ಚಿಕ್ಕಮಗಳೂರು: ‘ಬೆಟ್ಟದ ತುದಿಯಲ್ಲಿ ವರ್ಷದಲ್ಲಿ ಒಂದೇ ದಿನ ದರ್ಶನ ನೀಡುತ್ತಿದ್ದ ಬಿಂಡಿಗ ದೇವೀರಮ್ಮ ಉತ್ಸವವನ್ನು ಎರಡು ದಿನಗಳಿಗೆ ದೇಗುಲ ಸಮಿತಿ ವಿಸ್ತರಿಸಿದೆ. ಸಮಿತಿ ಪ್ರಕಾರವೇ ರಾತ್ರಿ ವೇಳೆ ದೇವಿಯ ದರ್ಶನಕ್ಕೆ ಅವಕಾಶ ಇಲ್ಲ. ಆದ್ದರಿಂದ ರಾತ್ರಿ ವೇಳೆ ಭಕ್ತರು ಬೆಟ್ಟ ಏರುವುದನ್ನು ನಿಯಂತ್ರಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದರು.
ಪ್ರತಿವರ್ಷದಂತೆ ನರಕ ಚತುರ್ದಶಿಯ ದಿನ(ಅ.20) ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಇತ್ತು. ಈ ವರ್ಷ ಒಂದು ದಿನ ಮುನ್ನವೇ ಅವಕಾಶ ನೀಡಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ವೇಳೆ ಬೆಟ್ಟ ಏರುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಅ.19ರಂದು ಬೆಳಿಗ್ಗೆ 9ರಿಂದ ಬೆಟ್ಟದ ಮೇಲೆ ದೇವಿಯ ದರ್ಶನಕ್ಕೆ ಅವಕಾಶ ಇದೆ. ಅದಕ್ಕೂ ಮುನ್ನ 7 ಗಂಟೆಯ ಬಳಿಕ ಭಕ್ತರು ಬೆಟ್ಟ ಏರಲು ಅವಕಾಶ ನೀಡಲಾಗುವುದು. ಮಲ್ಲೇನಹಳ್ಳಿ ಮಾರ್ಗ, ಕೈಮರ ಮಾರ್ಗ ಮತ್ತು ಅರಿಶಿನಕುಂಟೆ ಮಾರ್ಗದಲ್ಲಿ ಪೊಲೀಸರನ್ನು ನಿಯೋಜಿಸಿ ನಿಗದಿತ ಸಮಯದ ನಂತರ ಭಕ್ತರು ಸಾಗಲು ಅನುಕೂಲ ಮಾಡಲಾಗುವುದು ಎಂದರು.
ಮರು ದಿನ ಅ.20ರಂದು ಬೆಳಿಗ್ಗೆ 7 ಗಂಟೆ ನಂತರ ದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಸಮಿತಿ ನಿರ್ಧರಿಸಿ ಆಹ್ವಾನ ಪತ್ರಿಕೆಯಲ್ಲೇ ಮುದ್ರಿಸಿದೆ. ಆದ್ದರಿಂದ ರಾತ್ರಿ ಬೆಟ್ಟ ಏರಿದರೆ ಭಕ್ತರಿಗೆ ಯಾವುದೇ ಪ್ರಯೋಜನ ಇಲ್ಲ. 7 ಗಂಟೆಯ ನಂತರ ಗುಡ್ಡದ ತುದಿ ತಲುಪಿದರೆ ಅನುಕೂಲವಾಗಲಿದೆ ಎಂದು ತಿಳಿಸಿದರು.
‘ಮುನ್ನ ದಿನ ಬೆಟ್ಟ ಏರಿದವರು ಅಲ್ಲೇ ಉಳಿಯಲು ಅವಕಾಶ ನೀಡುವುದಿಲ್ಲ. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಿದ್ದು, ವಾಪಸ್ ಕಳುಹಿಸಲಿದ್ದಾರೆ. ಸಮಯ ನಿಗದಿ ಮಾಡಿರುವುದು ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಲ್ಲ. ದೇಗುಲ ಸಮಿತಿ ಕೈಗೊಂಡಿರುವ ನಿರ್ಣಯದಂತೆ ಭದ್ರತೆ ಒದಗಿಸುವ ಜವಾಬ್ದಾರಿಯನ್ನಷ್ಟೇ ನಾವು ಮಾಡುತ್ತಿದ್ದೇವೆ’ ಎಂದು ವಿವರಿಸಿದರು.
ಬೆಟ್ಟದಲ್ಲಿ ಪಟಾಕಿ ಸಿಡಿಸದಂತೆ ಸೂಚನೆ ನೀಡಲಾಗಿದೆ. ಅದನ್ನೂ ಮೀರಿದರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲೆಡೆ ಡ್ರೋಣ್ ಮೂಲಕ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದರು.
‘ಎರಡು ದಿನ ಭಕ್ತರು ಬೆಟ್ಟ ಏರುವುದರಿಂದ ಕಳೆದ ವರ್ಷಕ್ಕಿಂತ ಎರಡು ಪಟ್ಟು ಪೊಲೀಸ್ ಸಿಬ್ಬಂದಿಯನ್ನು ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ. ರಾತ್ರಿ ಕೂಡ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜಿಲ್ಲೆಯ ಸಿಬ್ಬಂದಿ ಜತೆಗೆ ಪಶ್ಚಿಮ ವಲಯದಿಂದ ಅಧಿಕಾರಿ ಮತ್ತು ಸಿಬ್ಬಂದಿ ಕರೆಸಲಾಗುತ್ತಿದೆ. 250 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಕೂಡ ನಿಯೋಜಿಸಿಕೊಳ್ಳಲಾಗುತ್ತಿದೆ. ಆಹಾರದ ಕಿಟ್‌ಗಳನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಅ.18 ಮತ್ತು 19ರಂದು ಜೋರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾತ್ರಿ ವೇಳೆ ಮಳೆಯಲ್ಲಿ ಗುಡ್ಡದ ಮಧ್ಯದಲ್ಲಿ ಸಿಲುಕಿದರೆ ತೊಂದರೆಯಾಗಲಿದೆ. ಆದ್ದರಿಂದ ಹಗಲಿನಲ್ಲಿ ಬೆಟ್ಟ ಏರುವುದು ಸೂಕ್ತ ಎಂಬ ನಿರ್ಧಾರವನ್ನು ಸಮಿತಿ ಕೈಗೊಂಡಿದೆ. ಬಳಿಕ ಸಮಿತಿ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಿದೆ. ಅದರಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ನಗರದಿಂದ ಹೋಗುವವರಿಗೆ ಹೆಚ್ಚುವರಿಯಾಗಿ 50 ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಕಲ್ಪಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.