ADVERTISEMENT

ಶಿಡ್ಲಘಟ್ಟ | ತ್ಯಾಜ್ಯ ಘಟಕದಿಂದ ದಟ್ಟ ಹೊಗೆ: ಬೆಳೆ ಹಾಳಾಗುವ ಆತಂಕದಲ್ಲಿ ರೈತರು

ಅಧಿಕಾರಿಗಳ ಸುತ್ತುವರಿದ ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 6:48 IST
Last Updated 9 ಮಾರ್ಚ್ 2025, 6:48 IST
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ಇರುವ ತ್ಯಾಜ್ಯ ಘಟಕದ ಕಸದ ರಾಶಿಗೆ ಬಿದ್ದ ಬೆಂಕಿ ಪರಿಶೀಲಿಸಿದ ಅಧಿಕಾರಿಗಳು
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ಇರುವ ತ್ಯಾಜ್ಯ ಘಟಕದ ಕಸದ ರಾಶಿಗೆ ಬಿದ್ದ ಬೆಂಕಿ ಪರಿಶೀಲಿಸಿದ ಅಧಿಕಾರಿಗಳು   

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ರಸ್ತೆಯ ಹಿತ್ತಲಹಳ್ಳಿ ಗೇಟ್ ಸಮೀಪದ ನಗರಸಭೆ ಘನತ್ಯಾಜ್ಯ ಘಟಕದಲ್ಲಿನ ಕಸದ ರಾಶಿಯಲ್ಲಿ ನಾಲ್ಕು ದಿನಗಳಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದರೂ, ಬೆಂಕಿ ಮಾತ್ರ ಹತೋಟಿಗೆ ಬರುತ್ತಿಲ್ಲ ಎಂದು ಸ್ಥಳೀಯರು ದೂರಿದರು. 

ಕಸಕ್ಕೆ ಹೊತ್ತಿಕೊಂಡ ಬೆಂಕಿಯಿಂದ ದಟ್ಟವಾದ ಹೊಗೆಯು ಸುತ್ತಮುತ್ತಲಿನ ಗ್ರಾಮಗಳಿಗೆ ವ್ಯಾಪಿಸಿದೆ. ಇದರಿಂದಾಗಿ ಬೆಳೆಗಳು ನಾಶವಾಗುವ ಭೀತಿ ಎದುರಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ಜೊತೆಗೆ ದಟ್ಟ ಹೊಗೆಯಿಂದ ಆಕ್ರೋಶಗೊಂಡ ಹಿತ್ತಲಹಳ್ಳಿ ಗ್ರಾಮಸ್ಥರು, ಬೆಂಕಿ ನಂದಿಸಲು ಮತ್ತು ಪರಿಸ್ಥಿತಿ ಅವಲೋಕಿಸಲು ಬಂದ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲಹೊತ್ತು ದಿಗ್ಬಂಧನ ಹಾಕಿದರು. 

ನಗರಸಭೆ ಹೆಚ್ಚುವರಿ ಪ್ರಭಾರ ಪೌರಾಯುಕ್ತ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೋಹನ್, ಕಂದಾಯ ಆಧಿಕಾರಿ ನಾಗರಾಜ್, ಕೃಷ್ಣಮೂರ್ತಿ, ರಾಜೇಶ್, ಆಥಿಕ್ ಇನ್ನಿತರರ ಸಿಬ್ಬಂದಿಯನ್ನು ಸುತ್ತುವರೆದ ಗ್ರಾಮಸ್ಥರು, ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವೇದಿಸಿಕೊಂಡರು. ಸಾಕಷ್ಟು ಸಲ ಸಮಸ್ಯೆ ಹೇಳಿಕೊಂಡರೂ, ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

ಇನ್ನೆಷ್ಟು ದಿನ ನಾವು ಈ ಕಸದ ದುರ್ನಾತದಲ್ಲಿ ಬಾಳಬೇಕು. ಒಂದು ಇಲ್ಲಿನ ಘನತ್ಯಾಜ್ಯ ಘಟಕವನ್ನು ಬೇರೆಡೆ ಸ್ಥಳಾಂತರಿಸಬೇಕು ಅಥವಾ ಹಿತ್ತಲಳ್ಳಿ ಗ್ರಾಮವನ್ನೇ ಸ್ಥಳಾಂತರಿಸಬೇಕು ಎಂದು ಪಟ್ಟುಹಿಡಿದರು. ಜೊತೆಗೆ ಹೊತ್ತಿಕೊಂಡಿರುವ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ, ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಘನತ್ಯಾಜ್ಯ ಘಟಕಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು. ಆಗ ಅಧಿಕಾರಿಗಳು ಮತ್ತು ಸಿಬ್ಬಂದಿ ತಬ್ಬಿಬ್ಬಾದರು. 

ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿತ್ತಲಹಳ್ಳಿ ವೆಂಕಟೇಶ್, ಸದಸ್ಯ ನರಸಿಂಹ ಮೂರ್ತಿ, ಎಚ್.ಜಿ. ಗೋಪಾಲಗೌಡ, ಎಚ್.ಕೆ.ಸುರೇಶ್, ಎಂಪಿಸಿಎಸ್ ಅಧ್ಯಕ್ಷ ಲೋಕೇಶ್, ಗೋಪಾಲಕೃಷ್ಣ, ಮುನಿರಾಜು, ಮುರಳಿ, ಮುನಿಕೃಷ್ಣ, ಮೋಹನ್, ಹಾಗೂ ಇತರ ಗ್ರಾಮದ ಮುಖಂಡರು ಹಾಜರಿದ್ದರು.

ತ್ಯಾಜ್ಯಕ್ಕೆ ಹೊತ್ತಿಕೊಂಡ ಬೆಂಕಿಯಿಂದ ವ್ಯಾಪಿಸಿರುವ ದಟ್ಟ ಹೊಗೆ
ಬೆಳೆ ಆರೋಗ್ಯ ಹಾಳು
ಹದಿನೈದು ವರ್ಷಗಳ ಹಿಂದೆ ಆಗಿನ ನಗರಸಭೆ ಆಡಳಿತ ಮಂಡಳಿಯವರು ಇಲ್ಲಿ ಶಾಂತಿವನ ಮಾಡುತ್ತೇವೆ ಇರುವ ಗೋಕುಂಟೆ ಸುತ್ತ ಉದ್ಯಾನ ಬೆಳೆಸುತ್ತೇವೆ. ವೃದ್ಧರು ವಾಯು ವಿಹಾರಿಗಳು ಹಾಗೂ ಪಶು ಪಕ್ಷಿಗಳಿಗೆ ಅನುಕೂಲ ಕಲ್ಪಿಸುವ ಭರವಸೆಯೊಂದಿಗೆ ನಾಲ್ಕು ಎಕರೆ ಜಮೀನು ಮಂಜೂರು ಮಾಡಿಸಿಕೊಂಡರು. ಆದರೆ ಇಲ್ಲಿ ನಿರ್ಮಾಣ ಮಾಡಿದ್ದು ಮಾತ್ರ ತ್ಯಾಜ್ಯ ವಿಲೇವಾರಿ ಘಟಕ.  ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನೆಲ್ಲ ಇಲ್ಲೇ ವಿಲೇವಾರಿ ಮಾಡಲಾಗುತ್ತಿದೆ. ವರ್ಷಕ್ಕೆ ಮೂರ್ನಾಲ್ಕು ಬಾರಿ ತ್ಯಾಜ್ಯದ ಒತ್ತಡ ಹೆಚ್ಚಿ ಬೆಂಕಿ ಹೊತ್ತಿಕೊಳ್ಳುತ್ತದೆ. ಬೆಂಕಿಯಿಂದ ಹೊರಹೊಮ್ಮುವ ವಿಷಕಾರಿ ಹೊಗೆಯಿಂದ ಸುತ್ತಮುತ್ತಲಿನ ಗ್ರಾಮಗಳ ಬೆಳೆಗಳು ವಿಶೇಷವಾಗಿ ರೇಷ್ಮೆ ಬೆಳೆ ಹಾಳಾಗುತ್ತಿದೆ. ಜನರ ಆರೋಗ್ಯವೂ ಹದಗೆಡುತ್ತಿದೆ. ನೊಣ ಮತ್ತು ನಾಯಿಗಳ ಕಾಟ ಹೆಚ್ಚಾಗಿದೆ.  ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.