ADVERTISEMENT

ಚಿಕ್ಕಮಗಳೂರು: ವಿದೇಶವಾಸಿಗೂ ಇಲ್ಲಿ ಸರ್ಕಾರಿ ಭೂಮಿ ಮಂಜೂರು

ಅರ್ಜಿ ಹಾಕಿಲ್ಲ, ಸಾಗುವಳಿ ಚೀಟಿಯೂ ಇಲ್ಲ: ನೇರವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 22:07 IST
Last Updated 26 ಸೆಪ್ಟೆಂಬರ್ 2023, 22:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಕ್ರಮ ಭೂಕಬಳಿಕೆ ವಿರುದ್ಧ ನಡೆಯುತ್ತಿರುವ ತನಿಖೆ ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಆಸ್ಟ್ರೇಲಿಯಾ, ಅಮೆರಿಕ, ಮುಂಬೈ, ಮಂಗಳೂರು, ಬೆಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ನೆಲಸಿರುವ, ಅರ್ಜಿಯನ್ನೇ ಹಾಕದ ಒಂದೇ ಕುಟುಂಬದ ಏಳು ಜನರ ಹೆಸರಿಗೆ ನೇರವಾಗಿ ಸರ್ಕಾರಿ ಭೂಮಿ ಖಾತೆ ಮಾಡಿರುವ ಪ್ರಕರಣ ಬಹಿರಂಗವಾಗಿದೆ.

ಒಂದೇ ಪ್ರಕರಣದಲ್ಲಿ 32 ಎಕರೆಯಷ್ಟು ಅಕ್ರಮ ಮಂಜೂರಾತಿ ಯನ್ನು ಉಪವಿಭಾಗಾಧಿಕಾರಿ ರದ್ದು ಮಾಡಿದ್ದು, ಅಕ್ರಮವಾಗಿ ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ADVERTISEMENT

ನಮೂನೆ 50, 53 ಮತ್ತು 57 ಅಡಿಯಲ್ಲಿ ಅರ್ಜಿಗಳೇ ಸಲ್ಲಿಕೆಯಾಗಿಲ್ಲ, ಅಕ್ರಮ–ಸಕ್ರಮ ಸಮಿತಿ ನಡಾವಳಿಯಲ್ಲಿ ನಮೂದಾಗಿಲ್ಲ, ಸಾಗುವಳಿ ಚೀಟಿ ವಿತರಣೆಯಾಗಿಲ್ಲ, ಬಗರ್ ಹುಕುಂ ಸಮಿತಿ ಮುಂದೆ ಅರ್ಜಿ ಮಂಡನೆ ಆಗಿಲ್ಲ. ಆದರೆ, ನೇರವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಜಮೀನು ಖಾತೆಯಾಗಿತ್ತು.

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಹಾದಿಓಣಿ ಗ್ರಾಮದ ಸರ್ವೆ ನಂಬರ್ 21ರಲ್ಲಿ ಇದ್ದ ಖಾಲಿ ಜಾಗ ಹುಬ್ರಾಟ್‌ ವಾಜ್‌ ನಾಯಕ್, ಅಂತೋನಿ ಜೆ.ಡಿ. ಪಿಂಟೊ, ಹೀರೊ ಎ.ಎಂ.ಎಲ್‌, ಜೋಸ್‌ ಫಿನ್ ಸುನೀತಿ ಕಾಮತ್, ಜೋಸ್ನಾ ಕಾಸರಗೋಡು, ಶೀಲಾ ಅಲ್ಬುಕ್ಯೂಕ್ ಮತ್ತು ಶೆರಿಲ್ಲಾ ಡಿಸೋಜಾ ಎಂಬುವರ ಹೆಸರಿಗೆ ಒಟ್ಟು 32 ಎಕರೆಯಷ್ಟು ಜಾಗ 2021ರಲ್ಲಿ ಮಂಜೂರಾಗಿತ್ತು. 

‘ಭೂಮಿ ಮಂಜೂರು ಮಾಡಲು ಕೆಲವು ನಿಯಮಗಳನ್ನು ಪಾಲಿಸಬೇಕು. ಸಾಗುವಳಿಯಲ್ಲಿರುವ ರೈತ ಅರ್ಜಿ ಸಲ್ಲಿಸಿದ್ದರೆ ಎಷ್ಟು ವರ್ಷಗಳಿಂದ ಹಿಡುವಳಿ ಮಾಡುತ್ತಿದ್ದಾರೆ, ಈ ಹಿಂದೆ ಅವರ ಅಥವಾ ಅವರ ಕುಟುಂಬದ ಹೆಸರಿಗೆ ಭೂಮಿ ಮಂಜೂರಾಗಿದೆಯೇ ಎಂಬೆಲ್ಲಾ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕ ಪರಿಶೀಲಿಸಬೇಕು. ಅರ್ಜಿಯನ್ನು ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿ ಮುಂದೆ ತಹಶೀಲ್ದಾರ್‌ ಮಂಡಿಸಬೇಕು. ಒಪ್ಪಿಗೆ ನೀಡಿದ ಬಳಿಕ ನಿಗದಿತ ಶುಲ್ಕ ಪಡೆದು ಸಾಗುವಳಿ ಚೀಟಿ ವಿತರಿಸಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದೇ ನಿಯಮ ಗಳನ್ನೂ ಅಂದಿನ ಅಧಿಕಾರಿಗಳು ಪಾಲಿಸಿಲ್ಲ. ಬೇರೆ ಯಾವುದೋ ಕಡತದಲ್ಲಿನ ಸಾಗುವಳಿ ಚೀಟಿ, ಕೆಲ ಪ್ರಕರಣ
ದಲ್ಲಿ ಕಾಗದದ ಚೂರುಗಳನ್ನು ಭೂಮಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ ನೇರವಾಗಿ ಖಾತೆ ಮಾಡಿಕೊಟ್ಟಿ
ದ್ದಾರೆ’ ಎಂದು ಈಗಿನ ತಹಶೀಲ್ದಾರ್
ವೈ.ತಿಪ್ಪೇಸ್ವಾಮಿ ಪೊಲೀಸರಿಗೆ ಭಾನುವಾರ ದೂರು ನೀಡಿದ್ದಾರೆ.

ಈಗ  ದಾಖಲಾಗಿರುವ ಪ್ರಕರಣದ ವಿಶೇಷ ಎಂದರೆ ಅಷ್ಟೂ ಜಾಗದಲ್ಲಿ ಜೆರಾಲ್ಡ್‌ ಡಿಸೋಜಾ ಎಂಬುವರು ಕೃಷಿ ಮಾಡುತ್ತಿದ್ದಾರೆ. ಈ ಏಳು ಖಾತೆದಾರರೂ ಅವರ ಸಂಬಂಧಿಕರೇ ಆಗಿದ್ದಾರೆ. ಮೂವರು ಅಮೆರಿಕದಲ್ಲಿದ್ದರೆ, ಒಬ್ಬರು ಆಸ್ಟ್ರೇಲಿಯಾದಲ್ಲಿ
ದ್ದಾರೆ. ಒಬ್ಬರು ಮುಂಬೈ, ಮತ್ತೊಬ್ಬರು ಬೆಂಗಳೂರು ಮತ್ತು ಇನ್ನೊಬ್ಬರು ಮಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನುವುದು ಮೂಲಗಳ ವಿವರಣೆ.

ಇಬ್ಬರು ತಹಶೀಲ್ದಾರ್‌ ವಿರುದ್ಧ ಪ್ರಕರಣ

ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಆರೋಪದಲ್ಲಿ ಕಂದಾಯ ನಿರೀಕ್ಷಕ ಎನ್‌.ಎನ್‌.ಗಿರೀಶ್‌, ಗ್ರಾಮ ಲೆಕ್ಕಾಧಿಕಾರಿ ನೇತ್ರಾವತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳ ನಿಯುಕ್ತಿಗೆ ಕಾದಿರುವ ತಹಶೀಲ್ದಾರ್‌ ಎಚ್.ಎಂ.ರಮೇಶ್ ಮತ್ತು ಹೊಸದುರ್ಗ ತಹಶೀಲ್ದಾರ್‌ ಪಾಲಯ್ಯ(ಈ ಹಿಂದೆ ಮೂಡಿಗೆರೆಯಲ್ಲಿ ಶಿರಸ್ತೆದಾರ್ ಆಗಿದ್ದರು) ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

6 ಸಾವಿರ ಎಕರೆ ಅಕ್ರಮ ಮಂಜೂರು

ಇನ್ನೊಂದೆಡೆ ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂಮಂಜೂರಾತಿ ಬಗ್ಗೆ 15 ತಹಶೀಲ್ದಾರ್‌ಗಳ ವಿಶೇಷ ತಂಡ ನಡೆಸಿದ ತನಿಖೆ ಪೂರ್ಣಗೊಳಿಸಿದ್ದು, ಸರ್ಕಾರಕ್ಕೆ ವರದಿ ಕೂಡ ಸಲ್ಲಿಕೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 6 ಸಾವಿರಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಮಂಜೂರಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.