ್ಟೆಬಲ್‌ ಹೀಗೆ ಒಟ್ಟು ಕಾನ್‌ಸ್ಟೆಬಲ್‌ಗಳನ್ನು ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್‌ ರಮಣಾ ರೆಡ್ಡಿ ಅವರನ್ನು ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಠಾಣೆಗೆ, ಟಿ.ಎ.ಹರೀಶ್‌ ಅವರನ್ನು ಅದೇ ತಾಲ್ಲೂಕಿನ ಪಾತಪಾಳ್ಯ ಠಾಣೆಗೆ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯ ಕಾನ್‌ಸ್ಟೆಬಲ್‌ ಅಂಬರೀಶ್‌ ಅವರನ್ನು ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಪೊಲೀಸರ ಕರ್ತವ್ಯ ಲೋಪ ಪ್ರಕರಣದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ತೆಗೆದುಕೊಂಡ ಕ್ರಮಕ್ಕೆ ಇದೀಗ ಇಲಾಖೆಯ ಒಳಗೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಭಾವಿ ಸಚಿವರೊಬ್ಬರ ಲಾಬಿ ಮತ್ತು ನೆಂಟಸ್ತಿಕೆ ಕಾರಣಕ್ಕೆ ಗ್ರಾಮಾಂತರ ಠಾಣೆ ಎಸ್‌ಐ ಚೇತನ್‌ ಕುಮಾರ್ ಅವರ ವಿರುದ್ಧ ಎಸ್‌ಪಿ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ಇದೀಗ ಇಲಾಖೆಯ ವಲಯದಲ್ಲೇ ಗುಲ್ಲೆದ್ದಿದೆ.

ದೂರುದಾರ ಮತ್ತು ಆರೋಪಿಗಳ ನಡುವಿನ ರಾಜೀಸಂಧಾನದ ಕಾರಣಕ್ಕೆ ಕಳ್ಳತನದ ಆರೋಪಿಯನ್ನು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟಿದ್ದೇವೆ ಎಂದು ಚೇತನ್‌ ಕುಮಾರ್ ’ಪ್ರಜಾವಾಣಿ‘ಗೆ ತಿಳಿಸಿದ್ದರು.

ಜತೆಗೆ, ಯಾವುದೇ ಪ್ರಕರಣ ದಾಖಲಿಸದೆ ಒಂದು ತಿಂಗಳ ಕಾಲ ನಗರ ಪೊಲೀಸ್‌ ಠಾಣೆ ಆವರಣದಲ್ಲಿಯೇ ನಿಲ್ಲಿಸಿಕೊಂಡಿದ್ದ ಕೃತ್ಯಕ್ಕೆ ಬಳಸಿದ ಲಾರಿಯನ್ನು ಪೊಲೀಸರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಟ್ಟು ಕಳುಹಿಸಿರುವುದು ಇಲಾಖೆಯ ಕೆಳಹಂತದಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡಿತ್ತು.

ಈ ಕುರಿತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ಪ್ರಶ್ನಿಸಿದರೆ, ’ಇದು ಇಲಾಖೆಯ ಆಂತರಿಕ ವಿಚಾರ. ನಾವು ಶಿಸ್ತುಕ್ರಮ ಕೈಗೊಂಡಿದ್ದೇವೆ. ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ‘ ಎಂದರು. ’ಯಾವ ರೀತಿಯ ಕ್ರಮ ಜರುಗಿಸಿದ್ದೀರಿ‘ ಎಂದು ವಿಚಾರಿಸಿದರೆ, ’ಒಂದು ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಅರ್ಜಿ ಹಾಕಿ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.