ADVERTISEMENT

‘ನೆಹರೂ ಹುಕ್ಕಾ ಸೇದುತ್ತಿದ್ದು ತಪ್ಪೋ, ಸಿ.ಟಿ.ರವಿ ಹೇಳಿದ್ದು ತಪ್ಪೋ?’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 11:57 IST
Last Updated 13 ಆಗಸ್ಟ್ 2021, 11:57 IST
ಸಿ.ಟಿ.ರವಿ
ಸಿ.ಟಿ.ರವಿ    

ಚಿಕ್ಕಮಗಳೂರು: ‘ಹುಕ್ಕಾ ಬಾರ್‌ ಬಗ್ಗೆ ನಾನು ಮಾತನಾಡಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ. ನೆಹರೂ ಹುಕ್ಕಾ ಸೇದುತ್ತಿದ್ದು ತಪ್ಪೋ, ಸಿ.ಟಿ.ರವಿ ಹೇಳಿದ್ದು ತಪ್ಪೋ? ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ನೆಹರೂ ಸೇದಿದ್ದು ತಪ್ಪಲ್ಲವೇ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನೆಹರೂ, ಇಂದಿರಾಗಾಂಧಿ ಬಗ್ಗೆ ನಾನು ಮಾತನಾಡಿರುವುದನ್ನು ತಪ್ಪು ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರು ಇಂದಿರಾಗಾಂಧಿ ಬಗ್ಗೆ ಮಾತನಾಡಿರುವ ಹಳೆಯ ಭಾಷಣಗಳ ಪ್ರತಿಗಳನ್ನು ಹಾಕಿಸ್ಲಾ? ಸಿ.ಎಂ.ಇಬ್ರಾಹಿಂ ಅವರು ಇಂದಿರಾಗಾಂಧಿ ಅವರನ್ನು ಏನೆಂದು ಕರೆದಿದ್ದರು ಎಂದು ಹೇಳ್ಲಾ? ನಾನು ಆ ಮಟ್ಟಕ್ಕೆ ಇಳಿದಿಲ್ಲ’ ಎಂದು ಸಮರ್ಥಿಸಿಕೊಂಡರು.

‘ಟ್ವೀಟ್‌ಗಳನ್ನು ಗಮನಿಸಿದ್ದೇನೆ. ಸಂಸ್ಕೃತಿ ಮೀರಿ ನನ್ನ ವಿರುದ್ಧ ಮಾತನಾಡಿದ್ದಾರೆ. ನಾನು ಕುಡುಕನಲ್ಲ, ಆ ಪಟ್ಟ ಕಟ್ಟಿದ್ದಾರೆ. ಆದರೆ, ದಿನಾ ಕುಡಿಯುವವರು ಅವರೇ. ಅವರ ಹಳೆ ಕತೆಗಳನ್ನೆಲ್ಲ ಹೇಳಬೇಕಾ? ನಾನು ಆರ್‌ಎಸ್‌ಎಸ್‌ ಸ್ವಯಂ ಸೇವಕ, ಕೊತ್ವಾಲ ರಾಮಚಂದ್ರನ ಶಿಷ್ಯ ಅಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಪತ್ನಿ ಪಲ್ಲವಿರವಿ ಬಿಜೆಪಿ ಮಹಿಳಾ ಮೋರ್ಚಾದ ನಗರ ಘಟಕದ ಉಪಾಧ್ಯಕ್ಷರಾಗಿ ನೇಮಕವಾಗಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಪತ್ನಿ ಪಲ್ಲವಿ ಹಿಂದಿನಿಂದಲೂ ಬಿಜೆಪಿ ಕಾರ್ಯಕರ್ತೆ. ನನ್ನ ವೈಯುಕ್ತಿಕ ಮತ್ತು ಸಾರ್ವಜನಿಕ ಬದುಕಿನ ಅರ್ಧಶಕ್ತಿ ನನ್ನ ಪತ್ನಿ. ನಾನಂತೂ ಪತ್ನಿಯನ್ನು ಚುನಾವಣೆಗೆ ಕಣಕ್ಕಿಳಿಸಲ್ಲ. ನಾನು ಯಾವಾಗಲೂ ಕುಟುಂಬ ರಾಜಕಾರಣಕ್ಕೆ ವಿರುದ್ಧ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT