
ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕಳವು ಪ್ರಕರಣ ಬೇಧಿಸಿರುವ ಪೊಲೀಸರು, ಆರು ಮಂದಿಯನ್ನು ಬಂಧಿಸಿ, ಸುಮಾರು ₹3.5 ಲಕ್ಷ ಮೌಲ್ಯದ ಕಾಫಿ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಕಲೇಶಪುರ ಮೂಲದ ಕೌಶಿಕ್, ನಾಗರಾಜ್, ಪ್ರಶಾಂತ್, ಭರತ್, ಶಿಶಿರಶಂಕರ್, ಮನುಗೌಡ ಬಂಧಿತ ಆರೋಪಿಗಳು.
ತಾಲ್ಲೂಕಿನ ಕಸ್ಕೇಬೈಲ್ ಗ್ರಾಮದ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ರಂಗಸ್ವಾಮಿ ಅವರಿಗೆ ಸೇರಿದ ಗೋದಾಮಿನಲ್ಲಿ 2025ರ ಮೇ 10ರಂದು ₹1.4 ಲಕ್ಷ ಮೌಲ್ಯದ ಕಾಫಿ ಕಳ್ಳತನ ನಡೆದಿತ್ತು. ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಎಸ್ಟೇಟಿನಲ್ಲಿ 2025ರ ನವೆಂಬರ್ 30ರಂದು ₹2.80 ಲಕ್ಷ ಮೌಲ್ಯದ ಕಾಫಿ ಕಳ್ಳತನವಾಗಿತ್ತು. ಎರಡೂ ಪ್ರಕರಣಗಳ ತನಿಖೆಯನ್ನು ಕೈಗೊಂಡ ಪೊಲೀಸರು, ಇದೇ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದ ಸಕಲೇಶಪುರ ಮೂಲದ ಕೌಶಿಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಕಳವಾಗಿದ್ದ ಕಾಫಿ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಗೌತಮ್ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿವೈಎಸ್ ಪಿ ಕೆ.ಆರ್.ನಾಗರಾಜ್ ನಿರ್ದೇಶನದಂತೆ ಮೂಡಿಗೆರೆ ಸರ್ಕಲ್ ಇನ್ ಸ್ಪೆಕ್ಟರ್ ರಾಜಶೇಖರ್, ಗೋಣಿಬೀಡು ಪಿಎಸ್ಐ ಹರ್ಷಗೌಡ, ಅಪರಾಧ ವಿಭಾಗದ ಪಿಎಸ್ಐ ಹೇಮಾ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.