ADVERTISEMENT

ಕಳಸಕ್ಕೆ ಬಂತು ಜೀವರಕ್ಷಕ ಆಂಬುಲೆನ್ಸ್

ಕಾವೇರಿ ಆಸ್ಪತ್ರೆಗೆ ಮಂಗಳೂರಿನ ಎಂಆರ್‌ಪಿಎಲ್‌ನಿಂದ ಕೊಡುಗೆ

ರವಿ ಕೆಳಂಗಡಿ
Published 28 ಜನವರಿ 2020, 19:30 IST
Last Updated 28 ಜನವರಿ 2020, 19:30 IST
ಕಳಸದ ಕಾವೇರಿ ಆಸ್ಪತ್ರೆಗೆ ಎಂಆರ್‌ಪಿಎಲ್ ಸಂಸ್ಥೆ ಕೊಡುಗೆ ನೀಡಿರುವ ಆಂಬುಲೆನ್ಸ್.
ಕಳಸದ ಕಾವೇರಿ ಆಸ್ಪತ್ರೆಗೆ ಎಂಆರ್‌ಪಿಎಲ್ ಸಂಸ್ಥೆ ಕೊಡುಗೆ ನೀಡಿರುವ ಆಂಬುಲೆನ್ಸ್.   
""

ಕಳಸ: ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ರಸ್ತೆ ಮಧ್ಯೆಯೇ ಸಾವನ್ನಪ್ಪಿದ ಹಲವು ನಿದರ್ಶನ ತಾಲ್ಲೂಕಿನಲ್ಲಿ ನಡೆದಿವೆ. ಇಂತಹ ನಿದರ್ಶನಗಳ ಮರುಕಳಿಸಬಾರದು ಎಂಬ ಉದ್ದೇಶದಿಂದ ಕಳಸದ ಕಾವೇರಿ ಆಸ್ಪತ್ರೆಗೆ ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆಯು ಜೀವ ರಕ್ಷಕ ಸೌಲಭ್ಯಗಳಿರುವ ಸುಸಜ್ಜಿತ ಆಂಬುಲೆನ್ಸ್ ಕೊಡುಗೆಯಾಗಿ ನೀಡಿದೆ.

ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಹೃದಯರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ಆಸಕ್ತಿಯ ಫಲವಾಗಿ ಈ ಆಂಬುಲೆನ್ಸ್ ಕಳಸಕ್ಕೆ ದಕ್ಕಿದೆ. ಕಳಸದಂತಹ ಗ್ರಾಮಾಂತರ ಪ್ರದೇಶದಲ್ಲಿ ಹೃದಯ ಮತ್ತು ಶ್ವಾಸಕೋಶದ ರೋಗಗಳಿಂದ ನರಳುವ ರೋಗಿಗಳು ದೂರದ ಮಂಗಳೂರು ತಲುಪುವ ಒಳಗೆ ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಪದ್ಮನಾಭ ಕಾಮತ್ ಅವರು ಕಳಸದ ಕಾವೇರಿ ಸ್ಮಾರಕ ಆಸ್ಪತ್ರೆಯ ಡಾ.ವಿಕ್ರಮ್ ಪ್ರಭು ಅವರಿಂದ ತಿಳಿದುಕೊಂಡಿದ್ದರು.

ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆಯು ಗ್ರಾಮಾಂತರ ಪ್ರದೇಶಕ್ಕೆ ಆಂಬುಲೆನ್ಸ್ ಕೊಡುಗೆ ನೀಡುವ ಅವಕಾಶ ಇದೆ ಎಂದು ವಿಕ್ರಮ್ ಪ್ರಭು ತಿಳಿದುಕೊಂಡರು. ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಕಳಸದವರೇ ಆದ ಕೃಷ್ಣ ಹೆಗಡೆ ಮೂಲಕ ಆಂಬುಲೆನ್ಸ್ ಪ್ರಸ್ತಾವನೆಯನ್ನು ಮುಂದಿಡಲಾಯಿತು. ಕೃಷ್ಣ ಹೆಗಡೆ ಅವರ ಸತತ ಪ್ರಯತ್ನ ಮತ್ತು ಡಾ.ಪದ್ಮನಾಭ ಕಾಮತ್ ಶಿಫಾರಸ್ಸಿನ ಕಾರಣಕ್ಕೆ ಕಳಸಕ್ಕೆ ₹ 22.70 ಲಕ್ಷ ವೆಚ್ಚದ ಆಂಬುಲೆನ್ಸ್ ನೀಡಲು ಎಂಆರ್‌ಪಿಎಲ್ ಸಂಸ್ಥೆ ಒಪ್ಪಿಕೊಂಡಿತು.

ADVERTISEMENT

ಅತ್ಯಂತ ಸುಸಜ್ಜಿತವಾದ ಲೈಫ್ ಆನ್ ವೀಲ್ಸ್ ಪರಿಕಲ್ಪನೆಯ ಆಂಬುಲೆನ್ಸ್ ಕಡಿಮೆ ಬೆಲೆಯಲ್ಲಿ ದೊರಕಲು ಕಳಸದ ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಕೂಡ ನೆರವಾದರು. ಇದೀಗ ಆಂಬುಲೆನ್ಸ್ ಕಳಸಕ್ಕೆ ತಲುಪಿದ್ದು ಫೆಬ್ರುವರಿಯಿಂದ ಕಾರ್ಯನಿರ್ವಹಿಸಲಿದೆ. ಈ ವಾಹನದಲ್ಲಿ ಸತತವಾಗಿ ಕೃತಕ ಉಸಿರಾಟದ ಸೌಲಭ್ಯ ಇದೆ. ಹೃದಯ ಬಡಿತ ನಿಂತರೆ ಅದನ್ನು ಕೃತಕವಾಗಿ ಮುಂದುವರಿಸುವ ವ್ಯವಸ್ಥೆ ಇದೆ. ರೋಗಿಗಳಿಗೆ ಬೇಕಾದ ಎಲ್ಲ ತುರ್ತು ಔಷಧಿ, ಚುಚ್ಚುಮದ್ದು ಮತ್ತು ಆಪರೇಶನ್ ಥಿಯೇಟರ್‌ನಲ್ಲಿ ಇರುವ ನಾಡಿಮಿಡಿತ ಮತ್ತು ಹೃದಯ ಬಡಿತವನ್ನು ಸ್ವಯಂಚಾಲಿತವಾಗಿ ಅಳೆಯುವ ವ್ಯವಸ್ಥೆಗಳು ಇವೆ.

‘ಹೃದಯಾಘಾತದ ನಂತರ ರೋಗಿಯ ಉಳಿವಿಗೆ ಮೊದಲ 3 ಗಂಟೆಗಳು ಅತ್ಯಂತ ಮಹತ್ವದ್ದಾಗಿರುತ್ತದೆ. ನಾವು ಈಗ 2 ಗಂಟೆಯ ಒಳಗೆ ಮಂಗಳೂರಿನ ಯಾವುದೇ ಆಸ್ಪತ್ರೆಗೆ ರೋಗಿಯನ್ನು ಸಾಗಿಸುವ ವ್ಯವಸ್ಥೆ ಹೊಂದಿದ್ದೇವೆ. ಈ ಆಂಬುಲೆನ್ಸ್ ಬಳಸಿ ಇನ್ನಷ್ಟು ಪರಿಣಾಮಕಾರಿ ಆರಂಭಿಕ ಚಿಕಿತ್ಸೆಯ ನಂತರ ಆಸ್ಪತ್ರೆಗೆ ಸಾಗಿಸಿದಾಗ ರೋಗಿ ಬದುಕಿ ಉಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ಡಾ.ವಿಕ್ರಮ್ ಪ್ರಭು ಹೇಳುತ್ತಾರೆ.

‘ಈ ಆಂಬುಲೆನ್ಸ್‌ನಲ್ಲಿ ಒಬ್ಬ ತರಬೇತಿ ಹೊಂದಿದ ಸಿಬ್ಬಂದಿ ಇದ್ದು, ವೈದ್ಯರು ಕೂಡ ಅಗತ್ಯವಿದ್ದಾಗ ವಾಹನದೊಂದಿಗೆ ತೆರಳುತ್ತಾರೆ. ಮಂಗಳೂರಿಗೆ ತಲುಪಿದ ನಂತರ ಡಾ.ಪದ್ಮನಾಭ ಕಾಮತ್ ತಂಡವು ರೋಗಿಯ ಜವಾಬ್ದಾರಿ ತೆಗೆದುಕೊಳ್ಳುತ್ತದೆ’ ಎಂದೂ ಅವರು ಹೇಳುತ್ತಾರೆ.

‘ಆಂಬುಲೆನ್ಸ್ ಬಳಸುವವರು ಡ್ರೈವರ್ ವೇತನ ಮತ್ತು ಡೀಸೆಲ್ ವೆಚ್ಚ ನೀಡಿದರೆ ಸಾಕು. ಉಳಿದ ವೆಚ್ಚವನ್ನು ಕಾವೇರಿ ಟ್ರಸ್ಟ್ ದಾನಿಗಳ ನೆರವಿನಿಂದ ನಿರ್ವಹಿಸುತ್ತದೆ. ಎಂಆರ್‌ಪಿಎಲ್ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ ಅನುದಾನದಲ್ಲಿ ನೀಡಿರುವ ಆಂಬುಲೆನ್ಸ್ ಕಳಸದ ಜನತೆಗೆ ಸದ್ಭಳಕೆ ಆಗಲಿದೆ’ ಎಂದು ವಿಕ್ರಮ ಪ್ರಭು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಆಂಬುಲೆನ್ಸ್ ಒಳಗಿನ ಸುಸಜ್ಜಿತ ವ್ಯವಸ್ಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.