
ತರೀಕೆರೆ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತರೀಕೆರೆ ಉಪ ವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ದೌರ್ಜನ್ಯ ನಿಯಂತ್ರಣ ಸಮಿತಿ ಮತ್ತು ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸಭೆ ನಡೆಯಿತು.
ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಕೆಲವು ಭಾಗಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಕೆಲವು ಭೂಮಿಯ ಸಮಸ್ಯೆಗಳನ್ನು ಪರಿಹರಿಸಲು ಈಗಾಗಲೇ ಎಸ್‌ಐಟಿ ರಚನೆಯಾಗಿದ್ದು, ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಮುಂದಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಎನ್.ವಿ. ನಟೇಶ್ ಹೇಳಿದರು.
ಈ ಸಮಸ್ಯೆಗಳ ಬಗ್ಗೆ ಈಗಾಗಲೇ ಡಿಎಫ್‌ಒ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಅನಿವಾರ್ಯವಿದ್ದರೆ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಎನ್. ವೆಂಕಟೇಶ್ ಮಾತನಾಡಿ, ತರೀಕೆರೆ ಪಟ್ಟಣದ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಆಯ್ಕೆ ಮಾಡಿರುವ ಪ್ರದೇಶಗಳ ನಿವಾಸಿಗರಿಂದ ವಂತಿಗೆ ಬಾಬ್ತಿನ ಹಣ ಪಡೆದಿದ್ದರೂ ಕೂಡ, ಮನೆ ನಿರ್ಮಿಸಲು ಸ್ಲಂಬೋರ್ಡ್ ಅಧಿಕಾರಿಗಳು ಮನೆಗಳನ್ನು ಹಸ್ತಾಂತರಿಸಲು ಮುಂದಾಗುತ್ತಿಲ್ಲ. ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಗೂಡ್‌ಶೆಡ್ ರಸ್ತೆ ಮತ್ತು ಗಾಳಿಹಳ್ಳಿ ಕ್ರಾಸ್‌ನಲ್ಲಿ ಪೌರಕಾರ್ಮಿಕರ ವಿಶ್ರಾಂತಿಗೃಹ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಸದಸ್ಯ ಸಚಿನ್ ಮಾತನಾಡಿ, ಕಡೂರಿನಲ್ಲಿ ಪೌರ ಕಾರ್ಮಿಕರೇ ಹೆಚ್ಚು ವಾಸಿಸುತ್ತಿರುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಬಗೆಹರಿಸಬಹುದಾದ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸದಿರುವ ಕಾರಣ ಹಲವಾರು ವರ್ಷಗಳಿಂದ ಸಭಾ ನಡಾವಳಿಯಲ್ಲಿ ಸಮಸ್ಯೆಗಳು ಪುನರಾವರ್ತನೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ನಿರ್ಲಕ್ಷತನ ಸಹಿಸುವುದಿಲ್ಲ ಎಂದು ದಲಿತ ಮುಖಂಡರು ಎಚ್ಚರಿಸಿದರು.
ಜ.17ರಂದು ಸ್ಲಂಬೋಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು ಎಂದು ಎಸಿ ಎನ್.ವಿ. ನಟೇಶ್ ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್‌ಗಳಾದ ತರೀಕೆರೆಯ ವಿಶ್ವಜಿತಮೆಹತಾ, ಕಡೂರಿನ ಸಿ.ಎಸ್. ಪೂರ್ಣಮಾ, ಅಜ್ಜಂಪುರದ ವಿನಾಯಕಸಾಗರ್, ಎನ್.ಆರ್.ಪುರದ ನೂರುಲ್‌ಉದಾ, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ಡಿವೈಎಸ್‌ಪಿ ಪರಶುರಾಮಪ್ಪ, ಎಸಿಎಫ್ ಉಮ್ಮರ್ ಬಾದ್‌ಷಾ, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ನಾಗರಾಜ್, ರಾಮು, ದಲಿತ ಮುಖಂಡರಾದ ಎಚ್.ವಿ. ಬಾಲರಾಜ್, ಎಸ್.ಕೆ. ಸ್ವಾಮಿ, ವೈ.ಎಸ್. ಮಂಜಪ್ಪ, ಎಂ. ಓಂಕಾರಪ್ಪ, ಸುನಿಲ್, ರಾಮಚಂದ್ರ, ರಾಜು, ವಸಂತಕುಮಾರ್, ಕುಮಾರಪ್ಪ, ಟಿ.ಎಸ್. ಬಸವರಾಜ್, ಶಿವರಾಜ್, ಶಂಕರನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.