ADVERTISEMENT

ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು: ಸುರೇಶ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 12:50 IST
Last Updated 17 ಏಪ್ರಿಲ್ 2021, 12:50 IST
ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ಸಿದ್ಧತೆ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಮಾರ್ಗದರ್ಶಿ ಪುಸ್ತಕಗಳನ್ನು ಸಚಿವ ಸುರೇಶ್‌ಕುಮಾರ್‌ ಬಿಡುಗಡೆ ಮಾಡಿದರು.
ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ಸಿದ್ಧತೆ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಮಾರ್ಗದರ್ಶಿ ಪುಸ್ತಕಗಳನ್ನು ಸಚಿವ ಸುರೇಶ್‌ಕುಮಾರ್‌ ಬಿಡುಗಡೆ ಮಾಡಿದರು.   

ಚಿಕ್ಕಮಗಳೂರು: ‘ಜಿಲ್ಲಾಧಿಕಾರಿಗಳು ಜಿಲ್ಲೆಯ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪತ್ರ ಬರೆದು ಆತ್ಮಸ್ಥೈರ್ಯ ತುಂಬುವಂಥ ಶ್ರೇಷ್ಠ ಕಾರ್ಯವನ್ನು ಮಾಡಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ಸಿದ್ಧತೆ ಕುರಿತು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲಾಧಿಕಾರಿಯವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ತುಮಕೂರು ಜಿಲ್ಲೆಯ ಕೊರಟಗೆರೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಾಲ್ಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ ಪತ್ರ ಬರೆದಿದ್ದಾರೆ. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆಹಾರ ಸೇವನೆ, ಅಭ್ಯಾಸ ಕ್ರಮ, ನಿದ್ರೆ, ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಪತ್ರದಲ್ಲಿ ಸಲಹೆಗಳನ್ನು ನೀಡಿದ್ದಾರೆ. ಎಲ್ಲ ತಾಲ್ಲೂಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಇದನ್ನು ಅನುಸರಿಸುವುದು ಒಳಿತು’ ಎಂದರು.

‘ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತವಾಗಬಾರದು ಎಂಬುದು ನಮ್ಮ ಉದ್ದೇಶವಾಗಬೇಕು. ಈ ನಿಟ್ಟಿನಲ್ಲಿ ವಿಶೇಷ ಹೆಜ್ಜೆಗಳನ್ನು ಇಡಬೇಕಿದೆ’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ಮಾಡುವುದು ಸರ್ಕಾರಕ್ಕೆ ಪ್ರತಿಷ್ಠೆ ವಿಷಯವಲ್ಲ. ಅದು ಕರ್ತವ್ಯದ ಭಾಗ. ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದೆ ಪರಿಸ್ಥಿತಿ ಅವಲೋಕಿಸಿ ಹೆಜ್ಜೆ ಇಡುತ್ತೇವೆ’ ಎಂದರು.

‘ಮಾರ್ಗಸೂಚಿ; ರಾಜಕಾರಣಿಗಳು ಮೇಲ್ಪಂಕ್ತಿಯಲ್ಲಿರಬೇಕು’
‘ಕೋವಿಡ್‌ ಮಾರ್ಗಸೂಚಿಗಳನ್ನು ರಾಜಕಾರಣಿಗಳು ಸಹಿತ ಎಲ್ಲರೂ ಪಾಲಿಸಬೇಕು. ಪಾಲನೆಯಲ್ಲಿ ರಾಜಕಾರಣಿಗಳು ಮೇಲ್ಪಂಕ್ತಿಯಲ್ಲಿರಬೇಕು’ ಎಂದು ಸುರೇಶ್‌ಕುಮಾರ್‌ ಪ್ರತಿಕ್ರಿಯಿಸಿದರು.

‘ರಾಜಕೀಯ, ಧಾರ್ಮಿಕ ಸಹಿತ ಯಾವ ಕಾರ್ಯಕ್ರಮಕ್ಕೂ ಮಾರ್ಗಸೂಚಿಯಿಂದ ವಿನಾಯಿತಿ ಇಲ್ಲ. ಸಾರ್ವಜನಿಕರು ಮಾರ್ಗಸೂಚಿಗಳನ್ನು (ಸ್ಯಾನಿಟೈಸ್‌, ಮಾಸ್ಕ್‌, ಅಂತರ ಪಾಲನೆ)ಅನುರಿಸಿದರೆ ಲಾಕ್‌ಡೌನ್‌ ಅಗತ್ಯ ಇಲ್ಲ. ಆದರೆ, ಜನರು ತಮಗೇನು ಆಗಲ್ಲ ಎಂಬಂತೆ ಓಡಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಬೇಕೇ, ಬೇಡವೇ ಎಂದು ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರಜಾವಾಣಿ’ ಸಂಪಾದಕೀಯ ಪ್ರಸ್ತಾಪ
‘ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೋರಿದ ಶಿಸ್ತು ರಾಜ್ಯದ ಎಲ್ಲ ಹಿರಿಯರಿಗೆ ಮಾದರಿ’ ಎಂದು ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ‘ಪ್ರಜಾವಾಣಿ’ ಸಂಪಾದಕೀಯದಲ್ಲಿ ಬರೆದಿದ್ದರು ಎಂದು ಸಭೆಯಲ್ಲಿ ಸಚಿವ ಸುರೇಶ್‌ಕುಮಾರ್‌ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.