ADVERTISEMENT

ಕಳಸ: ಹದಗೆಟ್ಟ ರಸ್ತೆ; ಮುಜೇಕಾನು ಮಕ್ಕಳಿಗೆ ಶಾಲೆ 'ದೂರ'

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 23:30 IST
Last Updated 11 ಜೂನ್ 2023, 23:30 IST
ಕಳಪೆ ರಸ್ತೆಯಿಂದಾಗಿ ಕಳಸ ತಾಲ್ಲೂಕಿನ ಮುಜೇಕಾನಿನಲ್ಲಿ ಈಚೆಗೆ ಆಟೊವೊಂದು ಅಪಘಾತಕ್ಕೀಡಾಗಿತ್ತು
ಕಳಪೆ ರಸ್ತೆಯಿಂದಾಗಿ ಕಳಸ ತಾಲ್ಲೂಕಿನ ಮುಜೇಕಾನಿನಲ್ಲಿ ಈಚೆಗೆ ಆಟೊವೊಂದು ಅಪಘಾತಕ್ಕೀಡಾಗಿತ್ತು   

ರವಿ ಕೆಳಂಗಡಿ

ಕಳಸ: ಈ ಗ್ರಾಮದ ಮಕ್ಕಳಿಗೆ ವಿದ್ಯೆ ಕಲಿಯುವ ಹುಮ್ಮಸ್ಸಿದೆ. ಇದಕ್ಕಾಗಿ ಪ್ರತಿ ದಿನ 20 ಕಿಲೊಮೀಟರ್ ಪ್ರಯಾಣ ಮಾಡಬೇಕಾಗಿದೆ. ಆದರೆ ಬಸ್ ಸೌಕರ್ಯ ಇಲ್ಲದ ಕಾರಣ ಮತ್ತು ಇಲ್ಲಿಗೆ ಬರಲು ಆಟೊ ಚಾಲಕರು ಹಿಂಜರಿಯುತ್ತಿರುವುದರಿಂದ ಶಾಲೆಗೆ ಹೋಗುವುದು ಕಷ್ಟವಾಗುತ್ತಿದೆ. ರಸ್ತೆ ದುರವಸ್ಥೆಯೇ ಈ ಸಂಕಟಕ್ಕೆ ಕಾರಣ.

ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಜೇಕಾನು, ಕೆರ್ನಾಳಿ, ಹೊರಟ್ಟಿಮನೆ, ಗುಬ್ಬಿಗುದಿಗೆಯ 50 ಕುಟುಂಬಗಳು ಬಡತನದಲ್ಲೂ ನೆಮ್ಮದಿಯ ಜೀವನ ನಡೆಸುವ ಕಲೆ ಸಿದ್ಧಿಸಿಕೊಂಡಿದ್ದಾರೆ. ಆದರೆ ಊರಿನ ರಸ್ತೆಯ ಸ್ಥಿತಿ ಜನರ ನೆಮ್ಮದಿ ಕೆಡಿಸಿದೆ.

ADVERTISEMENT

ಮುಜೆಕಾನಿನಿಂದ 5 ಕಿಲೊಮೀಟರ್ ದೂರದ ಹಳುವಳ್ಳಿ ಮೂಲಕ ಕಳಸದ ಶಾಲೆಗೆ ತೆರಳುವ ಬುಡಕಟ್ಟು ಜನಾಂಗದ ಮಕ್ಕಳಿಗೆ ಆಟೊ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿ ಪ್ರಯಾಣಕ್ಕಾಗಿ ತಿಂಗಳಿಗೆ ₹ 3 ಸಾವಿರ ವೆಚ್ಚ ಮಾಡಬೇಕಾಗಿದೆ. ಇದರಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದ ಪಾಲಕರೂ ಇದ್ದಾರೆ.

'ನಮ್ಮ ಊರಿನ ರಸ್ತೆ ಸರಿ ಇಲ್ಲ. ಹೀಗಾಗಿ ಇಲ್ಲಿಗೆ ಆಟೊದವರು ಬರುವುದಿಲ್ಲ. ಒಬ್ಬರು ಮಾತ್ರ ಶಾಲೆಗೆ ಕರೆದುಕೊಂಡು ಹೋಗಲು ಒಪ್ಪಿದ್ದಾರೆ. ಅವರಿಗೆ ಪ್ರತಿ ತಿಂಗಳು ಕೊಡಲು ಅಪ್ಪನ ಕೈಯಲ್ಲಿ ದುಡ್ಡು ಇಲ್ಲ' ಎಂದು ನಾಲ್ಕನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಯೊಬ್ಬ ಹೇಳಿದ.

'ನಮ್ಮೂರಿನ 5 ಕಿಮೀ ರಸ್ತೆಯ ಪೈಕಿ 800 ಮೀಟರ್‌ಗೆ ಬೇರೆ ಬೇರೆ ಯೋಜನೆಯಲ್ಲಿ  ಕಾಂಕ್ರೀಟ್ ಹಾಕಲಾಗಿದೆ. ಉಳಿದ ರಸ್ತೆ ದುಃಸ್ಥಿತಿಯಲ್ಲಿದೆ. ರಸ್ತಗೆ ಸರಿಪಡಿಸುವಂತೆ ಒತ್ತಾಯಿಸಿ ಮತದಾನಕ್ಕೆ ಬಹಿಷ್ಕಾರವನ್ನೂ ಹಾಕಲಾಗಿತ್ತು. ಈಗಿನ ಶಾಸಕಿ ರಸ್ತೆ ಮಾಡಿಕೊಡುವ ವಿಶ್ವಾಸ ಇದೆ. ಆದರೆ ಮಳೆಗಾಲ ಮುಗಿಯುವ ವರೆಗೆ ಕಾಯುವುದಲ್ಲದೆ ಬೇರೆ ದಾರಿ ಇಲ್ಲ' ಎಂದು ಮುಜೇಕಾನು ಗ್ರಾಮದ ಅನಿಲ್ ಹೇಳಿದರು. ಮಕ್ಕಳ ಶಾಲಾ ವಾಹನದ ವೆಚ್ಚ ಭರಿಸಲು ಕಳಸದ ಹೃದಯವಂತರು ವಾಟ್ಸಾಪ್ ಗುಂಪು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.