ADVERTISEMENT

ಜನಹಿತ ಮರೆತ ಕಾಂಗ್ರೆಸ್‌; ಅಭಿವೃದ್ಧಿ ಸ್ಥಗಿತ: ಬಿ.ಎಸ್‌.ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 14:10 IST
Last Updated 22 ಏಪ್ರಿಲ್ 2024, 14:10 IST
ಬೀರೂರಿನಲ್ಲಿ ಸೋಮವಾರ ನಡೆದ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಸಮಾವೇಶವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ  ಜಂಟಿಯಾಗಿ ಉದ್ಘಾಟಿಸಿದರು
ಬೀರೂರಿನಲ್ಲಿ ಸೋಮವಾರ ನಡೆದ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಸಮಾವೇಶವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ  ಜಂಟಿಯಾಗಿ ಉದ್ಘಾಟಿಸಿದರು   

ಬೀರೂರು: ‘ಜನಹಿತ ಮರೆತು, ಸರ್ಕಾರದ ಖಜಾನೆಯ ಲೂಟಿಯಲ್ಲಿ ತೊಡಗಿರುವ ಕಾಂಗ್ರೆಸ್‌ ಆಡಳಿತದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆʼ ಎಂದು ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ಬೀರೂರು ಪಟ್ಟಣದ ಕೆಎಲ್‌ಕೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಮತ ಯಾಚಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಈ ಹಿಂದೆ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮಿ ಯೋಜನೆ, ಕಿಸಾನ್‌ ಸಮ್ಮಾನ್‌ ನಿಧಿ ಅಡಿ ನೀಡುತ್ತಿದ್ದ ₹ 4ಸಾವಿರವನ್ನು ನಿಲ್ಲಿಸಲಾಗಿದೆ. ವಿದ್ಯುತ್‌ ದರ ಏರಿಕೆಯಾಗುತ್ತಿದೆ. ರೈತರ, ಬಡವರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ತುಘಲಕ್‌ ದರ್ಬಾರ್‌ನಂತೆ ನಡೆಯುತ್ತಿರುವ ಈ ಸರ್ಕಾರದ ನೀತಿಯಿಂದ  ಜನರು ಬೇಸತ್ತಿದ್ದಾರೆ. ಸರ್ಕಾರವೇ ದಿವಾಳಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ಧೂಳೀಪಟವಾಗಲಿದೆ. ಹೆಚ್ಚು ಸ್ಥಾನ ಗೆಲ್ತೀವಿ ಅನ್ನುವ ಕಾಂಗ್ರೆಸ್‌ನವರು ನಾಲ್ಕು ಹೆಸರು ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಒಂದಾಗಿ ಅಧಿಕಾರ ಮಾಡುತ್ತೇವೆ. ದೇವೇಗೌಡರೇ ನಿಮಗೆ ಭರವಸೆ ಕೊಡುತ್ತಿದ್ದೇನೆ, ಹಾಸನವೂ ಸೇರಿ 28 ಕ್ಷೇತ್ರಗಳನ್ನೂ ನಾವು ಗೆಲ್ಲುತ್ತೇವೆ’ ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ, ‘ರಾಜ್ಯದಲ್ಲಿ ಹಲವು ಜಿಲ್ಲೆಗಳು, ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬೆಂಗಳೂರಿನಲ್ಲಿ ಟ್ಯಾಂಕರ್‌ ಮಾಫಿಯಾಕ್ಕೆ ತಡೆಹಾಕಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.ನೀರಾವರಿ ಯೋಜನೆಗಳನ್ನು ಜಾರಿಗಳಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರದ ಮಹಾನುಭಾವರು ಜನರ ಹಣವನ್ನು ಲೂಟಿ ಮಾಡಿ ರಾಜಸ್ತಾನ, ಛತ್ತೀಸ್‌ಗಡ, ಮಧ್ಯಪ್ರದೇಶ ಚುನಾವಣೆಗೆ ಕಳಿಸಿದ್ದಾರೆ. ಜಗತ್ತೇ ಮೆಚ್ಚುವ ನರೇಂದ್ರ ಮೋದಿ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಮಮತಾ ಬ್ಯಾನರ್ಜಿ ಕಾಂಗ್ರೆಸ್‌ಗೆ ಮತ ಹಾಕಬೇಡಿ ಅಂತಾರೆ. ನಮ್ಮ ಸಿಎಂ ಹೇಳಲಿ, ಇಂಡಿಯಾ ಒಕ್ಕೂಟದಲ್ಲಿ ಇಂಥವರು ಪಿಎಂ ಆಗಲಿ ಅಂತ, ನಾನು ಅವರಿಗೆ ತಲೆ ಬಾಗುತ್ತೇನೆ’ ಎಂದರು.

ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಮಾತನಾಡಿ, ‘ಇದು ದಿಗ್ಗಜರ ಸಮಾಗಮ. ನಾನು ಮತ್ತು ಬೆಳ್ಳಿ ಪ್ರಕಾಶ್‌ ಒಂದಾಗಿ ಕಾರ್ಯಕರ್ತರ, ಮತದಾರರ ನೆರವಿನಿಂದ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಪಣ ತೊಟ್ಟಿದ್ದೇವೆ’ ಎಂದರು. ‘ದೇಶದ ಗ್ಯಾರಂಟಿಗಾಗಿ ನಾವು ಬಿಜೆಪಿ ಮತ್ತು ಎನ್‌ಡಿಎ ಬೆಂಬಲಿಸಬೇಕಿದೆ’ ಎಂದು ಬೆಳ್ಳಿ ಪ್ರಕಾಶ್‌ ಹೇಳಿದರು.

ಸಭೆ ಮುಗಿಯುವ ಸಮಯಕ್ಕೆ ಬಂದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ, ಕೆಳಗಿನಿಂದಲೇ ವೇದಿಕೆಯಲ್ಲಿದ್ದ ಮುಖಂಡರಿಗೆ ನಮಸ್ಕರಿಸಿ, ನೇರವಾಗಿ ಕಾರ್ಯಕರ್ತರು, ಮತದಾರರ ಬಳಿ ಸಂವಹನ ನಡೆಸಿದರು.

ಬಿಜೆಪಿ ಮುಖಂಡ ಸಿ.ಟಿ.ರವಿ ಮಾತನಾಡಿದರು. ಎಚ್‌.ಸಿ.ಕಲ್ಮರಡಪ್ಪ, ಸುನೀತಾ ಜಗದೀಶ್‌, ಸವಿತಾ ರಮೇಶ್‌, ಕೋಡಿಹಳ್ಳಿ ಮಹೇಶ್ವರಪ್ಪ, ಬಿ.ಪಿ.ದೇವಾನಂದ್‌, ಅರೆಕಲ್‌ ಪ್ರಕಾಶ್‌, ಬಿ.ಟಿ.ಗಂಗಾಧರ ನಾಯ್ಕ, ಕೆ.ಎಂ.ವಿನಾಯಕ, ಡಾ.ನರೇಂದ್ರ, ಬಿದರೆ ಜಗದೀಶ್‌, ಶೆಟ್ಟಿಹಳ್ಳಿ ರಾಮಪ್ಪ, ಎಂ.ಪಿ.ಸುದರ್ಶನ್‌, ಮಹೇಶ್‌ ಒಡೆಯರ್‌, ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಇದ್ದರು.

ಸಭೆಯಲ್ಲಿದ್ದ ಕಾರ್ಯಕರ್ತರು ಕೇಸರಿ ಶಾಲು ಬೀಸಿ ಸಹಮತ ವ್ಯಕ್ತಪಡಿಸಿದರು
ಬೀರೂರಿನಲ್ಲಿ ಸೋಮವಾರ ನಡೆದ ಪ್ರಚಾರ ಸಭೆಗೆ ತಡವಾಗಿ ಆಗಮಿಸಿದ ಸಂಸದ ಪ್ರಜ್ವಲ್‌ ರೇವಣ್ಣ ನೇರವಾಗಿ ಕಾರ್ಯಕರ್ತರು ಮತದಾರರ ಬಳಿ ತೆರಳಿ ಬೆಂಬಲ ಯಾಚಿಸಿದರು. 

Cut-off box - ‘ಗಂಡು ನಿಶ್ಚಯವಾಗದೆ ಹೆಣ್ಣು ಕೇಳಲು ಹೊರಟಿದ್ದಾರೆ’ ‘ಸಾಮಾನ್ಯವಾಗಿ ಮೊದಲು ಗಂಡು ಯಾರು ಅಂತ ನಿಶ್ಚಯವಾದರೆ ಹೆಣ್ಣು ಕೇಳಲಿಕ್ಕೆ ಹೋಗಬಹುದು. ಇಂಡಿಯಾ ಒಕ್ಕೂಟದವರಿಗೆ ಗಂಡು ಯಾರು ಅಂತನೇ ಗೊತ್ತಿಲ್ಲ ಹೆಣ್ಣು ಕೇಳಲಿಕ್ಕೆ ಹೊರಟಿದ್ದಾರೆ. ನಾವೇನೋ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಗಂಡು ಅಂತೀವಿ ಕಾಂಗ್ರೆಸ್‌ ಅಥವಾ ನಿಮ್ಮ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಅಂತ ಹೇಳಿ ಸಿದ್ದರಾಮಯ್ಯನವರೇʼ ಎಂದು  ಸಿ.ಟಿ.ರವಿ ಸವಾಲೆಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.