ADVERTISEMENT

Basmati: ಬಯಲುಸೀಮೆ ಜಮೀನಲ್ಲಿ ಬಾಸುಮತಿ ಭತ್ತ

ಉತ್ತಮ ಇಳುವರಿ; ಲಾಭ ನಿರೀಕ್ಷೆಯಲ್ಲಿದ್ದಾರೆ ಪ್ರಗತಿಪರ ರೈತ ಪಾಳೇಗಾರ ಲಕ್ಷ್ಮಣ್‌

ಶಿವಗಂಗಾ ಚಿತ್ತಯ್ಯ
Published 27 ಮೇ 2025, 6:06 IST
Last Updated 27 ಮೇ 2025, 6:06 IST
ಚಳ್ಳಕೆರೆಯ ಚಿತ್ರಯ್ಯನಹಟ್ಟಿ ಪ್ರಗತಿ ಪರ ರೈತ ಯುವಪಾಳೇಗಾರ ಲಕ್ಷ್ಮಣ್ ಭತ್ತದ ಪೈರಿನ ಜೊತೆ
ಚಳ್ಳಕೆರೆಯ ಚಿತ್ರಯ್ಯನಹಟ್ಟಿ ಪ್ರಗತಿ ಪರ ರೈತ ಯುವಪಾಳೇಗಾರ ಲಕ್ಷ್ಮಣ್ ಭತ್ತದ ಪೈರಿನ ಜೊತೆ   

ಚಳ್ಳಕೆರೆ: ಬಯಲುಸೀಮೆಯಲ್ಲಿ ಬಾಸುಮತಿ ಭತ್ತ ಬೆಳೆದಿರುವ ಪ್ರಗತಿಪರ ರೈತ ಪಾಳೇಗಾರ ಲಕ್ಷ್ಮಣ್‌ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. 2 ಎಕರೆ ಜಮೀನಿನಲ್ಲಿ 70 ಕೆ.ಜಿ ತೂಕದ 65 ಬ್ಯಾಗ್‌ ಭತ್ತ ಬೆಳೆದು ದಾಖಲೆ ಸೃಷ್ಟಿಸಿದ್ದಾರೆ. 

ನಗರ ವ್ಯಾಪ್ತಿಯ ಚಿತ್ರಯ್ಯನಹಟ್ಟಿ ಪಾಳೇಗಾರ ಲಕ್ಷ್ಮಣ್‍ ಅವರು ತಮ್ಮ ತಾತ ತೋಡಿಸಿದ್ದ ಬಾವಿಯಲ್ಲಿ ಲಭ್ಯವಾದ ಅತ್ಯಲ್ಪ ನೀರಿನಲ್ಲಿ ಭತ್ತ, ರಾಗಿ, ಜೋಳದ ಜತೆಗೆ ಹಣ್ಣು, ತರಕಾರಿ ಬೆಳೆಯುವ ಮೂಲಕ ಕುಟುಂಬದ  ಕೃಷಿ ಪರಂಪರೆ  ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಬೆಂಗಳೂರು ಜಿ.ಕೆ.ವಿ.ಕೆ.ಯಲ್ಲಿ ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ಭತ್ತದ ವಿವಿಧ ತಳಿ ಹಾಗೂ ಬೆಳೆಯುವ ಪದ್ಧತಿ ವೀಕ್ಷಣೆ ಮಾಡಿದ ಪರಿಣಾಮ ಭತ್ತ ಚೆಲ್ಲುವ ಪದ್ಧತಿ ಅನುಸರಿಸಿ ಬಾಸುಮತಿ ಭತ್ತ ಬೆಳೆದಿದ್ದಾರೆ. ಜಿಲ್ಲೆಯ ಬಯಲು ಸೀಮೆ ಪ್ರದೇಶದಲ್ಲಿ ಸಾಮಾನ್ಯವಾಗಿ ಹಂಸ, ಚೆನ್ನಂಗಿ, ಮುಳ್ಳುನೆಲ್ಲು, ಕೆಂಪು ಅಕ್ಕಿ, ಮಸೂರಿ ಮುಂತಾದ ತಳಿಯ ಭತ್ತ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಬಾಸುಮತಿ ಭತ್ತ ಪ್ರಯೋಗಿಕವಾಗಿ ಬೆಳೆಯಲಾಗಿದೆ. 

ADVERTISEMENT

ಬೆಳೆಯುವ ವಿಧಾನ; ಭತ್ತದ ಬೀಜವನ್ನು ಗೋಣಿಚೀಲದಲ್ಲಿ ಕಟ್ಟಿ ನೀರು ತುಂಬಿದ ಡ್ರಮ್‍ನಲ್ಲಿ ರಾತ್ರಿ ನೆನೆ ಹಾಕಿ ಬೆಳಿಗ್ಗೆ ಬೀಜದ ಚೀಲ ಹೊರ ತೆಗೆಯಬೇಕು. ಮತ್ತೆ ರಾತ್ರಿ ನೆನೆ ಹಾಕಿ ಬೆಳಿಗ್ಗೆ ತೆಗೆಯಬೇಕು ಹೀಗೆ ನಾಲ್ಕು ದಿನಕ್ಕೆ ಬೀಜ ಮೊಳಕೆ ಹೊಡೆಯುತ್ತದೆ. ನೀರು ಹಾಯಿಸಿದ ಭೂಮಿ ನೇಗಿಲ ಬೇಸಾಯದ ಮೂಲಕ ಸಮತಟ್ಟಾದ ಕೆಸರು ಗದ್ದೆ ನಿರ್ಮಿಸಬೇಕು. ಆ ಕೆಸರು ಗದ್ದೆಗೆ ಹೊಂಗೆ, ಬೇವು, ತಂಗಟೆ ಮುಂತಾದ ಹಸಿರು ಸೊಪ್ಪಿನ ಜೊತೆಗೆ ಕೊಟ್ಟಿಗೆ ಗೊಬ್ಬರ ಹಾಕಬೇಕು ಎಂದು ಲಕ್ಷ್ಮಣ್‌ ಹೇಳುತ್ತಾರೆ.

10-15 ದಿನದ ನಂತರ ಮೊಳಕೆ ಒಡೆದ ಭತ್ತದ ಬೀಜಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ಪ್ರತಿ ಗದ್ದೆಗೂ ಒಂದೇ ಹಿಡಿತದಲ್ಲಿ ಕೈ ಮೂಲಕ ಮೊಳಕೆ ಚೆಲ್ಲಬೇಕು. ನಂತರ ಎರಡು ದಿನಕ್ಕೊಮ್ಮೆಯಂತೆ 45 ದಿನ ಬೆಳೆಗೆ ನೀರು ಹಾಯಿಸಬೇಕು. ಹೀಗೆ ನಿರ್ವಹಣೆ ಮಾಡಿದರೆ ಬೆಳೆ ಉತ್ತಮ ಇಳುವರಿ  ಬರುತ್ತದೆ. ಭತ್ತ ಕಟಾವಿಗೆ ಬಂದಾಗ ಬೆಳೆಗೆ 10 ದಿನ ನೀರು ಹಾಯಿಸಬಾರದು ಎಂಬುದು ಅವರ ಸಲಹೆ.

ಬೇಸಾಯ, ಗೊಬ್ಬರ, ನೀರು ಹಾಗೂ ಕೂಲಿ ಸೇರಿ ಎರಡು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಕನಿಷ್ಠ ₹ 1 ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತದೆ. ಕಾಲಕಾಲಕ್ಕೆ ನೀರು ಹಾಯಿಸಿ, ಉತ್ತಮ ನಿರ್ವಹಣೆ ಮಾಡಿ ಬೆಳೆಯನ್ನು ಮಕ್ಕಳ ರೀತಿಯಲ್ಲಿ ಕಾಪಾಡಿದರೆ ಎಕರೆಗೆ  ₹ 2– 3 ಲಕ್ಷ ಆದಾಯ ದೊರೆಯುತ್ತದೆ.

ಬಾಸುಮತಿ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಬೇಡಿಕೆ ಇದೆ. ಬಾಸುಮತಿ ಬಿತ್ತನೆ ಬೀಜ ಕ್ವಿಂಟಲ್‍ಗೆ ₹ 18,000 ಇದೆ. ಬಳ್ಳಾರಿ, ರಾಯಚೂರು, ಅನಂತಪುರ ಭಾಗದಿಂದ ಹಲವು ರೈತರು ಬಾಸುಮತಿ ಬಿತ್ತನೆ ಬೀಜ ನೀಡುವಂತೆ ಲಕ್ಷ್ಮಣ್‌ ಅವರನ್ನು ಒತ್ತಾಯಿಸಿದ್ದಾರೆ. ಹೀಗಾಗಿ ಎರಡು ಎಕರೆಯಲ್ಲಿ ಬೆಳೆದಿರುವ ಭತ್ತದಿಂದ ಕನಿಷ್ಠ ₹ 5 ಲಕ್ಷ ದೊರೆಯುತ್ತದೆ.

‘ಬಾಸುಮತಿ ಭತ್ತಕ್ಕೆ ಈ ಬಾರಿ ಯಾವುದೇ ತರಹದ ಕೀಟಬಾಧೆ ಕಾಣಿಸಿಕೊಳ್ಳಲಿಲ್ಲ. ಇಳುವರಿ ಮತ್ತು ಉತ್ತಮ ಬೆಲೆಯೂ ಸಿಕ್ಕಿದೆ. ಈ ತಳಿ ಬೆಳೆದ ಚಿತ್ರದುರ್ಗ ಜಿಲ್ಲೆಗೆ ಲಕ್ಷ್ಮಣ್‌ ಅವರು ಮೊದಲಿಗರಾಗಿದ್ದಾರೆ. ಶ್ರೀಪದ್ಧತಿ, ಚೆಲ್ಲುವ ಪದ್ಧತಿಯಲ್ಲಿ ಭತ್ತ ಬೆಳೆಯುವ ರೈತರಿಗೆ ಇಲಾಖೆಯಿಂದ ಸಹಾಯಧನ ನೀಡಲಾಗುವುದು‘ ಎಂದು ಕೃಷಿ ಸಹಾಯಕ ನಿರ್ದೇಶಕ ಅಶೋಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.