ADVERTISEMENT

ಜಾತಿ ಸಮೀಕ್ಷೆ | ವೀರಶೈವ ಮಹಾಸಭಾ‌ದಿಂದ ಅನಗತ್ಯ ಗೊಂದಲ‌‌: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 14:12 IST
Last Updated 16 ಸೆಪ್ಟೆಂಬರ್ 2025, 14:12 IST
ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ   

ಚಿತ್ರದುರ್ಗ: ‘ಜಾತಿ ಮತ್ತು ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿ ಎಂದು ಹೇಳುವ ಮೂಲಕ ವೀರಶೈವ ಮಹಾಸಭಾ‌ ಅನಗತ್ಯ ಗೊಂದಲ‌‌ ಸೃಷ್ಟಿಸುತ್ತಿದೆ. ಆದ್ದರಿಂದ ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಏನು ನಮೂದು ಮಾಡಬೇಕು ಎಂಬ ಬಗ್ಗೆ ಸೆ. 17ರಂದು ಸ್ಪಷ್ಟ ನಿರ್ಧಾರ ತಗೆದುಕೊಳ್ಳುತ್ತೇವೆ’ ಎಂದು ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.

‘ಪಂಚ ಪೀಠದವರು ಲಿಂಗಾಯತರು ಹಿಂದೂ ಧರ್ಮದ ಭಾಗ ಎಂದು ಹೇಳುತ್ತಾರೆ. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂಬುದಾಗಿ ಬರೆಸಲು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸಭೆಯಲ್ಲಿ ಪಂಚಮಸಾಲಿ ಸಮುದಾಯದ ಮೂರೂ ಪೀಠಗಳ ಸ್ವಾಮೀಜಿಗಳು ಮತ್ತು ಪಂಚಮಸಾಲಿ ಮಠಗಳ 80ಕ್ಕೂ ಅಧಿಕ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಅಲ್ಲಿ ನಿರ್ಧಾರ ಪ್ರಕಟಿಸುತ್ತೇವೆ. ಕಳೆದ ಬಾರಿ ನಡೆಸಲಾದ ಸಮೀಕ್ಷೆಯಲ್ಲಿ ಲಿಂಗಾಯತರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಈಗಲೂ ಹಲವು ಜಾತಿಗಳ ಹೆಸರು ತಪ್ಪಾಗಿ ನೀಡಿ ಹಿಂದುಳಿದ ಆಯೋಗದಿಂದ ಮತ್ತೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಹಾಗಾಗಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು’ ಎಂದರು.

ADVERTISEMENT

‘ಬಸವ ಸಂಸ್ಕೃತಿ ಅಭಿಯಾನದಲ್ಲಿ ಸ್ವಾಮೀಜಿಗಳು ಬಸವಾದಿ ಶರಣರ ತತ್ವವನ್ನು ತಿಳಿಸಲಿ. ಆದರೆ ಹಿಂದೂಗಳನ್ನು, ಗಣೇಶೋತ್ಸವವನ್ನು ಬೈಯುವುದು ಬೇಡ. ಹಿಂದೂ ಧರ್ಮದಲ್ಲಿ ನಮಗೆ ಎಲ್ಲವೂ ಸಿಗುತ್ತಿದೆ. ಆದರೆ, ಲಿಂಗಾಯತ ಧರ್ಮದ ಚಳವಳಿ ಮಾಡುವವರು ಕೇಂದ್ರ ಸರ್ಕಾರದ ಬಳಿಗೆ ಹೋಗಿ ಕೇಳಿಲ್ಲ. ಲಿಂಗಾಯತರಲ್ಲಿ ಬಹುತೇಕರು ಲಿಂಗ ಪೂಜೆ ಬಿಟ್ಟಿದ್ದಾರೆ. ಅನೇಕರು ಮಾಂಸಾಹಾರ ಸೇವನೆ ಮಾಡುತ್ತಿದ್ದಾರೆ. ನಾವು ಲಿಂಗಪೂಜೆ, ಅಹಿಂಸಾ ತತ್ವ ಪಾಲಿಸುವಂತೆ ಹೇಳಬೇಕಿದೆ. ನಮಗೆ ಹಿಂದೂ ಧರ್ಮದಿಂದ ಒಳಿತಾಗಿದೆ’ ಎಂದು ತಿಳಿಸಿದರು.

ನಾವು ತೃತೀಯ ಲಿಂಗಿಗಳಾಗಬೇಕಾ?

‘ಪ್ರತ್ಯೇಕ ಧರ್ಮದ ಮಾನ್ಯತೆ ದೊರೆಯುವ ಮುನ್ನ ಜೈನರು ಮತ್ತು ಸಿಖ್ಖರು ಹಿಂದೂ ಜೈನ, ಹಿಂದೂ ಸಿಖ್‌ ಎಂದು ಬರೆಸುತ್ತಿದ್ದರು. ವೀರಶೈವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗುವುದಾದರೆ ಅಧಿಕೃತವಾಗಿ ಅದೇ ಧರ್ಮವನ್ನು ಬರೆಸೋಣ. ಈಗ ನಾವು ಹಿಂದೂಗಳು ಎಂಬ ಸ್ಪಷ್ಟತೆ ಇರುವುದರಿಂದ ಅದನ್ನೇ ಬರೆಸೋಣ’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ಹಿಂದೂ ಅಥವಾ ಲಿಂಗಾಯತ ಎಂದು ಬರೆಸದಿದ್ದರೆ ಇತರೆ ಎಂದು ಬರೆಸಲು ಅವಕಾವಿದೆಯಲ್ಲ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ರಾಜ್ಯ ಸರ್ಕಾರವೇ ಹೇಳಿದಂತೆ ಇದು ಧರ್ಮದ ಸಮೀಕ್ಷೆಯಲ್ಲ. ಇತರೆ ಎಂದು ಬರೆಸಿ ನಾವು ತೃತೀಯ ಲಿಂಗಿಗಳಾಗಬೇಕಾ?, ಇತರೆ ಎಂಬುದು ಯಾವುದರಲ್ಲಿ ಗಣನೆಗೆ ಬರಲಿದೆ? ರಾಜ್ಯ ಸರ್ಕಾರ ಇತರೆ ಎಂದು ಬರೆಸಲು ಅವಕಾಶ ನೀಡಿರುವುದು ಹಿಂದೂಗಳನ್ನು ಒಡೆಯುವ ಷಡ್ಯಂತ್ರ’ ಎಂದು ಆರೋಪಿಸಿದರು.

ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡಿಸಿ, ಹಿಂದೂಗಳನ್ನು ಒಡೆಯುವಂಥ ಷಡ್ಯಂತ್ರ ನಡೆಯುತ್ತಿದೆ. ಜಗತ್ತಿನಾದ್ಯಂತ ಮುಸ್ಲಿಮರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಲಂಡನ್‌ನಲ್ಲಿ ಮೂಲ ನಿವಾಸಿಗಳು ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ ಯಾವುದೇ ವಿಷಯದಲ್ಲಿ ಸ್ಪಷ್ಟತೆ ಇರಬೇಕು. ತೊಂದರೆಗಳು ಇರಬಾರದು. ಯಾರು ಗೊಂದಲದಲ್ಲಿದ್ದಾರೋ ಅವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಯಾರಿಗೆ ಸ್ಪಷ್ಟತೆ ಇದೆಯೋ ಅವರು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.