ADVERTISEMENT

8ರಂದು ಶೃಂಗೇರಿಗೆ ರಾಷ್ಟ್ರಪತಿ- ಗಾಂಧಿ ಮೈದಾನದಲ್ಲಿ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 3:12 IST
Last Updated 5 ಅಕ್ಟೋಬರ್ 2021, 3:12 IST
ಶೃಂಗೇರಿ ಗಾಂಧಿ ಮೈದಾನದಲ್ಲಿ ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ.
ಶೃಂಗೇರಿ ಗಾಂಧಿ ಮೈದಾನದಲ್ಲಿ ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ.   

ಶೃಂಗೇರಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಶೃಂಗೇರಿ ಶಾರದಾ ಪೀಠಕ್ಕೆ ಅ.8‌ರಂದು ಆಗಮಿಸುವ ಹಿನ್ನೆಲೆಯಲ್ಲಿ ಹೆಲಿಕ್ಯಾಪ್ಟರ್ ನಿಲುಗಡೆ ಸ್ಥಳ ಗಾಂಧಿ ಮೈದಾನದಲ್ಲಿ ಭರದ ಸಿದ್ಧತೆ ನಡೆಸಲಾಗುತ್ತಿದೆ.

3 ಹೆಲಿಕ್ಯಾಪ್ಟರ್ ಇಳಿಯುವುದಕ್ಕಾಗಿ ಮೂರು ಹೆಲಿಪ್ಯಾಡ್ ನಿರ್ಮಾಣ ಅಂತಿಮ ಹಂತದಲ್ಲಿದೆ. ಮಂಗಳವಾರದಿಂದ ಪ್ರವಾಸಿ ವಾಹನವನ್ನು ಗಾಂಧಿ ಮೈದಾನದ ಒಂದು ಪಾರ್ಶ್ವದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಗಾಂಧಿ ಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳು, ಹೋಟೆಲ್, ರಸ್ತೆ ಬದಿ ವ್ಯಾಪಾರದ 25ಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ.

ಗಾಂಧಿ ಮೈದಾನದಲ್ಲಿ ಈ ವರ್ಷ ಹಾಕಲಾಗಿದ್ದ 20 ವಿದ್ಯುತ್ ಕಂಬಗಳನ್ನು ತೆಗೆಯಲಾಗಿದೆ. ವಿದ್ಯುತ್ ದೀಪ ಅಳವಡಿಸಲು ಹಾಗೂ ಸಿಸಿಟಿವಿ ಕ್ಯಾಮೆರ ಅಳವಡಿಸಲು ಈ ವರ್ಷ ಕಂಬಗಳನ್ನು ಹಾಕಲಾಗಿತ್ತು. ಅಂಗಡಿ, ಹೋಟೆಲ್‍ಗಳು ತಾತ್ಕಾಲಿಕ ಶೀಟ್ ಅಳವಡಿಸಿ ನಿರ್ಮಿಸಲಾಗಿದ್ದು, ಇದೀಗ ಹೆಲಿಕ್ಯಾಪ್ಟರ್ ನಿಲುಗಡೆ ಸಂದರ್ಭದಲ್ಲಿ ಶೀಟುಗಳು ಹಾರಿಹೋಗುವ ಸಾಧ್ಯತೆ ಹಾಗೂ ಭದ್ರತೆ ದೃಷ್ಟಿಯಿಂದ ಎಲ್ಲ ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ. ಅಂಗಡಿಗಳ ವರ್ತಕರು ಸ್ವಯಂ ಪ್ರೇರಿತರಾಗಿ ತೆರವು ಮಾಡುತ್ತಿದ್ದಾರೆ.

ADVERTISEMENT

ವರ್ತಕ ಚಂದ್ರು ಪ್ರತಿಕ್ರಿಯೆ ನೀಡಿ, ‘ರಾಷ್ಟ್ರಪತಿ ಶೃಂಗೇರಿಗೆ ಆಗಮಿಸುತ್ತಿರುವುದು ಸಂತಸದ ವಿಚಾರ. ತಾಲ್ಲೂಕು ಆಡಳಿತದ ಸೂಚನೆಯಂತೆ ನಾವು ನಮ್ಮ ಅಂಗಡಿಯನ್ನು ಸ್ವಯಂ ಪ್ರೇರಿತ ತೆರವು ಮಾಡುತ್ತಿದ್ದೇವೆ. ಈಗಾಗಲೇ ಕಾಯಂ ಹೆಲಿಪ್ಯಾಡ್ ಇರುವ ಕೊರಡಕಲ್ಲು ಹೆಲಿಪ್ಯಾಡ್ ಅಭಿವೃದ್ಧಿಗೊಳಿಸಿದರೆ ಅಲ್ಲಿ ಮೂರು ಹೆಲಿಕ್ಯಾಪ್ಟರ್ ಇಳಿಸುವ ಅವಕಾಶವಿದೆ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದರು.

ವಾಹನ ನಿಲುಗಡೆಗೆ ಬದಲಿ ವ್ಯವಸ್ಥೆ: ವಾಹನ ನಿಲುಗಡೆಗೆ ಈಗಾಗಲೇ ಬಸ್ ನಿಲ್ದಾಣದ ಸಮೀಪ ವಸತಿ ಬಡಾವಣೆ ಹಾಗೂ ಜೆಸಿಬಿಎಂ ಕಾಲೇಜಿನ ಮೈದಾನವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಜೆಸಿಬಿಎಂ ಕಾಲೇಜಿನ ಮೈದಾನದಲ್ಲಿ ವಾಹನ ನಿಲುಗಡೆಯಾದರೂ ಶಾರದಾ ಮಠಕ್ಕೆ 2 ಕಿ.ಮೀ. ದೂರವಿದೆ. ಇದರಿಂದ ಪ್ರವಾಸಿಗರಿಗೆ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.