
ಚಿಕ್ಕಮಗಳೂರು: ಪಕ್ಷದ ನಿಲುವು ಹಾಗೂ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಪ್ರಚಾರ ಸಮಿತಿ ಕೆಲಸ. ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿ ತಳಮಟ್ಟದಿಂದ ಪಕ್ಷ ಬಲಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ಧ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೂತ್ ಮಟ್ಟದಿಂದ ಯುವಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು. ಸಾಮಾಜಿಕ ಜಾಲತಾಣ ಸೇರಿ ಗ್ರಾಮಾಂತರ ಮಟ್ಟದಲ್ಲಿ ರಾಜ್ಯ ಸರ್ಕಾರದ ಯೋಜನೆ, ಸಂವಿಧಾನ ಬಗ್ಗೆ ಅರಿವು ಮೂಡಿಸಬೇಕು. ಮುಂಬರುವ ಎಲ್ಲಾ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ತಿಳಿಸಿದರು.
ಬೂತ್ ಮಟ್ಟದಿಂದ ಪಕ್ಷ ಸಂಘಟಿಸಲು ಯುವ ಕಾರ್ಯಕರ್ತರಿಗೆ ಕಾರ್ಯಾಗಾರ, ತರಬೇತಿ ಶಿಬಿರ ಆಯೋಜಿಸಿ ಸಮಗ್ರ ತಿಳುವಳಿಕೆ ಮೂಡಿಸಲಾಗುವುದು. ಹೊಸದಾಗಿ ಆಯ್ಕೆಗೊಂಡ ನೂತನ ಪ್ರಚಾರ ಸಮಿತಿ ಮುಖಂಡರು ಎಲ್ಲಾ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕು ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಎಂ.ಎಸ್.ಅನಂತ ಮಾತನಾಡಿ, ‘ಪ್ರಚಾರ ಸಮಿತಿ ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕ್ರಿಯಾಶೀಲವಾಗಿ ಪ್ರಚಾರ ಸಮಿತಿ ಕೆಲಸ ಮಾಡುತ್ತಿದೆ. ಜವಾಬ್ದಾರಿ ವಹಿಸಿಕೊಂಡು ನೂತನ ಪದಾಧಿಕಾರಿಗಳು ಪಕ್ಷಕ್ಕಾಗಿ ಶ್ರಮಿಸಬೇಕು’ ಎಂದು ತಿಳಿಸಿದರು.
ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ಕೊಡುವ ಪದ್ಧತಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಗ್ಯಾರಂಟಿ ಜತೆಗೆ ಪರಿಣಾಮಕಾರಿ ಹಾಗೂ ಅಮೂಲಾಗ್ರ ಬದಲಾವಣೆ ತಂದು ಜನರ ವಿಶ್ವಾಸ ಗಳಿಸುತ್ತಿದೆ ಎಂದರು.
ಜಿಲ್ಲಾ ನೂತನ ಪದಾಧಿಕಾರಿಗಳು: ಸೈಯದ್ ಹನೀಫ್(ಅಧ್ಯಕ್ಷ), ಆರ್.ಚಂದ್ರು, ಹೇಮಲತಾ (ಉಪಾಧ್ಯಕ್ಷರು), ಎಂ.ಮಂಜೇಗೌಡ, ಎಚ್.ಸಿ.ಗಂಗಾಧರ, ಎನ್.ಎನ್.ಪರಮೇಶ್ವರಪ್ಪ, ಲೋಲಾಕ್ಷಿಬಾಯಿ, ನಯೀಮ್ (ಸಂಯೋಜಕರು), ಅನ್ಸರ್ ಆಲಿ (ಖಜಾಂಚಿ), ಸತೀಶ್, ಅಮರ್ ಡಿಸೋಜ, ನಿಂಗೇಗೌಡ, ಸಚಿನ್ ಸಿಂಗ್, ಉಮರ್ (ಜಂಟಿ ಸಂಯೋಜಕರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.