ADVERTISEMENT

ಎತ್ತಿನಹೊಳೆ ಯೋಜನೆ: ಶಾಶ್ವತ ನೀರಾವರಿ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಪ್ರಶ್ನೆ

ಎತ್ತಿನಹೊಳೆ ನೀರು ಎರಡು ವರ್ಷದಲ್ಲಿ ಹರಿಯದಿದ್ದರೆ 75 ಲಕ್ಷ ಜನರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ಕರೆ ಕೊಡುವಿರಾ?

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 6:53 IST
Last Updated 4 ಜುಲೈ 2025, 6:53 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಚಿಕ್ಕಬಳ್ಳಾಪುರ: ಮುಂದಿನ ಎರಡು ವರ್ಷಗಳಲ್ಲಿ ಎತ್ತಿನಹೊಳೆ ನೀರು ಹರಿಯದಿದ್ದರೆ 75 ಲಕ್ಷ ಜನರು ಕಾಂಗ್ರೆಸ್ ವಿರುದ್ಧ ಮತಚಲಾಯಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಡುವರೇ? ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ಪ್ರಶ್ನಿಸಿದ್ದಾರೆ.

ಮುಂದಿನ ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ಯೋಜನೆ ವ್ಯಾಪ್ತಿಯ ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ತಿಳಿಸಿದ್ದರು.

ADVERTISEMENT

ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, 2014ರಲ್ಲಿ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಮುಂದಿನ ಎರಡು ವರ್ಷದಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಹರಿಯುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಎತ್ತಿನಹೊಳೆ ನೀರು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿದಿಲ್ಲ. ಮುಂದೆಯೂ ಹರಿಯುವುದಿಲ್ಲ ಎಂದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ

ಎತ್ತಿನಹೊಳೆ ನೀರಿನ‌ ಲಭ್ಯತೆ ಎಂಟು ಟಿಎಂಸಿ‌ ಅಡಿ ಎಂದು ವೈಜ್ಞಾನಿಕ ಅಧ್ಯಯನಗಳು, ಸಂಸ್ಥೆಗಳು ಹೇಳುತ್ತಿದ್ದರೂ ಸರ್ಕಾರ 24 ಟಿಎಂಸಿ‌ ಅಡಿ‌ಎಂದು ಸುಳ್ಳು ಹೇಳುತ್ತಿದೆ ಎಂದು ದೂರಿದರು.

ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಕೆರೆಗಳಿಗೆ ಎಚ್.ಎನ್.ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆ ಹೆಸರಿನಲ್ಲಿ ಹರಿಸಲಾಗುತ್ತಿದೆ. ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಬೇಕು ಎನ್ನುವ ನಮ್ಮ ಆಗ್ರಹವನ್ನು ಸರ್ಕಾರ ತಿರಸ್ಕರಿಸಿದೆ.

ಮೂರು ಹಂತದಲ್ಲಿ ಶುದ್ದೀಕರಣ ಆದರೆ ಅದು ಕುಡಿಯಲು ಬಳಕೆ ಆಗುತ್ತದೆ ಎಂದು ಸಚಿವ ಡಾ.ಎಂ.ಸಿ‌.ಸುಧಾಕರ್ ತಿಳಿಸಿದ್ದಾರೆ. ಈಗಾಗಲೇ ಕಬ್ಬನ್ ಪಾರ್ಕ್, ಲಾಲ್ ಭಾಗ್ ಮತ್ತು ವಿಮಾನ ನಿಲ್ದಾಣದಲ್ಲಿನ ಉದ್ಯಾನಗಳಿಗೆ ಮೂರು ಹಂತದಲ್ಲಿ ಸಂಸ್ಕರಿಸಿದ ನೀರನ್ನು ಪೂರೈಸಲಾಗುತ್ತಿದೆ.

ಸಚಿವರು, ಅಧಿಕಾರಿಗಳು ಈ ಮೂರು ಹಂತದಲ್ಲಿ ಶುದ್ದೀಕರಿಸಿದ ನೀರನ್ನು ಕುಡಿಯಲಿ. ಆಗ ನಾವು ಎರಡನೇ ಹಂತದ ಸಂಸ್ಕರಣೆಯೇ ಸರಿ ಎಂದು ಒಪ್ಪಿಕೊಳ್ಳುತ್ತೇವೆ. ಮೂರು ಹಂತದ ಸಂಸ್ಕರಣೆಗೆ ಆಗ್ರಹಿಸುವುದಿಲ್ಲ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.