ಹೊಸದುರ್ಗ: ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರಿನ ಸಮೀಪ ನೆಲೆಸಿರುವ ಹಾರನಕಣಿವೆ ರಂಗನಾಥ ಸ್ವಾಮಿಯ ಅಂಬಿನೋತ್ಸವ ಶುಕ್ರವಾರ ಸಾವಿರಾರು ಭಕ್ತರ ನಡುವೆ ಸಡಗರದಿಂದ ನಡೆಯಿತು.
ತಾಲ್ಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಗುರುವಾರ ರಾತ್ರಿಯ ಅಶ್ವಯುಜ ಶುದ್ಧ ದಶಮಿ ಸಮಯದಲ್ಲಿ ಗಂಗಾಪೂಜೆ ಹಾಗೂ ಕುದುರೆ ಪೂಜೆ ನೆರವೇರಿಸಲಾಯಿತು. ಶುಕ್ರವಾರ ಬೆಳಿಗ್ಗೆ ಹಾರನಕಣಿವೆ ಕ್ಷೇತ್ರಕ್ಕೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಕರೆತಂದು, ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ನೆರವೇರಿಸಲಾಯಿತು.
ದೇವರನ್ನು ಬನ್ನಿ ಮಂಟಪದೆಡೆಗೆ ಕರೆದೊಯ್ಯಲಾಯಿತು. ನಂತರ ಬನ್ನಿ ಮರದ ಕಟ್ಟೆಯ ಸಮೀಪ ನೆಟ್ಟಿದ್ದ ಬಾಳೆಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆಕಂದು ಕಡಿಯಲಾಯಿತು. ಬನ್ನಿ ಮುಡಿಯುವ ಮೂಲಕ ಅಂಬಿನೋತ್ಸವ ಸಂಪನ್ನಗೊಂಡಿತು.
ವಿಷ ಜಂತುಗಳ ಭಯ ನಿವಾರಕ: ರಂಗನಾಥಸ್ವಾಮಿಯನ್ನು ವಿಷಜಂತುಗಳ ಭಯ ನಿವಾರಕ ಎಂತಲೂ ಕರೆಯುತ್ತಾರೆ. ಮನೆ, ಹೊಲ, ಗದ್ದೆಗಳಲ್ಲಿ ವಿಷ ಜಂತುಗಳು ಕಾಣಿಸಿಕೊಂಡಾಗ ಅಥವಾ ಕಚ್ಚಿದಾಗ, ಭಕ್ತರು ಸ್ವಾಮಿಯ ಸನ್ನಿಧಿಗೆ ಬಂದು ಹುಳಗಳನ್ನು ಅರ್ಪಿಸುತ್ತೇವೆ ಎಂದು ಹರಕೆ ಕಟ್ಟಿಕೊಂಡವರು ಅಂಬಿನೋತ್ಸವದ ದಿನ ಬಂದು ಚಿನ್ನ, ಬೆಳ್ಳಿ, ತಾಮ್ರದ ಹಾವು, ಚೇಳು, ಜರಿಗಳನ್ನು ಸರದಿ ಸಾಲಲ್ಲಿ ನಿಂತು ಹುಂಡಿಯಲ್ಲಿ ಹಾಕುವ ಪ್ರತೀತಿ ಇಂದಿಗೂ ನಡೆದುಕೊಂಡುಬಂದಿದೆ.
ಭಕ್ತರು ಗೊನೆಗಟ್ಟಲೆ ಬಾಳೆಹಣ್ಣು, ಸಕ್ಕರೆ ತಂದು ಹಸಿರು ಗಿಡಕ್ಕೆ ರಾಸಾಯನ ಹಾಕಿ, ನೈವೇದ್ಯ ಮಾಡುವ ಮೂಲಕ ಮತ್ತೊಂದು ರೀತಿಯ ಹರಕೆ ತೀರಿಸುತ್ತಾರೆ. ಭಕ್ತರು ತಂದ ಸಕ್ಕರೆ, ಬಾಳೆಹಣ್ಣನ್ನು ಹಸಿರು ಗಿಡಗಳ ಬುಡದಲ್ಲಿ ಬಾಳೆ ಎಲೆ ಹಾಕಿ ಪೂಜೆ ಮಾಡಿದ ಬಳಿಕ, ದಾಸಯ್ಯನಿಗೆ ಮೊದಲು ನೀಡಿ, ನಂತರ ಅಲ್ಲಿರುವ ಜನರಿಗೆ ಹಂಚುವುದು ಜಾತ್ರೆಯ ಮತ್ತೊಂದು ವಿಶೇಷವಾಗಿದೆ.
ಸೆ. 4ರಂದು ಹಾರನಕಣಿವೆ ಶ್ರೀರಂಗನಾಥ ಸ್ವಾಮಿಯ ಉತ್ಸವಮೂರ್ತಿಗೆ ಮಹಾಮಂಗಳಾರತಿ ನಡೆಯಲಿದೆ. 5ರಂದು ರಾತ್ರಿ ದಾಸೋಹ, ಹೂವಿನ ಪಲ್ಲಕ್ಕಿ ಮತ್ತು ಉತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಸ್ವಾಮಿಯ ಅಂಬಿನೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕ ಬಿ.ಜಿ.ಗೋವಿಂದಪ್ಪ, ತಹಶೀಲ್ದಾರ್ ತಿರುಪತಿ ಪಾಟೀಲ್, ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಾಥ್ ಹಾಗೂ ನಗರಸಭೆ ಮಾಜಿ ಸದಸ್ಯ ಪ್ರೇಮ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.