ADVERTISEMENT

ಧರ್ಮದ ನಡೆಯಿಂದ ಸರ್ವ ಶುದ್ಧಿ: ರಂಭಾಪುರಿ ಶ್ರೀ

ಸುರಗಿ ಸಮಾರಾಧನೆಯೊಂದಿಗೆ ರೇಣುಕಾಚಾರ್ಯ ಜಯಂತಿ ಸಮಾರೋಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 23:30 IST
Last Updated 14 ಮಾರ್ಚ್ 2025, 23:30 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಉತ್ಸವದ ಅಂಗವಾಗಿ ಭದ್ರಾ ನದಿತೀರದಲ್ಲಿ ನಡೆದ ಸುರಗಿ ಸಮಾರಾಧನೆ ಸಂದರ್ಭದಲ್ಲಿ ಭದ್ರಾ ನದಿಯಲ್ಲಿರುವ ಶಿವಲಿಂಗಕ್ಕೆ ರಂಭಾಪುರಿ ಸ್ವಾಮೀಜಿ ಪೂಜೆ ಸಲ್ಲಿಸಿದರು
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಉತ್ಸವದ ಅಂಗವಾಗಿ ಭದ್ರಾ ನದಿತೀರದಲ್ಲಿ ನಡೆದ ಸುರಗಿ ಸಮಾರಾಧನೆ ಸಂದರ್ಭದಲ್ಲಿ ಭದ್ರಾ ನದಿಯಲ್ಲಿರುವ ಶಿವಲಿಂಗಕ್ಕೆ ರಂಭಾಪುರಿ ಸ್ವಾಮೀಜಿ ಪೂಜೆ ಸಲ್ಲಿಸಿದರು   

ರಂಭಾಪುರಿ ಪೀಠ (ಬಾಳೆಹೊನ್ನೂರು): ಅಧರ್ಮ ತಾತ್ಕಾಲಿಕವಾಗಿ ಮೇಲೇರಿದರೂ ಅಂತಿಮವಾಗಿ ಬುಡ ಸಹಿತ ಸರ್ವನಾಶವಾಗುತ್ತದೆ. ದೇಹ ಶುದ್ಧಿ, ನುಡಿ ಶುದ್ಧಿ ಮತ್ತು ಮನಃಶುದ್ಧಿ ಇವುಗಳನ್ನು ಸಾಧಿಸಲು ನೆರವಾಗುವುದೇ ನಿಜವಾದ ಧರ್ಮ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಕೊನೆಯ ದಿನವಾದ ಶುಕ್ರವಾರ ವಸಂತೋತ್ಸವ ಹಾಗೂ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದಿರಬಹುದು. ಆದರೆ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ಇವೆರಡಕ್ಕೂ ಇದೆ. ಆಡಿದ ಮಾತು, ಬಿಟ್ಟ ಬಾಣ, ಕಳೆದುಕೊಂಡ ಸಮಯ, ನಂಬಿಕೆ ಎಂದಿಗೂ ಮರಳಿ ಬರುವುದಿಲ್ಲ. ಕೈತುಂಬ ಕೆಲಸ, ಕಣ್ತುಂಬ ನಿದ್ರೆ, ಮನಸ್ಸಿನ ತುಂಬ ನೆಮ್ಮದಿ, ಹೃದಯದ ತುಂಬ ಪ್ರೀತಿ ಮತ್ತು ಆರೋಗ್ಯ ಭಾಗ್ಯ ಇರುವಂತಹ ಜನರು ಜಗತ್ತಿನಲ್ಲಿ ನಿಜವಾದ ಶ್ರೀಮಂತರು. ಒಳ್ಳೆಯ ಮನಸ್ಸು ಇದ್ದರೆ ಒಳ್ಳೆ ದಿನ ಖಂಡಿತ ಬಂದೇ ಬರುತ್ತದೆ. ಕಾಯುವ ತಾಳ್ಮೆ ಬೇಕು ಎಂದರು.

ADVERTISEMENT

ಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆಯುವ ಗುರಿ ಮನುಷ್ಯನದಾಗಬೇಕು. ಮೌಲ್ಯಾಧಾರಿತ ಜೀವನ ಬದುಕಿಗೆ ಬೆಲೆ ತರುತ್ತದೆ. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮನುಷ್ಯನಿಗೆ ಮುಖ್ಯವಾಗಿವೆ ಎಂದರು.

ಭದ್ರಾ ನದಿತೀರದಲ್ಲಿ ಶಿವಲಿಂಗ ಪೂಜೆ, ಇಷ್ಟಲಿಂಗ ಪೂಜೆ, ಹೋಮ, ಹವನಗಳು ನಡೆದವು. ಸಾವಿರಾರು ಜನ ಅನ್ನ ಪ್ರಸಾದ ಸೇವಿಸಿದರು.

ಎಡೆಯೂರು ರೇಣುಕ ಶಿವಾಚಾರ್ಯ, ಮುಕ್ತಿಮಂದಿರ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ, ಸುಳ್ಳ ಶಿವಸಿದ್ಧರಾಮೇಶ್ವರ ಶಿವಾಚಾರ್ಯ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ, ಮಳಲಿಮಠದ ನಾಗಭೂಷಣ ಶಿವಾಚಾರ್ಯ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ, ಎಮ್ಮಿಗನೂರು ಮಹಂತ ಶಿವಾಚಾರ್ಯ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯ, ರಾಯಚೂರು ಶಾಂತಮಲ್ಲ ಶಿವಾಚಾರ್ಯ, ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯ, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯ, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ, ಹರಿಹರದ ಕೊಂಡಜ್ಜಿ ಪಂಚಾಕ್ಷರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.