ADVERTISEMENT

ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್‌ನ ‘ಡ್ರಾಮಾ ಪಾರ್ಟ್-2’: ಬಿ.ಸಿ.ಪಾಟೀಲ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 4:36 IST
Last Updated 27 ಫೆಬ್ರುವರಿ 2022, 4:36 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಚಿತ್ರದುರ್ಗ: ‘ಸಿದ್ದರಾಮಯ್ಯ ಅವರಿಗೆ ತಮ್ಮ ಶಕ್ತಿ ಏನೆಂದು ತೋರಿಸಲು ಡಿ.ಕೆ.ಶಿವಕುಮಾರ್‌ ಅವರು ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ ನಡೆಸುತ್ತಿರುವ ‘ಡ್ರಾಮಾ ಪಾರ್ಟ್–2’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ವ್ಯಂಗ್ಯವಾಡಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ. ಅದು ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ. ಆದರೆ, ಮಾಡಲು ಕೆಲಸವಿಲ್ಲದ ಕಾಂಗ್ರೆಸ್‌ನವರು ಈಗ ಸುಖಾಸುಮ್ಮನೆ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಕುಟುಕಿದರು.

‘ಜನರ ಬಗ್ಗೆ ಕಾಳಜಿಯಿಲ್ಲದ ಕಾಂಗ್ರೆಸ್‌ನವರು ಆರು ದಿನ ಅಧಿವೇಶನದ ಸಮಯ ಹಾಳು ಮಾಡಿದರು. ಅವರಿಗೆ ನಿಜಕ್ಕೂ ಜವಾಬ್ದಾರಿ ಇದ್ದಿದ್ದರೆ ಸದನ ಒಳಗೆ ಜನರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಹೊರಗೆ ಧರಣಿ ನಡೆಸುತ್ತಿದ್ದರು’ ಎಂದರು.

ADVERTISEMENT

‘ರಾಜ್ಯದಲ್ಲಿ 2.50 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲಾಗಿದೆ. ಹೆಚ್ಚುವರಿ ಖರೀದಿಗೆ ರೈತರಿಂದ ಒತ್ತಡ ಹೆಚ್ಚಾದ ಕಾರಣ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಕೇಂದ್ರದಿಂದ ಅನುಮತಿ ಬಂದ ತಕ್ಷಣ ಖರೀದಿ ಪ್ರಕ್ರಿಯೆ ಆರಂಭವಾಗುತ್ತದೆ’ ಎಂದು ಸಚಿವರು ಪ್ರಶ್ನೊಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.