
ಶೃಂಗೇರಿ: ‘ಪ್ರಶಿಕ್ಷಣಾರ್ಥಿಗಳು ತಾವು ಬದುಕುತ್ತಿರುವ ಕಾಲಘಟ್ಟವನ್ನು ಅರಿತು ಜೀವನದಲ್ಲಿ ಮುನ್ನಡೆಯಬೇಕು. ಹಿಂದೆ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಭೆ ಪ್ರದರ್ಶಿಸಲು ಹೆಚ್ಚಿನ ಅವಕಾಶಗಳಿರಲಿಲ್ಲ; ಆದರೆ ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸೃಜನಶೀಲತೆಗೆ ಮುಕ್ತ ಅವಕಾಶಗಳಿವೆ. ಅವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಜ್ಞಾನವು ವಿವೇಕಯುಕ್ತವಾದದ್ದು; ಅದು ವಿಜ್ಞಾನದೊಂದಿಗೆ ಬೆರೆತಾಗ ಸಾಧನೆಗೆ ಪೂರಕವಾಗುತ್ತದೆ. ವಿದ್ಯಾರ್ಥಿಗಳಿಲ್ಲದೆ ಶಿಕ್ಷಕರಿಲ್ಲ; ಆದ್ದರಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳೇ ದೇವರು’ ಎಂದು ಆದಿಚುಂಚನಗಿರಿ ಮಠದ ಗುರುಗಳಾದ ಗುಣನಾಥ ಸ್ವಾಮೀಜಿ ಹೇಳಿದರು.
ಶೃಂಗೇರಿ ಬಿಜಿಎಸ್ ಸಭಾಭವನದಲ್ಲಿ ಬಿಜಿಎಸ್ ಬಿ.ಎಡ್. ಕಾಲೇಜಿನವರು ಆಯೋಜಿಸಿದ್ದ ನೂತನ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸುವುದು ಸುಲಭದ ಕೆಲಸವಲ್ಲ; ಅದು ಪವಿತ್ರ ಕಾರ್ಯ. ಕಲಿಯಲು ಆಸಕ್ತಿ ಇದ್ದರೆ ತರಬೇತಿಯೂ ಸಹ ಸುಲಭವಾಗುತ್ತದೆ. ಪುಸ್ತಕದಿಂದ ಪಡೆಯುವ ವಿದ್ಯೆಗಿಂತ ಜೀವನಾನುಭವದಿಂದ ದೊರೆಯುವ ವಿದ್ಯೆ ಮಹತ್ವದ್ದು. ಮಕ್ಕಳೊಳಗೆ ಅಡಗಿರುವ ಕ್ರಿಯಾಶೀಲತೆಯನ್ನು ಶಿಕ್ಷಕರು ಹೊರತೆಗೆಯಬೇಕು. ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ-ತಾಯಿ ಹಾಗೂ ಗುರುಗಳ ಪಾತ್ರ ಅತ್ಯಂತ ಮುಖ್ಯ. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಒತ್ತಡದ ಸಂದರ್ಭದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಎಚ್.ಎನ್. ವಿಶ್ವನಾಥ್ ಮಾತನಾಡಿ, ‘ಶಿಕ್ಷಕ ವೃತ್ತಿಯಲ್ಲಿ ಆತ್ಮವಿಶ್ವಾಸ ಅಗತ್ಯ. ಆತ್ಮತೃಪ್ತಿಯೊಂದಿಗೆ ಎಲ್ಲರನ್ನು ಜೊತೆಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವ ವೃತ್ತಿಯೇ ಶಿಕ್ಷಕ ವೃತ್ತಿ. ದೈವಾಂಶ ಹೊಂದಿದ ವ್ಯಕ್ತಿಗಳಿಂದಲೇ ಸಮಾಜದ ಸತ್ಕಾರ್ಯಗಳು ಸಾಧ್ಯ. ಪ್ರಸ್ತುತ ಶಿಕ್ಷಕರ ಶಿಕ್ಷಣ ಮತ್ತು ಗುಣಮಟ್ಟ ಪ್ರಶ್ನಾರ್ಹವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಕೈಗಾರಿಕೋದ್ಯಮ ಪ್ರವೇಶಿಸುತ್ತಿರುವ ಹಿನ್ನೆಲೆ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣದ ಅಗತ್ಯತೆ ಹೆಚ್ಚಾಗಿದೆ. ಯುವಜನಾಂಗದಲ್ಲಿ ಅಪಾರ ಶಕ್ತಿ ಮತ್ತು ಬುದ್ಧಿಯಿದ್ದು, ಅದನ್ನು ಸಮರ್ಥವಾಗಿ ಬಳಸಬೇಕು. ಶಿಕ್ಷಕರ ಜೀವನದಲ್ಲಿ ಸವಾಲು ಮತ್ತು ಸ್ಪರ್ಧೆ ಇರಬೇಕು. ಪ್ರತಿಯೊಂದು ಭಾಷೆಯೂ ಶಿಕ್ಷಕರ ಆಸ್ತಿ’ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಕೆ.ಸಿ. ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲೂ ಗುರುಗಳ ಮಾರ್ಗದರ್ಶನ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಬಾಲ್ಯದಿಂದಲೇ ಉತ್ತಮ ಗುಣಗಳು, ಧೈರ್ಯ, ಏಕಾಗ್ರತೆ, ಶ್ರದ್ಧೆ, ಪ್ರಯತ್ನಶೀಲತೆ ಹಾಗೂ ಹೊಣೆಗಾರಿಕೆ ಬೆಳೆಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಜಿಸಿಟಿಇಯ ಪ್ರವಚಕ ಪ್ರಸನ್ನಕುಮಾರ್ ದರ್ಶಿನಿ, ದರ್ಶಿನಿ ಸಂಯುಕ್ತ ಪ್ರೌಢಶಾಲೆಯ ಮುಖ್ಯಶಿಕ್ಷಕ ಕಿರಣ್ ಕುಮಾರ್, ಪ್ರಾಧ್ಯಾಪಕರಾದ ರಮೇಶ್, ಅಮೃತ, ಶಂಕರ್ ನಾಯ್ಕ್, ಧನ್ಯಕುಮಾರ್ ಇದ್ದರು.
ಅಜ್ಞಾನವೆಂಬ ಕತ್ತಲೆಯಲ್ಲಿ ಕಲುಷಿತಗೊಂಡಿರುವ ಮಾನವನನ್ನು ನಿರ್ಮಲಗೊಳಿಸಿ ಜ್ಞಾನವೆಂಬ ಬೆಳಕನ್ನು ನೀಡಿ ಅವನನ್ನು ಸುಜ್ಞಾನಿಯನ್ನಾಗಿ ಮಾಡುವವನು ಸಮರ್ಥ ಶಿಕ್ಷಕಗುಣನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.