ADVERTISEMENT

ಚಿಕ್ಕಮಗಳೂರು: ₹2.32 ಲಕ್ಷಕ್ಕೆ ಹೋರಿ ಹರಾಜು

ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದ ಹರಾಜು ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
 ₹2.32 ಲಕ್ಷಕ್ಕೆ ಹರಾಜಾದ ಅಮೃತ ಮಹಲ್ ಬೀಜದ ಹೋರಿ
 ₹2.32 ಲಕ್ಷಕ್ಕೆ ಹರಾಜಾದ ಅಮೃತ ಮಹಲ್ ಬೀಜದ ಹೋರಿ   

ಕಡೂರು (ಚಿಕ್ಕಮಗಳೂರು): ಅಮೃತ ಮಹಲ್ ತಳಿಯ ‘ಬಿ.18-39 ಮಸಣಿ’ ಎಂಬ ಬೀಜದ ಹೋರಿ ₹2.32 ಲಕ್ಷಕ್ಕೆ ಬುಧವಾರ ಇಲ್ಲಿ ಹರಾಜಾಯಿತು.

ಹೋರಿ ಕರುಗಳ ಹರಾಜು ಪ್ರಕ್ರಿಯೆ ಬೀರೂರಿನ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆಯಿತು. ಬೀಜದ ಹೋರಿ ಬರುತ್ತಿದ್ದಂತೆ ರೈತರು ಕೇಕೆ ಹಾಕಿ ಸಂಭ್ರಮಿಸಿದರು.

ಸರ್ಕಾರಿ ಸವಾಲು ₹30 ಸಾವಿರದಿಂದ ಆರಂಭವಾಯಿತು. ಒಮ್ಮೆಲೆ ರೈತರೊಬ್ಬರು ₹1.50 ಲಕ್ಷಕ್ಕೆ ಕೂಗಿದರು. ನಂತರ ಏರಿಕೆಯಲ್ಲೇ ಸಾಗಿ ₹2.32 ಲಕ್ಷಕ್ಕೆ ಹರಾಜಾಯಿತು. ಶಿವಮೊಗ್ಗ ತಾಲ್ಲೂಕು ಕಪ್ಪನಹಳ್ಳಿಯ ರವಿಕುಮಾರ್‌ ಬಿಡ್‌ ಕೂಗಿ ಹೋರಿಯನ್ನು ಪಡೆದುಕೊಂಡರು.

ADVERTISEMENT

ಜೋಡಿ ಕರುಗಳ ಪೈಕಿ ಗಂಗೆ ಮತ್ತು ಗಾಳಿಕೆರೆ ಎಂಬ ಜೋಡಿಗಳು ₹2,07,500ಕ್ಕೆ ಹರಾಜಾದವು. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹೊಸೂರಿನ ವೀರೇಂದ್ರ ಪಾಟೀಲ ಈ ಹೋರಿಗಳನ್ನು ಖರೀದಿಸಿದರು. ಬಣ್ಣದ ಸರ ಮತ್ತು ಗಾಳಿಕೆರೆ ಎಂಬ ಜೋಡಿ ₹2,03,500ಕ್ಕೆ ಶಿಕಾರಿಪುರದ ಈಸೂರಿನ ಬಸವರಾಜು ಎಂಬವರ ಪಾಲಾದವು.

170 ಹೋರಿ ಕರುಗಳು, 8 ಬೀಜದ ಹೋರಿಗಳನ್ನು ಹರಾಜು ಮಾಡಲಾಯಿತು. ಹರಾಜಿನಲ್ಲಿ ಒಟ್ಟು ₹91 ಲಕ್ಷ ಸಂಗ್ರಹವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.