ADVERTISEMENT

ನಿರ್ಲಕ್ಷ್ಯದ ಫಲ ಉಣ್ಣಲಿದೆ ಬಿಜೆಪಿ- ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 9:26 IST
Last Updated 4 ಆಗಸ್ಟ್ 2021, 9:26 IST

ಚಿತ್ರದುರ್ಗ: ನೂತನ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಿದ ಬಿಜೆಪಿ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಅನುಭವಿಸಲಿದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಭೋವಿ ಗುರುಪೀಠದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಸಮುದಾಯದ ನಾಲ್ವರು ಶಾಸಕರು ಹಾಗೂ ಒಬ್ಬರು ವಿಧಾನಪರಿಷತ್ ಸದಸ್ಯರು ಬಿಜೆಪಿಯಲ್ಲಿದ್ದಾರೆ. ಭೋವಿ ಸೇರಿದಂತೆ ಯಾವುದೇ ಸಣ್ಣ ಸಮುದಾಯಕ್ಕೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಅಂದರೆ ಕೇವಲ ಉತ್ತರ ಭಾರತದ ಪಕ್ಷ ಎಂಬ ಹಣೆಪಟ್ಟಿ ಇತ್ತು. 2008ರಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚನೆಗೆ ಶಕ್ತಿ ಇಲ್ಲದ ವೇಳೆ ಭೋವಿ ಸಮಾಜದ ಪಕ್ಷೇತರರು ಕೈ ಹಿಡಿದಿದ್ದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಬರಲು ಭೋವಿ ಸಮಾಜವೇ ಕಾರಣ. ಬಿಜೆಪಿ ಅಸ್ತಿತ್ವದಲ್ಲಿ ಇರುವವರೆಗೂ ಭೋವಿ ಸಮಾಜದ ಋಣದಲ್ಲಿ ಇರಬೇಕಿತ್ತು ಎಂದು ಬೇಸರ ಹೊರಹಾಕಿದರು.

ADVERTISEMENT

ಪಕ್ಷಕ್ಕಾಗಿ ದುಡಿದ ಕಟ್ಟಾಳುಗಳು ಹಾಗೂ ಹಿರಿಯ ನಾಯಕರು ಪಕ್ಷದಲ್ಲಿ ಇದ್ದಾರೆ. ನಮ್ಮ ಸಮಾಜಕ್ಕೆ ಮಲತಾಯಿ ಧೋರಣೆ ಆಗುತ್ತಿದೆ. ಅರವಿಂದ ಲಿಂಬಾವಳಿ ಅವರಿಗೆ ಮಂತ್ರಿ ಸ್ಥಾನ ನೀಡಿ, ಈಗ ಕೈ ಬಿಟ್ಟಿದ್ದು ಸರಿಯಲ್ಲ ಎಂದರು.

ಇಬ್ಬರೂ ಮಂತ್ರಿಗಳು ಇರುತ್ತಾರೆ ಎಂಬ ಚರ್ಚೆ ನಡೆದಿತ್ತು. ಭೋವಿ ಸಮಾಜಕ್ಕೆ ಒಂದು ಮಂತ್ರಿ ಸ್ಥಾನವೂ ನೀಡದಿರುವುದು ಖಂಡನೀಯ. ಸಚಿವ ಸಂಪುಟ ಅನುಭವ ಮಂಟಪದ ರೀತಿಯಲ್ಲಿ ಇರಬೇಕು. ಬ್ರಾಹ್ಮಣರ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಬಿಜೆಪಿಗೆ ಇದು ಸಕಾಲವಾಗಿತ್ತು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.