
ಹೊಳಲ್ಕೆರೆ: ತಾಲ್ಲೂಕಿನ ಚೀರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಶಾಲೆಯ ಅಂಗಳದಲ್ಲಿ ತಾವೇ ಬೆಳೆದ ಕಬ್ಬನ್ನು ಬಳಸಿ ವಿದ್ಯಾರ್ಥಿಗಳು ಸ್ವಾಗತ ಕಮಾನು ನಿರ್ಮಿಸಿದ್ದರು. ಮತ್ತೊಂದೆಡೆ ರಾಗಿ ಧಾನ್ಯದ ರಾಶಿ ಹಾಕಿ ಪೂಜೆ ಸಲ್ಲಿಸಲಾಯಿತು. ಶಾಲೆಯ ಆವರಣಕ್ಕೆ ಹಸು ತಂದು ಗೋಪೂಜೆ ಸಲ್ಲಿಸಲಾಯಿತು. ಸಾಂಕೇತಿಕವಾಗಿ ಮಡಿಕೆಯಿಂದ ಹಾಲು ಕಾಯಿಸಿ ಉಕ್ಕಿಸಲಾಯಿತು. ಬಾಲಕಿಯರು ಸೀರೆ, ರವಿಕೆ, ಬಾಲಕರು ಪಂಚೆ, ಜುಬ್ಬಾ, ಟುವೆಲ್ ಹಾಕಿಕೊಂಡು ಸಂಭ್ರಮಿಸಿದರು.
ವಿದ್ಯಾರ್ಥಿಗಳೊಂದಿಗೆ ಪೋಷಕರೂ ಸುಗ್ಗಿಯ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಶಾಲೆಯ ಅಂಗಳದಲ್ಲಿ ಬಣ್ಣದ ರಂಗೋಲಿ ಬಿಡಿಸಿ ಅಲಂಕರಿಸಲಾಗಿತ್ತು. ಪೂಜೆಯ ನಂತರ ಎಳ್ಳು, ಬೆಲ್ಲ, ಕಬ್ಬು ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
‘ಮಕ್ಕಳಿಗೆ ಪಠ್ಯದಲ್ಲಿನ ಶಿಕ್ಷಣ ಕೊಡುವುದರ ಜತೆಗೆ ನಮ್ಮ ಕಲೆ, ಸಂಸ್ಕೃತಿ, ಹಬ್ಬ, ಹರಿದಿನಗಳು, ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಆಚರಣೆಗಳನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ನಮ್ಮದು ಪುಟ್ಟ ಶಾಲೆಯಾದರೂ ವಿಜೃಂಭಣೆಯಿಂದ ಸಂಕ್ರಾಂತಿ ಆಚರಿಸಿದ್ದೇವೆ’ ಎಂದು ಮುಖ್ಯಶಿಕ್ಷಕಿ ಎ.ಎಸ್.ನಳಿನಾ ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಅಜ್ಜಯ್ಯ, ಜಗದೀಶ್, ಶಿಲ್ಪಾ, ರೂಪಾ, ನೇತ್ರಾವತಿ, ಜ್ಯೋತಿ, ಕೀರ್ತಿ, ಮಂಜಮ್ಮ, ಮುರುಳಿ, ನಾಗರಾಜ್, ಚಂದ್ರಶೇಖರ್, ಸಹಶಿಕ್ಷಕಿ ಶಾರದಾ, ಪೋಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.