ಶೃಂಗೇರಿ: ‘ಮಕ್ಕಳ ಜೀವನ ಶೈಲಿಯನ್ನು ಬದಲಾಯಿಸುವ ಚಾತುರ್ಯ ಶಿಕ್ಷಕರಿಗಿದೆ. ಆದ್ದರಿಂದ ಅವರಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನವಿದೆ. ಗುರು ಮತ್ತು ಗುರಿ ಇದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಶೃಂಗೇರಿಯ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಗುರು ಎಂದರೆ ಅಜ್ಞಾನ ಹೋಗಲಾಡಿಸಿ, ಜ್ಞಾನವನ್ನು ನೀಡುವವರು. ತಪ್ಪು ಮಾಡಿದಾಗ ವಿದ್ಯಾರ್ಥಿಗೆ ಸರಿ ದಾರಿ ತೋರುವ ಶಿಕ್ಷಕ ದೇಶದ ಏಳಿಗೆಗೆ ಕಾರಣನಾಗುತ್ತಾನೆ. ಪ್ರತಿಯೊಬ್ಬರು ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ತತ್ವಾದರ್ಶಗಳನ್ನು ಅನುಸರಿಸಿದರೆ ದೇಶ ಯಶಸ್ಸು ಕಾಣಲು ಸಾಧ್ಯ. ಮಕ್ಕಳ ಆತ್ಮವಿಶ್ವಾಸ ಹಾಗೂ ನೈತಿಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಅನನ್ಯ’ ಎಂದರು.
ಪ್ರಸ್ತುತ ವಿದ್ಯಾರ್ಥಿಗಳು ಪ್ರಬುದ್ಧರಾಗಿರದ ಕಾರಣ ಶಿಕ್ಷಕರು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಜಾತಿ, ಮತ, ಧರ್ಮ, ಪಂಥ, ಕೋಮು ಗಲಭೆ, ರಾಜಕೀಯದಂತಹ ವಿಚಾರಗಳನ್ನು ತಲೆಗೆ ತುಂಬಬಾರದು. ಪ್ರತಿ ಬೆಂಚಿನ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿಭಾವಂತನಾಗಬೇಕು ಎಂದು ವಿದ್ಯೆಯನ್ನು ಹೇಳಿಕೊಟ್ಟಾಗ ಮಾತ್ರ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಎಂದು ಶಾಸಕರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವರಲಕ್ಷ್ಮೀ ಮಾತನಾಡಿ, ‘ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಕ್ಷಮಿಸಿ, ಮೃದುವಾಗಿ ಮಾತನಾಡಿದರೆ ಆ ವಿದ್ಯಾರ್ಥಿ ಮುಂದೆ ಎಂದೂ ತಪ್ಪು ಮಾಡುವುದಿಲ್ಲ. ಶಿಕ್ಷಕ ಎಂಬ ಪವಿತ್ರವಾದ ವೃತ್ತಿಯಲ್ಲಿ ಅವರು ಪಾವಿತ್ರ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮೌಲ್ಯಾಧಾರಿತ ಚಿಂತನೆ ಬೆಳೆಸಿಕೊಳ್ಳಬೇಕು’ ಎಂದರು.
ನಿವೃತ್ತ ಶಿಕ್ಷಕರಾದ ಎಸ್.ಎಲ್.ರಾಘವೇಂದ್ರ, ಬಾಬುಗೌಡ ಪಾಟೀಲ್, ವನಜಾಕ್ಷಿ, ಸುರೇಶ್ ಎನ್, ಶಾರದಮ್ಮ, ಕುಮಾರ ಸ್ವಾಮಿಯವರಿಗೆ ಸನ್ಮಾನಿಸಿದರು.
ವಿದ್ಯಾರಣ್ಯಪುರ ತಾಲ್ಲೂಕು ಪಂಚಾಯಿತಿ ಇ.ಒ ಸುಧೀಪ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಉಪಾಧ್ಯಕ್ಷೆ ಸುನೀತಾ, ಮಮತ ಉದಯ್, ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು, ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್, ಟಿ.ಎ.ಪಿ.ಸಿ.ಎಂ.ಎಸ್‍ನ ಅಧ್ಯಕ್ಷ ಕಚ್ಚೋಡಿ ರಮೇಶ್, ಪಿ.ಎ.ಸಿ.ಎಸ್‍ನ ಅಧ್ಯಕ್ಷ ರಮೇಶ್ ಭಟ್, ಎಂ.ಎಚ್.ನಟರಾಜ್, ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರಪ್ಪ, ಉಪ ತಹಶೀಲ್ದಾರ್ ಪ್ರವೀಣ್, ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ದರಾಜು, ಶಾರದಾ, ಕೊಡುರು ರಾಜು, ಗುರುಮೂರ್ತಿ, ಶಶಿಧರ್, ದೀನೆಶ್ ಎಚ್.ಕೆ, ಶ್ರೀನಾಥ್, ನಾಗರಾಜ್, ವಿಜಯ್ ಕುಮಾರ್ ಟಿ.ಎಚ್ ಮತ್ತು ಶಿಕ್ಷಕರ ವಿವಿಧ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
ಹೃದಯ ಹೃದಯಗಳ ನಡುವಿನ ಮಾತುಕತೆಯೇ ಶಿಕ್ಷಣ:
‘ಕಲಿಯುಗದಲ್ಲಿ ಜನರು ಲಕ್ಷ್ಮೀ(ಹಣ)ಯನ್ನು ಒಲಿಸಿಕೊಳ್ಳಲು ಹೋಗಿ ಸರಸ್ವತಿ(ವಿದ್ಯೆ)ಯನ್ನು ದೂರ ಮಾಡುತ್ತಿದ್ದಾರೆ. ಹೃದಯ ಹೃದಯಗಳ ನಡುವಿನ ಮಾತುಕತೆಯೇ ಶಿಕ್ಷಣ. ವಿದ್ಯಾರ್ಥಿಗಳು ಬಿಳಿ ಬಣ್ಣದ ಖಾಲಿ ಹಾಳೆ ಇದ್ದಂತೆ ಅದರಲ್ಲಿ ಶಿಕ್ಷಕರು ಜ್ಞಾನವನ್ನು ಬರೆಯಬೇಕು’ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಬಿ.ಜಿ.ನಾಗೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.