ADVERTISEMENT

ಕೇಂದ್ರದಿಂದ 10 ದಿನಗಳಲ್ಲಿ ಅನುದಾನ: ಶೋಭಾ ಕರಂದ್ಲಾಜೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 12:06 IST
Last Updated 1 ಅಕ್ಟೋಬರ್ 2019, 12:06 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಚಿಕ್ಕಮಗಳೂರು: ‘ನೆರೆ, ಅತಿವೃಷ್ಟಿಯ ಪರಿಹಾರ, ಪುನರ್ವಸತಿಗೆ ಇನ್ನು 10 ದಿನಗಳಲ್ಲಿ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡುವ ವಿಶ್ವಾಸ ಇದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾನಿ ವೀಕ್ಷಣೆ ಮಾಡಿದ್ದಾರೆ. ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ, ಇತರ ರಾಜ್ಯಗಳಲ್ಲಿ ನೆರೆ, ಅತಿವೃಷ್ಟಿಯಿಂದಾಗಿ ಹಾನಿ ಸಂಭವಿಸಿದೆ. ಕೇಂದ್ರ ಸರ್ಕಾರವು ತಂಡ ಕಳಿಸಿ ಹಾನಿ ಅಧ್ಯಯನ ಮಾಡಿಸಿದೆ. ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಬೇಕು ಎಂದು ಲೆಕ್ಕ ಹಾಕಿ ಅನುದಾನ ಬಿಡುಗಡೆ ಮಾಡೇ ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ವಿವಿಧ ರಾಜ್ಯಗಳಲ್ಲಿ ಅತಿವೃಷ್ಟಿ ಹಾನಿ ಪರಿಶೀಲಿಸಲಾಗುತ್ತಿದ್ದು, ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ’ ಎಂದರು.

‘ಮೂಡಿಗೆರೆ ಭಾಗದ ಆಲೆಖಾನ್‌ ಹೊರಟ್ಟಿ, ಮಲೆಮನೆ ಇತರೆಡೆಗಳವರು ಮನೆಗಳನ್ನು ಸ್ಥಳಾಂತರಿಲು ಕೋರಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಾರ್ಯಗತ ರಾಗಿದ್ದಾರೆ’ ಎಂದು ಉತ್ತರಿಸಿದರು.

‘ತಾತ್ಕಾಲಿಕ ಪರಿಹಾರ ನಿಟ್ಟಿನಲ್ಲಿ ಸಂತ್ರಸ್ತರಿಗೆ ನೆರವು ಒದಗಿಸಲಾಗಿದೆ. ಶಾಶ್ವತ ‍ಪರಿಹಾರಕ್ಕೆ ಅನುದಾನ ಅಗತ್ಯ ಇದೆ. ವಿಜಯಪುರ, ಬೆಳಗಾವಿ, ಚಿಕ್ಕೋಡಿ ಬಾಗಲಕೋಟೆ ಭಾಗಗಳಲ್ಲಿ ನೆರೆ ಬಾಧಿತ ಕೆಲ ಊರುಗಳನ್ನೇ ಸ್ಥಳಾಂತರಿಸುವ ಯೋಚನೆ ಇದೆ. ಬಡಾವಣೆಗಳನ್ನು ನಿರ್ಮಿಸಿ ಮನೆ ಕಟ್ಟಿಸುವ ಉದ್ದೇಶ ಇದೆ’ ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿ ಪ‍ರಿಹಾರಕ್ಕೆ ಆದ್ಯತೆ ನೀಡಿದ್ದೇವೆ. ಚಿಕ್ಕಮಗಳೂರು– ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಕಲ್ಪಿಸುವಂತೆ ಮನವಿ ಮಾಡಿದ್ದೇವೆ ಎಂದರು.

‘ಬೆಳೆ, ತೋಟ ಹಾನಿ; ಸಮೀಕ್ಷೆಗೆ ಮಂಡಳಿಗೆ ಒತ್ತಡ’
‘ಕಾಫಿ ಬೆಳೆ, ತೋಟ ಹಾನಿ ಬಗ್ಗೆ ಸಮೀಕ್ಷೆ ಮಾಡುವಂತೆ ಕಾಫಿ ಮಂಡಳಿಗೆ ಒತ್ತಡ ಹಾಕಿದ್ದೆವೆ. ತೋಟ ನಾಶವಾಗಿರುವುದಕ್ಕೆ ನೆರವವು ನೀಡುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇವೆ’ ಎಂದು ಶೋಭಾ ಹೇಳಿದರು.

ಕಾಫಿ ಮಂಡಳಿಯ ಕಾರ್ಯದರ್ಶಿಗೆ ಯಾವುದರ ಬಗ್ಗೆಯೂ ಆಸಕ್ತಿ ಇಲ್ಲ. ಕಾರ್ಯದರ್ಶಿಯನ್ನು ಬದಲಾಯಿಸುವಂತೆ ಕಾಫಿ ಬೆಳೆವ ಭಾಗಗಳ ಸಂಸದರೆಲ್ಲರೂ ಕೇಂದ್ರ ಸರ್ಕಾರಕ್ಕೆ ಕೋರಿದ್ದೇವೆ ಎಂದರು.

‘ಬಿಜೆಪಿಯಲ್ಲಿ ಬಣ; ಹುರುಳಿಲ್ಲ’
‘ಬಿಜೆಪಿಯಲ್ಲಿ ಮೂರು ಬಣಗಳಿವೆ ಎಂಬ ಹೇಳಿಕೆಯಲ್ಲಿ ಹುರುಳಿಲ್ಲ. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಯಡಿಯೂರಪ್ಪ ಸರ್ಕಾರ ನಡೆಸುತ್ತಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಪಕ್ಷದ ಸಾಂಸ್ಥಿಕ ಚುನಾವಣೆಗಳಿಗೆ ಆದ್ಯತೆ ನೀಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಶೋಭಾ ಪ್ರತಿಕ್ರಿಯಿಸಿದರು.

‘ಅನರ್ಹ ಶಾಸಕರು ಬಿಜೆಪಿ ಸೇರುವುದಾದರೆ ಸ್ವಾಗತಿಸುತ್ತೇವೆ. ಅವರಿಗೆ ಚುನಾವಣೆಯಲ್ಲಿ ಸ್ವರ್ಧಿಸಲು ಅವಕಾಶ ನೀಡಲು ಪಕ್ಷ ತಯಾರಿದೆ ಎಂದು ನಾಯಕರು ಹೇಳಿದ್ದಾರೆ. ಕ್ಷೇತ್ರಗಳ ಪರಿಸ್ಥಿತಿ ಅವಲೋಕನ ಮಾಡಬೇಕಿದೆ. 17ರಲ್ಲಿ 15 ಸ್ಥಾನಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಳ್ಳಬೇಕಿದೆ’ ಎಂದು ಉತ್ತರಿಸಿದರು.

‘ಒಳಜಗಳ ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಟೀಕೆ’
‘ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಒಳಜಗಳ ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಮಾತಾಡಿದ್ದಾರೆ. ಡಿ.ಕೆ.ಶಿವಕುಮಾರ್‌, ಕೆ.ಎಚ್‌.ಮುನಿಯಪ್ಪ ಅವರೊಂದಿಗಿನ ಜಗಳ ಮರೆಮಾಚಲು ಬಿಜೆಪಿ ವಿರುದ್ಧ ಹೇಳಿಕೆ ನೀಡಿ, ವಿಷಯಾಂತರ ಮಾಡುವ ಯತ್ನದಲ್ಲಿ ತೊಡಗಿದ್ದಾರೆ’ ಎಂದು ಶೋಭಾ ‍ಪ್ರತಿಕ್ರಿಯಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಹಣಕಾಸಿನ ಪರಿಸ್ಥಿತಿ ಹದಗೆಡಿಸಿ ಹೋಗಿದ್ದಾರೆ. ಹೀಗಾಗಿ, ಕೆಲಸ ಮಾಡಲು ಯಡಿಯೂರಪ್ಪ ಅವರಿಗೆ ಸಹಜವಾಗಿ ಕಷ್ಟವಾಗುತ್ತಿದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.