ADVERTISEMENT

ಚಿಕ್ಕಮಗಳೂರು | ವರ್ಷವಿಡೀ ಮಳೆ: ಗುಂಡಿಗಳ ಪಯಣ ಉಳಿಸಿ ಹೋದ 2025

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:14 IST
Last Updated 29 ಡಿಸೆಂಬರ್ 2025, 5:14 IST
ನರಸಿಂಹರಾಜಪುರ ತಾಲ್ಲೂಕಿನ ಮಡಬೂರು ಗ್ರಾಮದ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಆಗಸ್ಟ್ ತಿಂಗಳಲ್ಲಿ ಸೆರೆ ಹಿಡಿಯಲಾಯಿತು (ಪ್ರಜಾವಾಣಿ ಸಂಗ್ರಹ ಚಿತ್ರ)
ನರಸಿಂಹರಾಜಪುರ ತಾಲ್ಲೂಕಿನ ಮಡಬೂರು ಗ್ರಾಮದ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಆಗಸ್ಟ್ ತಿಂಗಳಲ್ಲಿ ಸೆರೆ ಹಿಡಿಯಲಾಯಿತು (ಪ್ರಜಾವಾಣಿ ಸಂಗ್ರಹ ಚಿತ್ರ)   

ಚಿಕ್ಕಮಗಳೂರು: ಎಡೆಬಿಡದ ಮಳೆಯ ನಡುವೆ ಗುಂಡಿ ರಸ್ತೆಗಳಲ್ಲಿ ಪಯಣ, ಆನೆ–ಮಾನವ ಸಂಘರ್ಷ ಹೆಚ್ಚಳ, ನಕ್ಸಲ್ ಮಲೆನಾಡು ಸೇರಿ ಹಲವು ನೆನಪುಗಳನ್ನು ಜನರಿಗೆ ಉಳಿಸಿ 2025ನೇ ವರ್ಷ ಹೊರಟಿದೆ.

ಆರಂಭದಲ್ಲಿ ಎರಡು ತಿಂಗಳನ್ನು ಹೊರತುಪಡಿಸಿದರೆ ಮಾರ್ಚ್‌ನಿಂದಲೇ ಮುಂಗಾರು ಪೂರ್ವ ಮಳೆ ಆರಂಭವಾಯಿತು. ನವೆಂಬರ್ ತನಕವೂ ಮಳೆ ಸುರಿಯಿತು. ತುಂಗಾ, ಭದ್ರಾ, ಹೇಮಾವತಿ, ಯಗಚಿ, ವೇದಾವತಿ, ನೇತ್ರಾವತಿ ನದಿಗಳು ಉಕ್ಕಿ ಹರಿದವು. ರಸ್ತೆ, ಸೇತುವೆಗಳು ಕೊಚ್ಚಿ ಹೋದವು.

ವರ್ಷವಿಡೀ ಗುಂಡಿ–ಗೊಟರು ರಸ್ತೆಗಳಲ್ಲೇ ಜನ ಪ್ರಯಾಣ ಮಾಡಿ ರೋಸಿ ಹೋಗಿದ್ದಾರೆ. ಮಳೆ ಬಿಡುವ ನೀಡಿದ ಬಳಿಕ ಡಿಸೆಂಬರ್‌ನಲ್ಲಿ ಕೆಲ ರಸ್ತೆಗಳ ಡಾಂಬರೀಕರಣ ಕಾಮಗಾರಿ ಆರಂಭವಾಗಿದೆ.

ADVERTISEMENT

ಪ್ರಮುಖ ಘಟನಾವಳಿಗಳು: ಜ.8ರಂದು ನಕ್ಸಲರು ಶರಣು

ಜ.11: ಶೃಂಗೇರಿ ಶಾರದ ಪೀಠದ ಭಾರತೀತೀರ್ಥ ಸ್ವಾಮೀಜಿ ಅವರು ಸನ್ಯಾಸತ್ವ ಸ್ವೀಕರಿಸಿ ಐವತ್ತು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಆಯೋಜಿಸಿದ್ದ ಶಾಂಕರ ತತ್ವ ಪ್ರಸಾರ ಅಭಿಯಾನದಲ್ಲಿ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ನಡೆಯಿತು.

ಫೆ.2: ನಕ್ಸಲ್ ಹೋರಾಟ ಕೋಟೆಹೊಂಡ ರವಿ ಜಿಲ್ಲಾಡಳಿತದ ಮುಂದೆ ಶರಣಾದರು.

ಫೆ.6: ಕಾಡುಕೋಣ ದಾಳಿಗೆ ಕಳಸ ತಾಲ್ಲೂಕಿನ ಲಲಿತಾದ್ರಿ ಗ್ರಾಮದ ರಘುಪತಿ ಮೃತಪಟ್ಟರು.

ಫೆ.8: ತಣಗೆಬೈಲು ವನ್ಯಜೀವಿ ವ್ಯಾಪ್ತಿಯ ಕತ್ಲೆಖಾನ್ ಎಸ್ಟೇಟ್‌ನಲ್ಲಿ ಕಾಫಿ ತೋಟ ಕಾರ್ಮಿಕ ಮಹಿಳೆ ವಿನೋಬ ಬಾಯಿ ಅವರು ಆನೆ ದಾಳಿಗೆ ಮೃತಪಟ್ಟರು.

ಫೆ.28: ನ್ಯಾಯಾಲಯದ ಆದೇಶದಂತೆ ವಿಧಾನ ಪರಿಷತ್‌ ಚುನಾವಣೆ ಮರು ಮತ ಎಣಿಕೆ ನಡೆಸಿರುವ ಜಿಲ್ಲಾಡಳಿತ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿತು. 

ಮಾರ್ಚ್‌ 17: ಮಂಗನ ಕಾಯಿಲೆಗೆ ನರಸಿಂಹರಾಜಪುರ ತಾಲ್ಲೂಕಿನ ಕಟ್ಟಿನಮನೆ ಗ್ರಾಮದ 65 ವರ್ಷದ ಮಹಿಳೆ ಮೃತಪಟ್ಟರು.

ಏ.1: ತರೀಕೆರೆ ತಾಲ್ಲೂಕಿನ ಕೆಮ್ಮಣ್ಣುಗುಂಡಿ ಸಮೀಪ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿತು.

ಏ.2: ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ವ್ಯಕ್ತಿ ಹಾರಿಸಿದ ಗುಂಡಿಗೆ ಮಗಳು, ಅತ್ತೆ ಮತ್ತು ನಾದಿನಿ ಮೃತಪಟ್ಟಿದ್ದರು. ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ರತ್ನಾಕರ ಮೃತಪಟ್ಟರು.

ಜೂನ್ 7: ಅತಿವೃಷ್ಟಿ ಪ್ರದೇಶಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಜೂನ್‌ 10: ಬಂಡಾಜೆಗೆ ಚಾರಣ ಹೋಗಿದ್ದ ಬೆಂಗಳೂರಿನ ಆರು ವಿದ್ಯಾರ್ಥಿಗಳು ನಾಪತ್ತೆಯಾಗಿ ಆತಂಕ ಹುಟ್ಟಿಸಿದ್ದರು. ಮಧ್ಯರಾತ್ರಿ ಮರಳಿದರು.

ಜೂನ್ 14: ಚಿಕ್ಕಮಗಳೂರು ತಾಲ್ಲೂಕು ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಕುವೆಂಪು ಕಲಾಮಂದಿರದಲ್ಲಿ ನಡೆಯಿತು.

ಜೂನ್ 29: ಕೊಪ್ಪ ಪಟ್ಟಣದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಶಮಿತಾ(15) ಶೌಚಾಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಈ ಪ್ರಕರಣ ಮಲೆನಾಡಿನಲ್ಲಿ ಆತಂಕ ಹುಟ್ಟಿಸಿತ್ತು.

ಜುಲೈ 5: ನಗರಸಭೆ ನೂತನ ಅಧ್ಯಕ್ಷರಾಗಿ ಜೆಡಿಎಸ್– ಬಿಜೆಪಿ ಬೆಂಬಲಿತ ಬಿ.ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆಯಾದರು.

ಜುಲೈ 11: ಚಿಕ್ಕಮಗಳೂರು– ತಿರುಪತಿ ನಡುವಿನ ರೈಲು ಸಂಚಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

ಜುಲೈ 24: ನರಸಿಂಹರಾಜಪುರ ತಾಲ್ಲೂಕು ಬನ್ನೂರು ಗ್ರಾಮದ ಬಳಿ ಕಾರ್ಮಿಕ ಮಹಿಳೆ ಅನಿತಾ(25) ಕಾಡಾನೆ ದಾಳಿಗೆ ಮೃತಪಟ್ಟರು.

ಜುಲೈ 25: ‍‍‍ಪಿಕಪ್ ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಯುವಕ ಮೃತಪಟ್ಟಿದ್ದ.

ಜುಲೈ 28: ಕಾಡಾನೆ ದಾಳಿಗೆ ಬಾಳೆಹೊನ್ನೂರು ಅಂಡುವಾನೆ ಗ್ರಾಮದ ಸುಬ್ಬೇಗೌಡ ಹಾಗೂ ಸುನೀತಾ ಮೃತಪಟ್ಟರು.

ಸೆ.7: ಆರತಿ ಕೃಷ್ಣ ಅವರು ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡರು.

ಅ.19: ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. 

ಅ.31: ಶೃಂಗೇರಿ ತಾಲ್ಲೂಕಿನ ಕೆರೆ ಗ್ರಾಮದ ಉಮೇಶಗೌಡ ಮತ್ತು ಹರೀಶ್ ಶೆಟ್ಟಿ ಎಂಬುವರು ಕಾಡಾನೆ ತುಳಿದು ಮೃತಪಟ್ಟರು.

ನ.3: ಬೀರೂರು ಪಟ್ಟಣದಲ್ಲಿ ವೀರಶೈವ ಲಿಂಗಾಯುತ ಪಂಚಪೀಠಾಧೀಪತಿಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.

ನ.20: ಬೀರೂರು ಸಮೀಪದ ನವಿಲುಗುಡ್ಡದ ತೋಟದ ಮನೆ ಮುಂಭಾಗ ಆಟವಾಡುತ್ತಿದ್ದ ಐದು ವರ್ಷದ ಮಗುವನ್ನು ಚಿರತೆ ಹೊತ್ತೊಯ್ದು ಕೊಂಡು ಹಾಕಿತು.

ನ.28: ತರೀಕೆರೆ ತಾಲ್ಲೂಕಿನ ಬೈರಾಪುರ ಗ್ರಾಮದ 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತು.

ನ.29: ತರೀಕೆರೆ ತಾಲ್ಲೂಕಿನ ಬೈರಾಪುರ ಬಳಿ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಗುಂಡಿಗೆ ಚಿರತೆ ಬಲಿಯಾಯಿತು.

ಡಿ.1: ಸಮಾಜ ಸೇವಕಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮೋಹಿನಿ ಸಿದ್ದೇಗೌಡ ಅನಾರೋಗ್ಯದಿಂದ ನಿಧನರಾದರು.

ಡಿ.3: ದತ್ತ ಜಯಂತಿ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಿತು.

ಕಳಸ–ಕುದುರೆಮುಖ ರಸ್ತೆ ಸಂಪೂರ್ಣ ಹಾಳಾಗಿರುವುದು(ಸಂಗ್ರಹ ಚಿತ್ರ)
ಅರಣ್ಯ ಇಲಾಖೆ ಗುಂಡಿಗೆ ಬಲಿಯಾದ ಚಿರತೆ
ಅಂತ್ಯ ಕಂಡ ನಕ್ಸಲ್ ಹೋರಾಟ
25 ವರ್ಷಗಳ ಹಿಂದೆ ಮಲೆನಾಡಿನಲ್ಲಿ ಆರಂಭವಾದ ನಕ್ಸಲ್ ಹೋರಾಟ 2025ರಲ್ಲಿ ಅಂತ್ಯಕಂಡಿತು. ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆ ಬಳಿಕ ತೀವ್ರತೆ ಕಳೆದುಕೊಂಡಿದ್ದ ನಕ್ಸಲ್ ಚಳವಳಿ 2025ರಲ್ಲಿ ಕೊನೆಯಾಯಿತು. ಕೊಪ್ಪ ತಾಲ್ಲೂಕಿನ ಮೇಗೂರು ಕಾಡಿನಿಂದ ಜ.8ರಂದು ಹೊರ ಬಂದ ಆರು ನಕ್ಸಲ್ ಹೋರಾಟಗಾರರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದರು. ಆ ಮೂಲಕ ನಕ್ಸಲ್ ಹೋರಾಟ ಅಂತ್ಯಗೊಂಡಿತು. ಏಕಾಂಗಿಯಾಗಿದ್ದ ಕೋಟೆಹೊಂಡ ರವಿ ಫೆ.1ರಂದು ಶರಣಾದರು. ಆ ಮೂಲಕ ಇಡೀ ನಕ್ಸಲ್ ಹೋರಾಟ ಮಲೆನಾಡಿನಲ್ಲಿ ಅಂತ್ಯವಾಯಿತು. ರಾಜ್ಯ ನಕ್ಸಲ್ ಮುಕ್ತ ನಾಡು ಎಂದು ಘೋಷಣೆಯಾಯಿತು. ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್‌) ಕೂಡ ವಿಸರ್ಜನೆಯಾಯಿತು. ನಕ್ಸಲ್ ಬಾಧಿತ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ₹9.12 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತು.
ಮಲೆನಾಡಿನಲ್ಲಿ ಆನೆ–ಮಾನವ ಸಂಘರ್ಷ
ತಾಲ್ಲೂಕು ವ್ಯಾಪ್ತಿಯಲ್ಲಿ ಈ ಹಿಂದಿಗಿಂತಲೂ ಹೆಚ್ಚಿದ ಮಾನವ ಪ್ರಾಣಿ ಸಂಘರ್ಷ ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಾನವ– ಪ್ರಾಣಿ ಸಂಘರ್ಷಕ್ಕೆ 2025 ಸಾಕ್ಷಿಯಾಯಿತು. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಂಚಿನ ಕೆಲ ಗ್ರಾಮಗಳಿಗೆ ಬರುತ್ತಿದ್ದ ಕಾಡಾನೆಗಳು ಎಲ್ಲೆಡೆ ಹಾವಳಿ ನಡೆಸಿದವು. ಮಡಬೂರು ಮುತ್ತಿನಕೊಪ್ಪ ಸಾತ್ಕೋಳಿ ದೊಡ್ಡಿನತಲೆ ಮಾಕೋಡು ಗೇರುಬೈಲು ಸೂಸಲವಾನಿ ಚೆನಮಣಿ ಮಳಲಿ ಬಣಗಿ ಆರಂಬಳ್ಳಿ ದ್ವಾರಮಕ್ಕಿ ರಾವೂರು ಲಿಂಗಾಪುರ ಗ್ರಾಮಗಳು ಆಡುವಳ್ಳಿ ಕರ್ಕೇಶ್ವರ ಕಾನೂರು ಸೀತೂರು ಸೇರಿ ಸುತ್ತಮುತ್ತಲ ಗ್ರಾಮಗಳಿಗೆ ಆನೆಗಳು ಬಂದವು. ರೈತರೊಬ್ಬರು ಮೃತಪಟ್ಟರೆ ಮಡಬೂರು ಗ್ರಾಮ ವ್ಯಾಪ್ತಿಯಲ್ಲಿ ರೈತರೊಬ್ಬರು ಒಂಟಿ ಸಲಗದ ದಾಳಿಗೆ ಮೃತಪಟ್ಟರು. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆ ಉಪಟಳದ ಜತೆಗೆ ಕಾಡು ಹಂದಿಗಳ ಉಪಟಳವೂ ಹೆಚ್ಚಾಯಿತು. ಉಪಟಳ ನೀಡುತ್ತಿದ್ದ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲಾಯಿತು. ಸಮಾಜವಾದಿ ಚಿಂತಕ ಎಚ್.ಟಿ.ರಾಜೇಂದ್ರ ಅವರು ಜುಲೈ 13ರಂದು ನಿಧನರಾದರು. ನರಸಿಂಹರಾಜಪುರ ಪಟ್ಟಣದ ರಸ್ತೆ ವಿಸ್ತರಣೆಗೆ ರಾಜ್ಯ ಸರ್ಕಾರ ₹60ಕೋಟಿ ಅನುದಾನ ಬಿಡುಗಡೆ ಮಾಡಿತು.
ಬಯಲು ಸೀಮೆಯಲ್ಲಿ ಹೆಚ್ಚಾದ ಚಿರತೆ ಭಯ
ಬಯಲು ಸೀಮೆಯಲ್ಲಿ ಚಿರತೆ ದಾಳಿ ಪ್ರಕರಣಗಳು 2025ರಲ್ಲಿ ಹೆಚ್ಚಾಗಿ ಜನರ ನೆಮ್ಮದಿ ಹಾಳಾಗಿದೆ. ಹಗಲು ವೇಳೆಯೇ ಚಿರತೆಗಳು ಮನೆಗಳ ಬಳಿ ಕಾಣಿಸಿಕೊಂಡು ಹಳ್ಳಿಗರ ಅತಂಕ ಹೆಚ್ಚಿಸಿವೆ. ಎಮ್ಮೆದೊಡ್ಡಿ ಪ್ರದೇಶದಲ್ಲಿ ಬೈಕ್ ಸವಾರರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿತ್ತು. ಚಿರತೆಯನ್ನು ಗ್ರಾಮಸ್ಥರು ಅಟ್ಟಾಡಿಸಿದ್ದರು. ಅದೇ ದಿನ ಕೆರೆಯಲ್ಲಿ ಚಿರತೆಯೊಂದರ ಶವ ಪತ್ತೆಯಾಗಿತ್ತು. ಎಲ್ಲೆಂದರಲ್ಲಿ ಗೋಚರಿಸುತ್ತಿರುವ ಚಿರತೆಗಳು ರಾತ್ರಿ ವೇಳೆ ಊರಿನೊಳಗೆ ನುಗ್ಗಿ ಹಸು ನಾಯಿ ಕುರಿ ಸೇರಿ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿವೆ. ಇದರಿಂದ ಜನರು ರಾತ್ರಿ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಇದರ ನಡುವೆ ತರೀಕೆರೆ ತಾಲ್ಲೂಕಿನ ಬೈರಾಪುರ ಬಳಿ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಗುಂಡಿಗೆ ಚಿರತೆ ಬಲಿಯಾಯಿತು.
ಏರಿಳಿತ ಕಂಡ ಕಾಫಿ
ಬೆಲೆ 2025ರಲ್ಲಿ ಕಾಫಿ ಬೆಲೆ ಸಾರ್ವಕಾಲಿಕ ಎತ್ತರಕ್ಕೆ ಏರಿದ್ದರಿಂದ ಕಾಫಿ ಕೃಷಿ ಭರವಸೆ ಮೂಡಿಸಿತು. ರೊಬಸ್ಟಾ ಕಾಫಿ ಬೇಳೆ ಕೆಜಿಗೆ ₹500ಕ್ಕೆ ಏರಿ ಬೆಳೆಗಾರರನ್ನು ಆಗಸದಲ್ಲಿ ತೇಲಿಸಿತ್ತು. ವರ್ಷದ ಕೊನೆಯಲ್ಲಿ ಧಾರಣೆ ಕುಸಿದು ಕೆಜಿಗೆ₹350ಕ್ಕೆ ತಲುಪಿದೆ. ಬೆಂಗಳೂರಿನ ಐಟಿ ಉದ್ಯಮದ ಉದ್ಯೋಗ ಕಡಿತದ ಪರಿಣಾಮ ಪ್ರವಾಸೋದ್ಯಮ ಕೂಡ ಕುಸಿದಿದ್ದು ವಹಿವಾಟು ಶೇ 50ರಷ್ಟು ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.