ADVERTISEMENT

‘ಕಾಂಗ್ರೆಸ್‌ಗೆ ಬಿಜೆಪಿ– ಜೆಡಿಎಸ್ ಸಮಾನ ಎದುರಾಳಿ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:45 IST
Last Updated 18 ಜನವರಿ 2021, 2:45 IST
ಅಜ್ಜಂಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲಾಯಿತು.
ಅಜ್ಜಂಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲಾಯಿತು.   

ಅಜ್ಜಂಪುರ: ‘ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆ ಆಗುವಂತೆ ನೋಡಿಕೊಳ್ಳುವುದು ಜೆಡಿಎಸ್ ಪಕ್ಷದ ಒಂದಂಶದ ಕಾರ್ಯಕ್ರಮ. ಹಾಗಾಗಿ, ಬಿಜೆಪಿ ನೇರ ಎದುರಾಳಿ ಆಗಿದ್ದರೂ ಜನತಾದಳದ ಬಗ್ಗೆ ಎಚ್ಚರಿಕೆ ವಹಿಸುವ ಅನಿವಾರ್ಯತೆ ಪಕ್ಷಕ್ಕಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಬೆಂಬಲಿತ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅಂಶುಮಂತ್, ‘ಬಿಜೆಪಿ ಆಪರೇಶನ್ ಕಮಲವನ್ನು ಪಂಚಾಯಿತಿ ಹಂತಕ್ಕೂ ತಂದಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದವರನ್ನು ಹಣ, ಅಧಿಕಾರ, ಬೆದರಿಕೆ ತಂತ್ರದ ಮೂಲಕ ಸೆಳೆಯುವ ದುರಾಭ್ಯಾಸ ಮುಂದುವರೆಸಿದೆ’ ಎಂದು ಕಿಡಿಕಾರಿದರು.

ADVERTISEMENT

ಮಾಜಿ ಶಾಸಕ ಎಸ್. ಎಂ. ನಾಗರಾಜ್, ‘ಗ್ರಾಮ ಪಂಚಾಯಿತಿಗಳಿಗೆ ನೇರ ಅನುದಾನ ದೊರೆಯುತ್ತದೆ. ಅದನ್ನು ಬಳಸಿ, ಅಭಿವೃದ್ಧಿಗೆ ಶ್ರಮಿಸಿ. ಜನರ ಸಮಸ್ಯೆಗೆ ಸ್ಪಂದಿಸಿ’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್, ‘ಕ್ಷೇತ್ರದಲ್ಲಿ ಶಾಸಕರ ಸಾಧನೆ ಶೂನ್ಯ. ಈವರೆಗೂ ವಸತಿ ರಹಿತರಿಗೆ ಮನೆ ನೀಡಿಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿಲ್ಲ. ಕೇವಲ ಹಿಂಬಾಲಕರು ಮತ್ತು ಆಪ್ತರಿಗೆ ಮಾತ್ರ ಕೆಲಸ ಮಾಡಿಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ರಾಧಾ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಮುಖಂಡ ಸಂದೀಪ್, ರಸೂಲ್ ಖಾನ್, ಧ್ರುವಕುಮಾರ್, ಪದ್ಮರಾಜ್, ದೋರನಾಳು ಪರಮೇಶ್, ಗುರುಮೂರ್ತಿ, ಲೋಹಿತ್ ಇದ್ದರು.

ಗ್ರಾಮ ಪಂಚಾಯಿತಿಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮತ್ತು ಸೋಲು ಕಂಡ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.