ADVERTISEMENT

ಕಡೂರು | ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ: ಗಣತಿ ಕಾರ್ಯ ವಿಳಂಬ

ನಡೆಯದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:15 IST
Last Updated 23 ಸೆಪ್ಟೆಂಬರ್ 2025, 5:15 IST
ಕಡೂರು ಪಟ್ಟಣದ ಬಿಇಒ ಕಚೇರಿಯ ಮುಂದೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಗಣತಿದಾರರಿಗೆ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಕಿಟ್ ವಿತರಿಸಿದರು. ದೇವರಾಜ್ ಎಸ್.ಎಸ್., ಎಂ.ಎಚ್.ತಿಮ್ಮಯ್ಯ, ಶಿಕ್ಷಕರು ಇದ್ದರು.
ಕಡೂರು ಪಟ್ಟಣದ ಬಿಇಒ ಕಚೇರಿಯ ಮುಂದೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಗಣತಿದಾರರಿಗೆ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಕಿಟ್ ವಿತರಿಸಿದರು. ದೇವರಾಜ್ ಎಸ್.ಎಸ್., ಎಂ.ಎಚ್.ತಿಮ್ಮಯ್ಯ, ಶಿಕ್ಷಕರು ಇದ್ದರು.   

ಕಡೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದರಿಂದ ಗಣತಿಯ ಮೊದಲ ದಿನವಾದ ಸೋಮವಾರ  ಸಮೀಕ್ಷಾ ಕಾರ್ಯ ನಡೆಯಲಿಲ್ಲ. ಮಂಗಳವಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ ಎಂದು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು.

ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ 2025ಕ್ಕೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಬೆಳಿಗ್ಗೆ ಗಣತಿದಾರರಿಗೆ ಗಣತಿಯ ಕಿಟ್ ನೀಡುವುದರ ಮೂಲಕ ಸಮೀಕ್ಷೆಗೆ ಚಾಲನೆ ನೀಡಲಾಗಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವೇ ಕರ್ನಾಟಕ ಅಪ್ಲಿಕೇಶನ್ ಮತ್ತು ಕಾರ್ಯ ನಿರ್ವಹಿಸುವ ಸ್ಥಳ ತೋರಿಸುವ ಲೊಕೇಷನ್ ಅಪ್ಲಿಕೇಶನ್ ಕೂಡ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಮೊಬೈಲ್‌ ಒಟಿಪಿ ಬರುತ್ತಿರಲಿಲ್ಲ. ಚಿಕ್ಕಮಗಳೂರಿನಿಂದ ಬಂದ ತಾಂತ್ರಿಕ ತಂಡವು ದೋಷವನ್ನು ಸರಿಪಡಿಸಿತು. ನಂತರ ಅಪ್ಲಿಕೇಷನ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಅಧಿಕಾರಿ ದೇವರಾಜ್ ಎಸ್.ಎಸ್. ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 79,113 ಮನೆಗಳನ್ನು ಗುರುತಿಸಿದ್ದು, 7,041 ಬ್ಲಾಕ್‌ಗಳನ್ನು ಮಾಡಲಾಗಿದೆ. 741 ಗಣತಿದಾರರನ್ನು ನೇಮಿಸಿದ್ದು 20 ಬ್ಲಾಕ್‌ಗಳಿಗೆ ಒಬ್ಬ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಗಣತಿದಾರರು ಪ್ರತಿ ಮನೆಗಳಿಗೂ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯ ಮುಖ್ಯಸ್ಥರು ಆಧಾರ್ ಲಿಂಕ್ ಆಗಿರುವ ಮೊಬೈಲ್, ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆಗಳ ವಿವರಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದರೆ ಸುಲಭವಾಗಿ ಗಣತಿ ಕಾರ್ಯ ನಡೆಸಲು ನೆರವಾಗಲಿದೆ ಎಂಬ ಮಾಹಿತಿ ನೀಡಿದರು.

ADVERTISEMENT

ಸೋಮವಾರ ಆರಂಭವಾದ ಸಾಮಾಜಿಕ ಗಣತಿಗೆ ತಾಲೂಕಿನ ಎಲ್ಲಾ ಗಣತಿದಾರರು ಮತ್ತು ಸಿಬ್ಬಂದಿಗೆ ಸಾರ್ವಜನಿಕರು ಸೂಕ್ತ ಮಾಹಿತಿ ನೀಡಿ, ಬಂದಂತಹ ಗಣತಿದಾರರಿಗೆ ಸಹಕರಿಸಿ ಎಂದು ಶಾಸಕ ಕೆ.ಎಸ್.ಆನಂದ್ ಸಂದೇಶ ಕಳುಹಿಸಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಎಂ.ಎಚ್., ಗಣತಿದಾರರು ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.