ADVERTISEMENT

ಚಿಕ್ಕಮಗಳೂರು–ತಿರುಪತಿ ರೈಲಿಗೆ ಚಾಲನೆ; ಎಕ್ಸ್‌ಪ್ರೆಸ್‌ಗೆ ಶೀಘ್ರ ನಾಮಕರಣ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 9:17 IST
Last Updated 11 ಜುಲೈ 2025, 9:17 IST
   

ಚಿಕ್ಕಮಗಳೂರು: ತಿರುಪತಿ–ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲಿಗೆ ದತ್ತಾತ್ರೇಯ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡುವ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಚಿಕ್ಕಮಗಳೂರಿನಿಂದ ಹೊರಟ ತಿರುಪತಿ ರೈಲಿಗೆ ಚಾಲನೆ ನೀಡಿದ ಅವರು, 'ದತ್ತಾತ್ರೇಯ ಎಕ್ಸ್‌ಪ್ರೆಸ್‌, ದತ್ತಪೀಠ ಎಕ್ಸ್‌ಪ್ರೆಸ್‌ ಅಥವಾ ದತ್ತಾತ್ರೇಯ – ಶ್ರೀನಿವಾಸ ಎಕ್ಸ್‌ಪ್ರೆಸ್‌ ಇವುಗಳಲ್ಲಿ ಯಾವ ಹೆಸರಿಡಬೇಕು ಎಂಬುದನ್ನು ಸಿ.ಟಿ.ರವಿ, ಎಂ.ಕೆ.ಪ್ರಾಣೇಶ್, ಕೋಟ ಶ್ರೀನಿವಾಸ ಪೂಜಾರಿ ಕುಳಿತು ಅಂತಿಮಗೊಳಿಸಿ ಮನವಿ ಸಲ್ಲಿಸಿ. ರೈಲ್ವೆ ಮಂಡಳಿ ಮುಂದೆ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಹಾಸನ – ಬೇಲೂರು – ಚಿಕ್ಕಮಗಳೂರು ನಡುವಿನ ಹೊಸ ಮಾರ್ಗದಲ್ಲಿ ಇನ್ನು ಎರಡು ವರ್ಷಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಭೂಸ್ವಾಧೀನ ಪ್ರಕ್ರಿಯೆ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹಾಸನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಭೂಮಿ ಹಸ್ತಾಂತರ ಆದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ADVERTISEMENT

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, 'ತಿರುಪತಿ ರೈಲಿಗೆ ಗುರು ದತ್ತಾತ್ರೇಯರ ಹೆಸರಿಟ್ಟರೆ ಸಾರ್ಥಕವಾಗಲಿದೆ. ಯಾರ ವಿರೋಧವೂ ಬರುವುದಿಲ್ಲ' ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, 'ಹಲವು ವರ್ಷಗಳ ಬೇಡಿಕೆ ಈಡೇರಿದೆ. ಹಿಂದೆ ಆಡಳಿತ ನಡೆಸಿದವರು ಕಂಬಿ ಇಲ್ಲದ ರೈಲು ಬಿಡುತ್ತಿದ್ದರು. ಬಿಜೆಪಿ ಸರ್ಕಾರ ಜನರ ಕನಸು ಸಾಕಾರಗೊಳಿಸಿದೆ' ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 'ಚಿಕ್ಕಮಗಳೂರಿನಿಂದ ತಿರುಪತಿಗೆ ಹೋಗುವ ರೈಲು ಮತ್ತೆ 48 ಗಂಟೆಗಳಲ್ಲಿ ವಾಪಸ್ ಬರಲು ಅವಕಾಶ ಮಾಡಬೇಕು. ಚಿಕ್ಕಮಗಳೂರು – ಶೃಂಗೇರಿ – ಉಡುಪಿ – ಕೊಲ್ಲೂರು ಹೊಸ ಮಾರ್ಗದ ಬಗ್ಗೆ ಸಮೀಕ್ಷೆ ನಡೆಸಬೇಕು' ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.