
ಶೃಂಗೇರಿ: ‘ಷೇರುದಾರರಲ್ಲಿ ಸಹಕಾರ ಕ್ಷೇತ್ರ ನಮ್ಮದು ಎಂದು ಭಾವನೆ ಬರಬೇಕು. ಆ ಕ್ಷೇತ್ರ ಬಲಗೊಂಡರೆ ರೈತರು ಮತ್ತು ಇತರೆ ವ್ಯಾಪಾರಿಗಳು ಗಟ್ಟಿಗೊಳ್ಳುತ್ತಾರೆ. ರಾಜಕೀಯದಿಂದ ಹೊರತಾದ ಸಹಕಾರಿ ವ್ಯವಸ್ಥೆ ಆಗಬೇಕಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಶೃಂಗೇರಿ ತಾಲ್ಲೂಕಿನ ಬೆಟ್ಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಹಕಾರ ಸಂಸ್ಥೆಗಳು ಲಾಭ ಗಳಿಸುವ ಗುರಿ ಹೊಂದಿದೆ ಸೇವಾ ಮನೋಭಾವದ ಸಂಸ್ಥೆಯಾಗಬೇಕು. ಅಧಿಕಾರ ಎಂಬುದು ಶಾಶ್ವತವಲ್ಲ. ಷೇರುದಾರರ ಏಳಿಗೆಗಾಗಿ ಎಲ್ಲರೂ ಪ್ರಾಮಾಣಿಕವಾಗಿ ದುಡಿಯಬೇಕು. ಸಹಕಾರಿ ತತ್ವದ ಬದ್ಧತೆಗಾಗಿ ಎಲ್ಲಾರೂ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಕೂತುಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ನಾಗೇಶ್ ಮಾತನಾಡಿ, ‘ಸಣ್ಣ ಮಟ್ಟದಲ್ಲಿದ್ದ ಸಂಘವನ್ನು ರಮೇಶ್ ಭಟ್ ಅವರು 25 ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಟ್ಟಿ ಬೆಳೆಸಿದ್ದಾರೆ. ಸಹಕಾರಿ ವ್ಯವಸ್ಥೆಯಲ್ಲಿ ಪರಸ್ಪರ ನಂಬಿಕೆ ವಿಶ್ವಾಸ ಅಗತ್ಯವಿದೆ. ರೈತ ಸಮಸ್ಯೆ ಪರಿಹರಿಸಲು ಸಹಕಾರ ಸಂಸ್ಥೆಗಳು ಇದ್ದು, ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಎಲ್ಲಾ ರೈತರು ಸದುಪಯೋಗಪಡಿಸಿಕೊಳ್ಳಿ’ ಎಂದರು.
ಸಂಘದ ನೂತನ ಅಧ್ಯಕ್ಷ ಕೆ.ಎಂ.ರಮೇಶ್ ಭಟ್ ಕೊಡತಲು ಮಾತನಾಡಿ, ‘ಪ್ರಸ್ತುತ ಸಂಘದಲ್ಲಿ 1,330 ಷೇರುದಾರರಿದ್ದು, ವಾರ್ಷಿಕವಾಗಿ ₹12 ಕೋಟಿಯಷ್ಟು ವಹಿವಾಟು ನಡೆಯುತ್ತಿದೆ. ₹5 ಕೋಟಿ ಠೇವಣಿ ಇಡಲಾಗಿದೆ. ಷೇರುದಾರರ ಸಹಕಾರದಿಂದ ಅವಿರೋಧವಾಗಿ 5ನೇ ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ಸಂಘವು ಸಹಕಾರಿಗಳಿಗೆ ಉತ್ತಮ ಸೇವೆ ನೀಡತ್ತಿದೆ’ ಎಂದರು.
ಸಮಾರಂಭದಲ್ಲಿ ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ನೆಮ್ಮಾರ್ ದಿನೇಶ್, ಹಾಲಂದೂರು ಪಿಎಸಿಎಸ್‍ನ ಅಧ್ಯಕ್ಷ ಎಂ.ಎಚ್ ನಟರಾಜ್, ಬೆಟ್ಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೆ.ಎ.ನಾಗೇಶ್, ನಿರ್ದೇಶಕರಾದ ಕೆ.ಜಿ.ಸತೀಶ್, ಶ್ಯಾಮಣ್ಣ ಎಚ್.ಪಿ, ರಾಜಶೇಖರ ಟಿ.ಎಚ್, ಮಮತ ಡಿ.ಹೆಗ್ಡೆ, ಕೃಷ್ಣಪ್ಪ ಎ.ಕೆ, ಶ್ರೀನಿವಾಸಮೂರ್ತಿ, ಕೆ.ಎಸ್.ರವಿ. ನಾಗೇಶ್ ಕೆ.ಸಿ, ಮೀನಾಕ್ಷಿ ಡಿ.ವೈ, ಸಿಂಪತ್ ಟಿ.ಸಿ, ಸಂಘದ ಸಿಇಒ ದೇವೆಂದ್ರ ಜಾಳ್ಮರ ಮತ್ತು ತಾಲ್ಲೂಕಿನ ಎಲ್ಲಾ ಪಿಎಸಿಎಸ್ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.
ಷೇರುದಾರರ ಸಹಕಾರದಿಂದ ಸಂಘ ಮುನ್ನಡೆ ಸಹಕಾರ ಸಂಘ ಸಣ್ಣ ರೈತರಿಗೆ ಹೆಚ್ಚು ಅನುಕೂಲ ಸಹಕಾರ ಕ್ಷೇತ್ರದಿಂದ ದೇಶ ಅಭಿವೃದ್ಧಿ
ಖಾಸಗೀಕರಣ ಜಾಗತೀಕರಣ ಮತ್ತು ಉದಾರೀಕರಣದಿಂದ ಸಹಕಾರ ಸಂಘಗಳಿಗೆ ನಷ್ಟವಾಗಿದೆ. ಸಹಕಾರ ಸಂಘದಿಂದ ಕೃಷಿ ಕ್ಷೇತ್ರ ಉತ್ತಮವಾಗಿ ಬದಲಾಗಿದೆ.ಟಿ.ಡಿ.ರಾಜೇಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.