ADVERTISEMENT

ಮುಳ್ಳಯ್ಯನಗಿರಿ: ದಿನಕ್ಕೆ 1,200 ವಾಹನ ಸೀಮಿತ

ಬೆಳಿಗ್ಗೆ, ಸಂಜೆ ತಲಾ 600 ವಾಹನ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 0:30 IST
Last Updated 16 ಜುಲೈ 2025, 0:30 IST
ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ವಾಹನಗಳ ಸಾಲು– ಸಂಗ್ರಹ ಚಿತ್ರ
ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ವಾಹನಗಳ ಸಾಲು– ಸಂಗ್ರಹ ಚಿತ್ರ   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಉಂಟಾಗುತ್ತಿರುವ ದಟ್ಟಣೆ ತಪ್ಪಿಸಲು ಮತ್ತು ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ತಡೆಯಲು ಜಿಲ್ಲಾಡಳಿತ ಮುಂದಾಗಿದೆ. ಲೆಕ್ಕವಿಲ್ಲದಷ್ಟು ವಾಹನಗಳು ಗಿರಿ ಏರಿ ಉಂಟಾಗುತ್ತಿರುವ ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರೂ ನರಳುತ್ತಿದ್ದು, ಇದನ್ನು ತಪ್ಪಿಸಲು ದಿನಕ್ಕೆ 1,200 ವಾಹನಗಳಿಗಷ್ಟೇ ಅವಕಾಶ ನೀಡಲು ನಿರ್ಧರಿಸಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರವಾಸೋದ್ಯಮ ನೀತಿ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನೊಂದು ವಾರದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ವಾರಾಂತ್ಯದಲ್ಲಿ ಅದರಲ್ಲೂ ಮಳೆಗಾಲದಲ್ಲಿ 3 ಸಾವಿರರಕ್ಕೂ ಹೆಚ್ಚು ಪ್ರವಾಸಿಗರ ವಾಹನಗಳು ಗಿರಿ ಭಾಗಕ್ಕೆ ಹೋಗುತ್ತಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರ, ಗಾಳಿಕೆರೆ, ಝರಿ ಜಲಪಾತ, ಹೊನ್ನಮ್ಮನಹಳ್ಳ ವೀಕ್ಷಣೆಗೆ ಜನ ಮುಗಿ ಬೀಳುತ್ತಿದ್ದಾರೆ. ಪರಿಸರದ ಸೊಬಗು ವೀಕ್ಷಣೆಯ ಬದಲು ಪ್ರವಾಸಿಗರು ದಟ್ಟಣೆಯಲ್ಲೇ ಸಿಲುಕಿ ನರಳುತ್ತಿದ್ದಾರೆ. ಇದನ್ನು ತಪ್ಪಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು. ಏಕಕಾಲದಲ್ಲಿ 600 ವಾಹನಗಳಿಗಷ್ಟೇ ಸೀಮಿತ ಮಾಡುವುದು ಸೂಕ್ತ ಎಂದು ನಿರ್ಧರಿಸಲಾಯಿತು.

ADVERTISEMENT

100 ಬೈಕ್‌, 100 ಸ್ಥಳೀಯ ಟ್ಯಾಕ್ಸಿ (ಜೀಪ್ ಮತ್ತು ಕಾರು), 50 ಟೆಂಪೊ ಟ್ರಾವೆಲರ್‌ಗಳೂ ಒಳಗೊಂಡಿವೆ. ಇನ್ನು 350 ಪ್ರವಾಸಿಗರ ಕಾರುಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಬೆಳಿಗ್ಗೆ 6ರಿಂದ 12 ಗಂಟೆ ತನಕ ಒಂದು ಹಂತ ಮತ್ತು ಮಧ್ಯಾಹ್ನ 2ರಿಂದ 5 ಗಂಟೆ ತನಕ ಎರಡನೇ ಹಂತದಲ್ಲಿ ತಲಾ 600 ವಾಹನಗಳಿಗೆ ಅವಕಾಶ ದೊರಕಲಿದೆ. ಅಂದರೆ ದಿನಕ್ಕೆ 1,200 ವಾಹನಗಳಿಗೆ ಮಾತ್ರ ಅವಕಾಶ ಸಿಗಲಿದೆ.

ಕೈಮರ ಚೆಕ್‌ಪೋಸ್ಟ್‌ನಲ್ಲಿ 600 ವಾಹನಗಳು ದಾಟಿದ ಬಳಿಕ ಗೇಟ್ ಬಂದ್ ಆಗಲಿದೆ. ಮಧ್ಯಾಹ್ನ 2ನೇ ಹಂತದಲ್ಲಿ ಮತ್ತೆ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಚೆಕ್‌ಪೋಸ್ಟ್‌ ದಾಟಿದ ಬಳಿಕ ಮುಳ್ಳಯ್ಯನಗಿರಿ ಅಥವಾ ಬಾಬಾಬುಡನ್‌ಗಿರಿ ಸೇರಿ ಯಾವುದೇ ಪ್ರವಾಸಿ ತಾಣಕ್ಕಾದರೂ ಜನ ಹೋಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿಗೆ ಜಿಲ್ಲಾಡಳಿತದಿಂದಲೇ ಮಿನಿ ಬಸ್‌ಗಳ ವ್ಯವಸ್ಥೆ ಮಾಡಲು ಆಲೋಚಿಸಲಾಗಿದೆ. ಕನಿಷ್ಠ ಪ್ರಯಾಣ ದರ ನಿಗದಿ ಮಾಡಿ ಪ್ರವಾಸಿಗರನ್ನು ಕರೆದೊಯ್ದು ವಾಪಸ್ ಕರೆ ತರುವ ವ್ಯವಸ್ಥೆಯನ್ನೂ ಶೀಘ್ರವೇ ಮಾಡಲಾguವುದು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಡಿವೈಎಸ್ಪಿ ಶೈಲೇಂದ್ರ, ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಸಚಿನ್, ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್‌ ಸಭೆಯಲ್ಲಿ ಭಾಗವಹಿಸಿದ್ದರು.

ವಾರಾಂತ್ಯದಲ್ಲಿ ಗಿರಿಭಾಗದಲ್ಲಿ ಉಂಟಾಗುತ್ತಿರುವ ದಟ್ಟಣೆ, ಪ್ರವಾಸಿಗರು ಅನುಭವಿಸುತ್ತಿರುವ ತೊಂದರೆ ಬಗ್ಗೆ ‘‍ಪ್ರಜಾವಾಣಿ’ ಸೋಮವಾರ ವಿಸ್ತೃತ ವರದಿ ಪ್ರಕಟಿಸಿತ್ತು.

ಮೀನಾ ನಾಗರಾಜ್
ಪ್ರವಾಸಿಗರು ಮತ್ತು ಸ್ಥಳೀಯರ ಹಿತದೃಷ್ಟಿಯಿಂದ ಗಿರಿ ಪ್ರದೇಶಕ್ಕೆ ವಾಹನಗಳ ಸಂಖ್ಯೆ ನಿರ್ಬಂಧಿಸುವುದು ಅನಿವಾರ್ಯ ಆಗಿದೆ
ಸಿ.ಎನ್.ಮೀನಾ ನಾಗರಾಜ್ ಜಿಲ್ಲಾಧಿಕಾರಿ

ಆನ್‌ಲೈನ್ ಬುಕ್ಕಿಂಗ್

ಮುಳ್ಳಯ್ಯನಗಿರಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಇನ್ನು ಮುಂದೆ ನೇರವಾಗಿ ಅವಕಾಶ ಇಲ್ಲ. ವೆಬ್‌ಸೈಟ್‌ ಮೂಲಕ ಆನ್‌ಲೈನಲ್ಲಿ ನಿಗದಿತ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ವಾಹನಗಳಿಗೆ ಮಾತ್ರ ಅವಕಾಶ ಸಿಗಲಿದೆ. ವೆಬ್‌ಸೈಟ್ ಸಿದ್ಧವಾಗುತ್ತಿದ್ದು ವಾರದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಕಾರುಗಳಿಗೆ ₹100 ಮಿನಿ ಬಸ್‌ಗಳಿಗೆ ₹200 ಮತ್ತು ಬೈಕ್‌ಗಳಿಗೆ ₹50 ದರ ನಿಗದಿ ಮಾಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಮಾಹಿತಿ ನೀಡಿದರು. ಮೊದಲು ನೋಂದಣಿ ಮಾಡಿಕೊಂಡು 600 ವಾಹನಗಳಿಗೆ ಅವಕಾಶ ದೊರಕಲಿದೆ. ಬೆಳಿಗ್ಗೆ ಅವಕಾಶ ಬೇಕೊ ಮತ್ತು ಮಧ್ಯಾಹ್ನ ಅವಕಾಶ ಬೇಕೊ ಎಂಬುದನ್ನು ಪ್ರವಾಸಿಗರು ಆಯ್ಕೆ ಮಾಡಿಕೊಳ್ಳಬಹುದು. ಸ್ಥಳೀಯ ಟ್ಯಾಕ್ಸಿ ಚಾಲಕರು ಕೂಡ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮೊದಲ 100 ಟ್ಯಾಕ್ಸಿಗಳಿಗೆ ಅವಕಾಶ ದೊರಕಲಿದೆ ಎಂದರು.

ಸ್ಥಳೀಯರಿಗೆ ಪಾಸ್

ಕೈಮರ ಚೆಕ್‌ಪೋಸ್ಟ್‌ ದಾಟಿದ ಬಳಿಕವೂ ಜನವಸತಿ ಮತ್ತು ಹೋಂಸ್ಟೇಗಳಿಗೆ ತೆರಳುವರಿಗೆ ಪ್ರತ್ಯೇಕ ಲೈನ್‌ ಮೂಲಕ ಅವಕಾಶ ದೊರಕಲಿದೆ. ಸ್ಥಳೀಯರಿಗೆ ಪಾಸ್ ಕೂಡ ನೀಡಲಾಗುವುದು ಎಂದು ಎಂ.ಆರ್.ಲೋಹಿತ್ ತಿಳಿಸಿದರು. ಪಾಸ್‌ ಪಡೆದುಕೊಳ್ಳಲು ಬುಧವಾರ ಪ್ರಕಟಣೆ ಹೊರಡಿಸಲಾಗುವುದು. ಆಧಾರ್ ಕಾರ್ಡ್‌ ವಾಸಸ್ಥಳ ದೃಢೀಕರಣ ಸಲ್ಲಿಸಿ ನಮ್ಮ ಇಲಾಖೆಯಿಂದ ಪಾಸ್ ಪಡೆದುಕೊಳ್ಳಬೇಕು. ಅವರಿಗೆ ನೇರವಾಗಿ ತೆರಳಲು ಅವಕಾಶ ಸಿಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.