ಮೂಡಿಗೆರೆ: ಧರ್ಮಸ್ಥಳದ ಹಣದಿಂದ ಬಿಜೆಪಿ, ಜೆಡಿಎಸ್ ಚುನಾವಣೆ ಎದುರಿಸಲು ಷಡ್ಯಂತ್ರ ನಡೆಸಿವೆ ಎಂದು ಕಾಂಗ್ರೆಸ್ ಬ್ಲಾಕ್ ವಕ್ತಾರ ಮರಗುಂದ ಪ್ರಸನ್ನ ಆರೋಪಿಸಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿ, ಜೆಡಿಎಸ್ ನಾಯಕರಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹುಂಡಿ ಹಣದ ಮೇಲೆ ಕಣ್ಣು ಬಿದ್ದಿದೆ. ಧರ್ಮಸ್ಥಳದ ಖಜಾನೆ ಹಣದಲ್ಲಿ ಮುಂದಿನ ಚುನಾವಣೆಯನ್ನು ನಡೆಸಲು ಉಭಯ ಪಕ್ಷಗಳ ನಾಯಕರು ಷಡ್ಯಂತ್ರ ರೂಪಿಸಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ಹಾಗೂ ವಕೀಲರ ಒತ್ತಾಯ ಹಾಗೂ ರಾಜ್ಯ ಮಹಿಳಾ ಆಯೋಗದ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್ಐಟಿಯನ್ನು ರಚಿಸಿದೆ. ತನಿಖೆಯಲ್ಲಿ ಲೋಪ ಕಂಡು ಬಂದಿದ್ದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿಗೆ ಬಿಜೆಪಿ, ಜೆಡಿಎಸ್ ಪಕ್ಷಗಳು ಅರ್ಜಿ ಹಾಕಿ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯುವಂತೆ ಒತ್ತಾಯಿಸಲಿ. ಅದು ಬಿಟ್ಟು ಈ ಎರಡು ಪಕ್ಷಗಳು ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ ರೂಪಿಸಿ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುವ ನಾಟಕ ಮಾಡುತ್ತಿವೆ ಎಂದು ಆರೋಪಿಸಿದರು.
‘ಬಿಜೆಪಿ, ಜೆಡಿಎಸ್‌ನ ಷಡ್ಯಂತ್ರಗಳನ್ನು ರಾಜ್ಯದ ಜನ ಒಪ್ಪಲು ಸಾಧ್ಯವಿಲ್ಲ. ಉಭಯ ಪಕ್ಷಗಳ ಇಂತಹ ನಾಟಕಗಳನ್ನು ನೋಡಿ ಜನರಿಗೆ ಸಾಕಾಗಿದೆ. ಎಸ್ಐಟಿ ತನಿಖೆಯಿಂದ ಪೂರ್ಣ ಸತ್ಯ ಹೊರ ಬರಲಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಯಾವುದೇ ಲಾಭವಾಗುವ ಲಕ್ಷಣ ಕಂಡು ಬರುತ್ತಿಲ್. ಹಾಗಾಗಿ ವಾಮಮಾರ್ಗದಲ್ಲಿ ಎರಡು ಪಕ್ಷಗಳು ನಾಟಕಕ್ಕೆ ಇಳಿದಿವೆ. ಇಂತಹ ನಾಟಕಗಳಿಗೆ ಜನ ಮಣೆ ಹಾಕಲಾರರು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.